More

    ಮೈದುಂಬಿದ ಅಡ್ಕಸ್ಥಳ ಹೊಳೆ

    ಪುರುಷೋತ್ತಮ ಪೆರ್ಲ ಕಾಸರಗೋಡು

    ಎಲ್ಲೆಡೆ ನೀರಿನ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮೊರೆಯಿಡುವ ಇಂದಿನ ಕಾಲಘಟ್ಟದಲ್ಲಿ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಪೆಲ್ತಾಜೆ ಪ್ರದೇಶದ ಕಾರ್ಮಿಕರ ತಂಡವೊಂದು ಸದ್ದಿಲ್ಲದೆ ಜಲಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
    ಸರ್ಕಾರದ ಚಿಕ್ಕಾಸೂ ಪಡೆಯದೆ ಅಡ್ಕಸ್ಥಳ ಹೊಳೆಗೆ ಪೆಲ್ತಾಜೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟ ಕಟ್ಟುವ ಮೂಲಕ ಈ ಕೃಷಿಕರು ಆಧುನಿಕ ಭಗೀರಥರೆನಿಸಿಕೊಂಡಿದ್ದಾರೆ. ಮಳೆ ದೂರವಾಗುತ್ತಿದ್ದಂತೆ ಹೊಳೆ, ತೋಡುಗಳಲ್ಲಿ ನೀರಿನ ಹರಿವು ಕಡಿಮೆಯಾಗುವ ಸಂದರ್ಭ ನಾಡಿನೆಲ್ಲೆಡೆ ಕೃಷಿಕರು ಕಟ್ಟ ಕಟ್ಟುವ ಸಿದ್ಧತೆ ನಡೆಸುತ್ತಾರೆ. ಆದರೆ ಕೃಷಿಕರು ನಿರ್ಮಿಸುವ ತಾತ್ಕಾಲಿಕ ಕಟ್ಟಗಳಿಗೆ ಸರ್ಕಾರದಿಂದ ಯಾವುದೇ ನೆರವು ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಶಾಶ್ವತ ತಡೆಗೋಡೆ, ವಿಸಿಬಿ ನಿರ್ಮಾಣಕ್ಕೆ ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದರೂ ಇವುಗಳಲ್ಲಿ ನೀರು ದಾಸ್ತಾನುಗೊಳ್ಳದೆ ಕೃಷಿಕರಿಗೆ ಪ್ರಯೋಜನಕ್ಕೆ ಬಾರದ ಸ್ಥಿತಿಯಿದೆ.

    ಆದರೆ ಪಂಚಾಯಿತಿಯ 15ನೇ ವಾರ್ಡು ಪ್ರದೇಶದ ಆರು ಮಂದಿ ಕಾರ್ಮಿಕರ ತಂಡ ಈ ಸಾಹಸಕ್ಕೆ ಕೈಹಾಕಿದೆ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ತಮ್ಮ ಕೆಲಸ ಬಿಟ್ಟು ಹೊಳೆಗೆ ಅಡ್ಡ ತಡೆಗೋಡೆ ನಿರ್ಮಿಸುವ ಮೂಲಕ ಈ ಪ್ರದೇಶದ ಐವತ್ತಕ್ಕೂ ಹೆಚ್ಚು ಕೃಷಿಕರಿಗೆ ಪ್ರಯೋಜನವಾಗುವಂತೆ ಮಾಡಿದ್ದಾರೆ. ಪೆಲ್ತಾಜೆ ನಿವಾಸಿಗಳಾದ ಗುರುವಪ್ಪ, ರಾಮಚಂದ್ರ, ಮನೋಹರ ಪ್ರಸಾದ್, ಗೋವಿಂದನಾಯ್ಕ, ಗೋಪಾಲ, ವಸಂತ ಅವರ ತಂಡ ಈ ಸಾಧನೆ ಮಾಡಿದೆ.

    40 ಮೀಟರ್ ಅಡ್ಡಕ್ಕೆ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಮೂಲಕ ಹೊಳೆಯನ್ನು ಸಮೃದ್ಧಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಫೆಬ್ರವರಿ- ಮಾರ್ಚ್ ವೇಳೆಗೆ ಹೊಳೆ ಬರಡಾಗುತ್ತಿದ್ದು, ನಂತರದ ದಿನಗಳಲ್ಲಿ ನೀರಿಗೆ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಅಡಕೆ, ತೆಂಗು ಹಾಗೂ ಇತರ ತರಕಾರಿ ಬೆಳೆಯುವ ಕೃಷಿಕರು ಇಲ್ಲಿದ್ದು, ಹೊಳೆಗೆ ಕಟ್ಟ ಬೀಳುತ್ತಿದ್ದಂತೆ ಇವರ ಮುಖದಲ್ಲಿ ಮಂದಹಾಸ ಮೂಡಿದೆ. ಹೊಳೆಯ ಆಚೆ ದಡ ಮಾಣಿಲ, ಬಟ್ಯಡ್ಕ ಪ್ರದೇಶದ ಜನರಿಗೂ ಕಟ್ಟ ಹೆಚ್ಚು ಉಪಯುಕ್ತವಾಗಲಿದೆ.

    ಗೋಣಿಚೀಲದಲ್ಲಿ ಮರಳು ತುಂಬಿಸಿ ಹೊಳೆಗೆ ಅಡ್ಡ ಇರಿಸಿ, ಅದರ ಮಧ್ಯೆ ಮಣ್ಣು ಸುರಿದು ಗ್ರಾಮೀಣ ರೈತರ ತಂತ್ರಜ್ಞಾನ ಅಳವಡಿಸಿ ಇಲ್ಲಿ ಕಟ್ಟ ನಿರ್ಮಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಟ್ಟ ನಿರ್ಮಾಣಕ್ಕೆ ಅವಕಾಶವಿಲ್ಲ. ಇನ್ನು ಪಂಚಾಯಿತಿ ವತಿಯಿಂದಲೂ ಇದಕ್ಕೆ ಪ್ರತ್ಯೇಕ ಮೊತ್ತ ಮೀಸಲಿರಿಸಲಾಗುತ್ತಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಯಾವುದೇ ನೆರವು ಪಡೆಯದೆ ಬೆವರು ಸುರಿಸಿಕಟ್ಟ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ನೆರವಿಲ್ಲದೆಯೂ ಜಲಸಂರಕ್ಷಣೆ ಮಾಡಲು ಸಾಧ್ಯ ಎಂಬುದನ್ನು ಪೆಲ್ತಾಜೆಯ ಕೃಷಿಕರ ತಂಡ ಸಮಾಜಕ್ಕೆ ತೋರಿಸಿಕೊಟ್ಟಿದೆ. ಇನ್ನೂ ಒಂದೆರಡು ದಿವಸ ಕೆಲಸ ಮಾಡಿ ಕಟ್ಟವನ್ನು ಇನ್ನಷ್ಟು ಎತ್ತರಕ್ಕೇರಿಸಿ, ಮತ್ತಷ್ಟು ನೀರು ದಾಸ್ತಾನುಗೊಳಿಸಲು ಯೋಜನೆಯಿರಿಸಿಕೊಂಡಿದ್ದಾರೆ.

    ಸರ್ಕಾರ ಜಲಸಂರಕ್ಷಣೆ ಹೆಸರಲ್ಲಿ ಲಕ್ಷಾಂತರ ರೂ. ಖರ್ಚು ಮಾಡುವ ಹಣದಲ್ಲಿ ಒಂದು ಪಾಲನ್ನು ಕಟ್ಟ ಕಟ್ಟುವ ಕೃಷಿಕರಿಗಾಗಿ ಮೀಸಲಿರಿಸಲಿ. ಹೊಳೆಯಲ್ಲಿ ಕಿ.ಮೀ.ಗೆ ಒಂದರಂತೆ ಕಟ್ಟಗಳು ಎದ್ದು ನಿಲ್ಲುವಂತೆ ಮಾಡುವುದರಿಂದ ಸಹಜವಾಗಿ ಜಲಸಂರಕ್ಷಣೆಯಾಗುತ್ತದೆ. ಜತೆಗೆ ಜಲಸಂರಕ್ಷಣೆ ಹೆಸರಲ್ಲಿ ಲಕ್ಷಾಂತರ ರೂ. ಪೋಲು ಮಾಡುವುದನ್ನೂ ಇದರಿಂದ ತಪ್ಪಿಸಬಹುದು. ಮುಂದಿನ ವರ್ಷದಿಂದಾದರೂ ಇಲ್ಲಿ ಶಾಶ್ವತ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು.
    ಗುರುವಪ್ಪ, ಕೃಷಿಕ, ಪೆಲ್ತಾಜೆ ಕಟ್ಟದ ರೂವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts