More

  ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ

  ಉಡುಪಿ: ಶ್ರೀಕೃಷ್ಣ ಮಠದ 250ನೇ ಐತಿಹಾಸಿಕ ಪರ್ಯಾಯ ಮಹೋತ್ಸವಕ್ಕೆ ನಾಡು ಸಜ್ಜಾಗಿದ್ದು, ಶನಿವಾರ ಮುಂಜಾನೆ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಅಷ್ಟಮಠದ ಯತಿಗಳ ಬದುಕಿನ ಸಾರ್ಥಕ ಕ್ಷಣ ಸರ್ವಜ್ಞ ಪೀಠಾರೋಹಣ.

  ಲೌಕಿಕ ಬದುಕಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರೂ ಅಧ್ಯಾತ್ಮದ ತುಡಿತದಿಂದ ಆರು ವರ್ಷಗಳ ಹಿಂದೆ ಸಂನ್ಯಾಸಾಶ್ರಮ ಪ್ರವೇಶಿಸಿದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತಮ್ಮ ಪ್ರಥಮ ಕೃಷ್ಣ ಪೂಜಾ ಪರ್ಯಾಯಕ್ಕೆ ಅಣಿಯಾಗಿದ್ದು, ಈ ಐತಿಹಾಸಿಕ ಕ್ಷಣಗಳಿಗೆ ಭಕ್ತ ಜನತೆ ಸಾಕ್ಷಿಯಾಗಲಿದ್ದಾರೆ.

  ವಿಕಾರಿ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಪೌಷ ಮಾಸ ಕೃಷ್ಣ ಪಕ್ಷ ನವಮಿ ಜನವರಿ 18ರ ಪ್ರಾತಃ 5.57ರ ಸುಮುಹೂರ್ತದಲ್ಲಿ ಶ್ರೀಗಳು ಪವಿತ್ರ ಸರ್ವಜ್ಞಪೀಠಾರೋಹಣ ಮಾಡಿ, ಪಲಿಮಾರು ಶ್ರೀಗಳಿಂದ ಅಕ್ಷಯ ಪಾತ್ರೆ ಸ್ವೀಕರಿಸುವರು. ಇದಕ್ಕೂ ಮೊದಲು ಮುಂಜಾನೆ 1.20ಕ್ಕೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ, 1.50ಕ್ಕೆ ಜೋಡುಕಟ್ಟೆಯಲ್ಲಿ ಪಟ್ಟದ ದೇವರ ಪೂಜೆ, ಪರ್ಯಾಯ ಮೆರವಣಿಗೆ ಪ್ರಾರಂಭ, 4.50ಕ್ಕೆ ರಥಬೀದಿಯಲ್ಲಿ ಶ್ರೀಗಳಿಂದ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ, 5.30ಕ್ಕೆ ಶ್ರೀಕೃಷ್ಣ ಮಠ ಪ್ರವೇಶ ಮಾಡುವರು.

  ಬೆಳಗ್ಗೆ 10 ಗಂಟೆಗೆ ಕೃಷ್ಣನಿಗೆ ಶ್ರೀಗಳಿಂದ ಪ್ರಥಮ ಮಹಾಪೂಜೆ, 10.30ಕ್ಕೆ ಮಹಾ ಅನ್ನಸಂತರ್ಪನೆಗೆ ಚಾಲನೆ, ಮಧ್ಯಾಹ್ನ 2.30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್, ಸಾಯಂಕಾಲ 7.30ಕ್ಕೆ ಪರ್ಯಾಯದ ಮೊದಲ ರಥೋತ್ಸವ ನಡೆಯಲಿದೆ. ದರ್ಬಾರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಭಾಗವಹಿಸುವ ನಿರೀಕ್ಷೆಗಳಿವೆ.

  ಈ ಪರ್ಯಾಯದ ಕೊನೇ ಪೂಜೆ: ಉಡುಪಿ ಕೃಷ್ಣ ಮಠದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀಕೃಷ್ಣ ದೇವರಿಗೆ ತಮ್ಮ ದ್ವಿತೀಯ ಕೃಷ್ಣ ಪೂಜಾ ಪರ್ಯಾಯದ ಕೊನೆಯ ಮಹಾಪೂಜೆಯನ್ನು ಶುಕ್ರವಾರ ಮಧ್ಯಾಹ್ನ ನೆರವೇರಿಸಿದರು. ಬಳಿಕ ಪರ್ಯಾಯ ಪಲಿಮಾರು ಮಠದ ಕೊನೆಯ ಮಹಾ ಅನ್ನಸಂತರ್ಪಣೆ ನಡೆದು, ಪಾಕಶಾಲೆಯಲ್ಲಿ ಉಳಿದ ಅನ್ನ, ಸಾಂಬಾರು, ಪಲ್ಯ, ವಡೆ, ಭಕ್ಷೃಗಳನ್ನು ಸಾರ್ವಜನಿಕರು ಸೂರೆಗೈಯುವ ವಿಶಿಷ್ಟ ಆಚರಣೆ ನೆರವೇರಿತು. ಬಳಿಕ ಪಾಕಶಾಲೆ ಜವಾಬ್ದಾರಿಯನ್ನು ಅದಮಾರು ಮಠಕ್ಕೆ ಒಪ್ಪಿಸಲಾಯಿತು. ರಾತ್ರಿ ರಥೋತ್ಸವ ಬಳಿಕ ನಿರ್ಗಮನ ಪರ್ಯಾಯ ಪಲಿಮಾರು ಶ್ರೀ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಿತು. ಶನಿವಾರ ಬೆಳಗ್ಗೆ ಮುಂಜಾನೆ 4 ಗಂಟೆಗೆ ಕೃಷ್ಣ ದೇವರ ನಿರ್ಮಾಲ್ಯ ವಿಸರ್ಜನೆ ಪೂಜೆ ಬಳಿಕ ತಮ್ಮ ಎರಡು ವರ್ಷದ ಪರ್ಯಾಯವನ್ನು ಪಲಿಮಾರು ಶ್ರೀಗಳು ಕೃಷ್ಣನಿಗೆ ಸಮರ್ಪಿಸಲಿದ್ದಾರೆ. ನಂತರ ಮಠದ ಜವಾಬ್ದಾರಿಯನ್ನು ಅದಮಾರು ಶ್ರೀಗಳಿಗೆ ವಹಿಸಿಕೊಡಲಿದ್ದಾರೆ.

  20 ಸಾವಿರ ಮಂದಿಗೆ ಭೋಜನ: ಪಲಿಮಾರು ಮಠದ ಈ ಪರ್ಯಾಯ ಅವಧಿಯ ಕೊನೇ ಅನ್ನಸಂತರ್ಪಣೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಅನ್ನ, ಸಾರು, ಹುಳಿ, ಮಜ್ಜಿಗೆ ಪಾಯಸದ ಜತೆಗೆ ಪಂಚರತ್ನ ಬರ್ಫಿ, ನವಧಾನ್ಯದ ಲಡ್ಡು ಸಿಹಿ, ಸಜ್ಜಿಗೆ ವಡೆಯ ಖಾರವಿತ್ತು. ರಾಜಾಂಗಣ, ಮಧ್ವಾಂಗಣ, ಅನ್ನ ಧರ್ಮ, ಟೂರಿಸ್ಟ್ ಹಾಲ್, ಭೋಜನ ಶಾಲೆ ಹಾಗೂ ಚೌಕಿಯಲ್ಲಿ ಊಟ ವ್ಯವಸ್ಥೆ ಇತ್ತು. ಅದಮಾರು ಮಠದಲ್ಲಿಯೂ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಅದಮಾರು ಮಠದಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪರ್ಯಾಯ ದಿನ ರಾತ್ರಿ ಭೋಜನ ಆಯೋಜಿಸುವ ಕ್ರಮ ಹಿಂದೆ ಇರಲಿಲ್ಲ. ಪೇಜಾವರ ಪರ್ಯಾಯ ಅವಧಿಯಲ್ಲಿ ಆರಂಭಿಸಿದ ವ್ಯವಸ್ಥೆ, ಪಲಿಮಾರು ಬಳಿಕ ಅದಮಾರು ಮಠವೂ ಮುಂದುವರಿಸಿದೆ.

  ಮಠದಲ್ಲಿ ಉತ್ಸವ ವಾತಾವರಣ: ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ಅದಮಾರು ಮಠದ ರಥಬೀದಿಯಲ್ಲಿ ಶುಕ್ರವಾರ ಸಂಭ್ರಮ ನೆಲೆಸಿತ್ತು. ಮಠದ ಶಿಷ್ಯ ವೃಂದ, ಆಪ್ತ ವಲಯ, ಭಕ್ತರು ಪರ್ಯಾಯ ಉತ್ಸವ ಚಟುವಟಿಕೆಯಲ್ಲಿ ನಿರತರಾಗಿದ್ದರು. ವಿಶೇಷ ಧಾರ್ಮಿಕ ಕಾರ್ಯಕ್ರಮ, ಭಜನೆ ನಿರಂತರ ನಡೆಯುತ್ತಿತ್ತು. ನೂರಾರು ಭಕ್ತರು, ವಿದ್ವಾಂಸರು, ಗಣ್ಯರು ಆಗಮಿಸಿ ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥರೊಂದಿಗೆ ಚರ್ಚಿಸಿದರು. ಕಾಣಿಕೆ ರೂಪದಲ್ಲಿ ಉಪಯುಕ್ತ ವಸ್ತುಗಳನ್ನು ದೇಣಿಗೆ ನೀಡಿದರು.

  ಎಲ್ಲಿ ನೋಡಿದರೂ ಭಕ್ತರು: ಪರ್ಯಾಯೋತ್ಸವ ವೈಭವವನ್ನು ಕಣ್ತುಂಬಿಸಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ವಿದ್ಯುದ್ದೀಪಾಲಂಕಾರಗಳಿಂದ ನಗರ ನವವಧುವಿನಂತೆ ಕಂಗೊಳಿಸುತ್ತಿದೆ. ರಥಬೀದಿಯಲ್ಲಿ ಮಧ್ಯಾಹ್ನದಿಂದಲೇ ಭಕ್ತರ ದಂಡು ಸಂಭ್ರಮದಿಂದ ಓಡಾಡುತ್ತಿತ್ತು. ಕೃಷ್ಣ ದೇವರಿಗೆ ಎಂದಿನಂತೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಕೃಷ್ಣ ದರ್ಶನ ಪಡೆದರು. ಪರ್ಯಾಯ ಅಂಗವಾಗಿ ನಗರದಲ್ಲಿ ರಾತ್ರಿಯಿಡೀ ಹಬ್ಬದ ವಾತಾವರಣವಿತ್ತು. ಮೆರವಣಿಗೆ ಸಾಗುವ ಬೀದಿಗಳಲ್ಲಿ ರಾತ್ರಿಯಿಡೀ ಸಹಸ್ರ ಸಹಸ್ರ ಭಕ್ತರಿದ್ದು, ಅಲ್ಲಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts