More

    ಅನುವರ್ತನಾ ಚಿಕಿತ್ಸೆ ಘಟಕ ಉದ್ಘಾಟನೆ

    ಬೆಳ್ತಂಗಡಿ: ಪ್ರಕೃತಿಯೊಂದಿಗೆ ಬೆರೆತಾಗ ಮಾನಸಿಕ ನೆಮ್ಮದಿ ಮತ್ತು ದೈಹಿಕವಾಗಿಯೂ ನೆಮ್ಮದಿ ಸಿಗಲಿದ್ದು, ಇಂದಿನ ಒತ್ತಡದ ಬದುಕಿನಲ್ಲಿ ಪ್ರಕೃತಿ ಚಿಕಿತ್ಸೆಯ ಅನಿವಾರ್ಯತೆ ಇದೆ. ಅದಕ್ಕಾಗಿ ಪ್ರಕೃತಿಯಿಂದ ಪ್ರಕೃತಿಯೆಡೆಗೆ ಎಂಬ ಧ್ಯೇಯದೊಂದಿಗೆ ಧರ್ಮಸ್ಥಳ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

    ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಸೋಮವಾರ ವಿಶಿಷ್ಟ ಪೂರ್ಣವಾದ ‘ಅನುವರ್ತನಾ ಚಿಕಿತ್ಸೆ’ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರಕೃತಿ ಚಿಕಿತ್ಸೆ ಎಂಬ ಅಪರೂಪದ ಪರಿಕಲ್ಪನೆ ಇಂದು ಅಗಾಧ ರೂಪದಲ್ಲಿ ಬೆಳೆದಿದೆ. ಧರ್ಮಸ್ಥಳದಲ್ಲಿ 10 ಹಾಸಿಗೆಗಳೊಂದಿಗೆ ಆರಂಭವಾದ ಈ ವ್ಯವಸ್ಥೆ ಇಂದು 320 ಹಾಸಿಗೆಗಳ ಕಟ್ಟಡ, ಎರಡು ಕ್ವಾಟೇಜ್, ನಾಲ್ಕು ಹಟ್ಟ್‌ಗಳು, ಉಡುಪಿ ಜಿಲ್ಲೆಯ ಪರೀಕದಲ್ಲಿ 400 ಹಾಸಿಗೆಗಳ ಕಟ್ಟಡ, 10 ಜಿಲ್ಲೆಗಳಲ್ಲಿ ಹೊರರೋಗಿ ವಿಭಾಗವಾಗಿ ಎತ್ತರಕ್ಕೆ ಏರಿದೆ. ಇಲ್ಲಿ ವೈದ್ಯರ ಮತ್ತು ಸಿಬ್ಬಂದಿಯ ಸೇವೆಯು ಎಲ್ಲ ಸಾಧಕರಿಗೆ ಮೆಚ್ಚುಗೆಯಾಗುತ್ತಿದ್ದು ಇವರ ಅನುಭವಗಳ ಮಾಹಿತಿ ವಿನಿಮಯದಿಂದ ಇಲ್ಲಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿ ಇಲ್ಲಿನ ಎಲ್ಲ ಸಿಬ್ಬಂದಿ, ವೈದ್ಯರನ್ನು ಅಭಿನಂದಿಸುವುದಾಗಿ ತಿಳಿಸಿದರು.

    ಕರ್ನಾಟಕ ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶ ಎಚ್.ಎ.ಮೋಹನ್ ಮಾತನಾಡಿ, ಪ್ರತಿಯೊಬ್ಬರೂ ಒತ್ತಡದಿಂದ ವೃತ್ತಿ ಮತ್ತು ವೈಯಕ್ತಿಕ ಜೀವನ ನಡೆಸಬೇಕಾಗಿರುವ ಸ್ಥಿತಿ ಬಂದಿದ್ದು, ಶಾಂತಿ, ನೆಮ್ಮದಿ, ತಾಳ್ಮೆ, ಸಹನೆ ರೂಢಿಸಿಕೊಳ್ಳಲು ಹಾಗೂ ಇನ್ನಷ್ಟು ಕರ್ತವ್ಯಶೀಲತೆಯಿಂದ ಇರಲು ಪ್ರಕೃತಿ ಚಿಕಿತ್ಸೆ ಮುಖ್ಯವಾಗಿದೆ ಎಂದರು.

    ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಜಗನ್ನಾಥ, ಪ್ರಭಾರ ಪ್ರಾಂಶುಪಾಲ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಡಾ.ಶಶಿಕಿರಣ್ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಶಶಿಕಾಂತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

    ದೇಹದ ಭಾರವನ್ನು ಪೂರ್ಣವಾಗಿ ಹೊರುವ ಪಾದಗಳು ಒಂದು ಅಮೂಲ್ಯ ಅಂಗ. ಪ್ರಾಚೀನ ವೈದ್ಯ ಪದ್ಧತಿಯಲ್ಲಿ ಪಾದಗಳಿಗೆ ವಿಶೇಷ ಆರೈಕೆ ಮತ್ತು ದೇಹದ ವಿವಿಧ ಭಾಗಗಳಿಗೆ ಪಾದದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪಾದಗಳು ಇಡೀ ದೇಹದ ಅಂಗಗಳಿಗೆ ಶಾರೀರಿಕ ಹಾಗೂ ಮಾನಸಿಕ ಅಥವಾ ನರತಂತುಗಳ ಸಂಜ್ಞೆಗಳ ಮೂಲಕ ಸಂಪರ್ಕ ಹೊಂದಿದೆ. ಪಾದಗಳಿಗೆ ಮಸಾಜ್ ಮಾಡುವ ಮೂಲಕ ದೇಹದ ಅಂಗಗಳಿಗೆ ಪೋಷಣೆ ನೀಡಬಹುದು. ಅನುವರ್ತನಾ ಚಿಕಿತ್ಸೆ ಎಂದು ಕರೆಯುವ ಈ ವಿದ್ಯೆಯ ಮೂಲಕ ಪಾದಗಳಿಗೆ ಸೂಕ್ತ ಮಸಾಜ್ ನೀಡಿ ದೇಹದ ಎಲ್ಲ ಅಂಗಾಂಗಳಿಗೆ ಹಾಗೂ ಮನಸ್ಸಿಗೆ ಮುದ ನೀಡಲು ಮತ್ತು ಒತ್ತಡದ ಮನಸ್ಸು ನಿರಾಳವಾಗಲು ಸಾಧ್ಯವಾಗುತ್ತದೆ.
    ಬಿ.ಸೀತಾರಾಮ ತೋಳ್ಪಾಡಿತ್ತಾಯ ಕಾರ್ಯದರ್ಶಿ, ಶಾಂತಿವನ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts