More

    ಅಡಕೆ ತೋಟ ದತ್ತು ಪಡೆಯಿರಿ

    ಶಿವಮೊಗ್ಗ: ಸಾಗರ, ಹೊಸನಗರ ಮತ್ತು ಸೊರಬ ತಾಲೂಕುಗಳಲ್ಲಿ ಅಡಕೆಗೆ ಬಂದಿರುವ ಎಲೆಚುಕ್ಕೆ ರೋಗವನ್ನು ತೋಟಗಳನ್ನು ದತ್ತು ತೆಗೆದುಕೊಂಡು ಇಲಾಖೆಯಿಂದಲೇ ರೋಗ ನಿಯಂತ್ರಣ ಮಾಡಿಕೊಡಬೇಕೆಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ತೋಟಗಾರಿಕೆ ಉಪನಿರ್ದೇಶಕ ಜಿ.ಎನ್.ಪ್ರಕಾಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.
    ನಮ್ಮ ಪ್ರಾಂತ್ಯದಲ್ಲಿ ಅಡಕೆ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದು, ಕಳೆದೆರಡು ವರ್ಷಗಳಿಂದ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಪಂನ 400, ಸಂಕಣ್ಣ ಶಾನುಭೋಗ್ ಗ್ರಾಪಂನ 500, ಕುದುರೂರು ಗ್ರಾಪಂನ 200, ಉಳ್ಳೂರು ಗ್ರಾಪಂನ 40, ಕಲ್ಮನೆ ಗ್ರಾಪಂನ 10 ಕುಟುಂಬ ಸೇರಿ ಎಲ್ಲರ ಅಡಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿದೆ. ತೋಟಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಶತಪ್ರಯತ್ನ ಪಡುತ್ತಿದ್ದಾರೆ ಎಂದರು.
    ಕಳೆದ ವರ್ಷ ತೋಟಗಾರಿಕೆ ಇಲಾಖೆಯಿಂದ ಉಚಿತವಾಗಿ ಔಷಧ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲೆಚುಕ್ಕೆ ರೋಗ ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು ಅನೇಕ ತೋಟಗಳು ನಾಶಗೊಂಡಿವೆ. ಬೆಳೆಗಾರರು ಜೀವನ ಮಾಡುವುದು ಕಷ್ಟವಾಗಿದೆ. ಹಾಗಾಗಿ ತೋಟಗಾರಿಕೆ ಇಲಾಖೆ ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ನೆರವಾಗಬೇಕು. ಜತೆಗೆ ಇನ್ನೂ ಹೆಚ್ಚಿನ ಔಷಧವನ್ನು ಸಿಂಪಡಣೆಗೆ ನೀಡಬೇಕು ಎಂದು ಮನವಿ ಮಾಡಿದರು.
    ಸಾಗರ ಪ್ರಾಂತೀಯ ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಕ, ಬಸವರಾಜ್ ದೊಂಬೆಕೊಪ್ಪ, ಮಾಮ್‌ಕೋಸ್ ಉಪಾಧ್ಯಕ್ಷ ಯು.ಎಚ್.ರಾಮಪ್ಪ, ಮಹೇಶ್ ಹುಲ್ಕುಳಿ, ದಿನೇಶ್ ಬರದಳ್ಳಿ, ನಾಗರಾಜ್ ಬೇಲೂರು, ಲಕ್ಷ್ಮೀನಾರಾಯಣ್, ಎಚ್.ಆರ್.ತೀರ್ಥೇಶ್, ಮಂಜುನಾಥ್ ದೊಂಬೆಕೊಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts