ಪಡುಬಿದ್ರಿ: ಕಾಪು ಮಜೂರು ಪರಿಸರದಲ್ಲಿ ಕಲಬೆರಕೆ ಜೇನು ತುಪ್ಪ ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ರೋಹನ್, ಕ್ರಾಂತಿ, ವಿಕಾಸ್, ಬಾದ್‌ಷಾ ಎಂಬುವರನ್ನು ಸೋಮವಾರ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಉಡುಪಿ ಬೀಡಿನಗುಡ್ಡೆಯಲ್ಲಿ ವಾಸವಿರುವ ಆರೋಪಿಗಳು ಒಂದು ತಿಂಗಳ ಹಿಂದೆ ಮಜೂರು ಪರಿಸರದಲ್ಲಿ ಜೇನು ಮಾರಾಟ ಮಾಡಿದ್ದು, ಈ ತಂಡದಿಂದ ಸ್ಥಳೀಯರು ಜೇನು ತುಪ್ಪ ಖರೀದಿಸಿದ್ದರು. ಕೆಲವು ದಿನಗಳ ಬಳಿಕ ಅದು ಕಲಬೆರಕೆ ಎಂದು ಗೊತ್ತಾಗಿದೆ.
ಸೋಮವಾರ ಈ ತಂಡ ಮತ್ತೆ ಮಜೂರಿಗೆ ಬಂದು ಜೇನು ತುಪ್ಪ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸ್ಥಳೀಯರು ತಡೆದು ವಿಚಾರಿಸಿದಾಗ ಜೇನು ತುಪ್ಪಕ್ಕೆ ಬೇರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲೇ ಜೇನು ತುಪ್ಪ ಮಾರಾಟ ಮಾಡುತ್ತಿದ್ದೇವೆ. ಬೆಲ್ಲ ಸಕ್ಕರೆ ಹೊರತು ಪಡಿಸಿ ಬೇರೇನೂ ಮಿಶ್ರಣ ಮಾಡಿಲ್ಲ ಎಂದು ತಿಳಿಸಿದ್ದಾರೆ. ಕಲಬೆರಕೆ ಜೇನು ತುಪ್ಪ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸ್ಥಳೀಯರು ಕಾಪು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸಿ ಮುನ್ನೆಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.