More

    ಕರ್ನಾಟಕ ಬಂದ್‌ಗೆ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ

    ಬೆಳಗಾವಿ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕ, ಕನ್ನಡ ಮತ್ತು ದಲಿತಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಳಗಾವಿ ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ನಗರದ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನಸೌಧದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಗಂಟೆಗಳ ಕಾಲ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಉಭಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಬಂದ್ ಮಾಡಿದ ಕಾರಣ ವಾಹನ ಸವಾರರು ರಸ್ತೆಯಲ್ಲಿ ಪರದಾಡುವಂತಾಯಿತು. ಈ ವೇಳೆ ಪೊಲೀಸರು, ರೈತರು ಹಾಗೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ, ಸ್ವಲ್ಪ ಸಮಯದ ಬಳಿಕ ಬಿಡುಗಡೆಗೊಳಿಸಿದರು.

    ಮಧ್ಯಾಹ್ನದ ನಂತರ ಆರಂಭವಾದ ವ್ಯಾಪಾರ ಚಟುವಟಿಕೆ: ಬಂದ್ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಪರೀಕ್ಷೆಗಳನ್ನು ಮುಂದೂಡಿದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿಲ್ಲ. ಜಿಲ್ಲಾದ್ಯಂತ ಎಂದಿನಂತೆ ದಿನಸಿ, ತರಕಾರಿ, ಔಷಧ, ಮದ್ಯದಂಗಡಿಗಳು ಕಾರ್ಯನಿರ್ವಹಿಸಿದವು. ನಗರ ಮತ್ತು ಗ್ರಾಮೀಣ ಪ್ರದೇಶದ ಕೆಲ ಭಾಗಗಳಲ್ಲಿ ಸಂಘಟನೆಗಳು ಬೆಳಗ್ಗೆ ಪ್ರತಿಭಟನೆ ನಡೆಸಿದ ಕಾರಣ ಕೆಲಕಾಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನದ ನಂತರ ವ್ಯಾಪಾರ-ವಹಿವಾಟು ಆರಂಭವಾಗಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರವಿತ್ತು.

    ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸದವು. ಆದರೆ, ಜನರಿರಲಿಲ್ಲ. ಅಂಗಡಿ ಬಂದ್ ಮಾಡಿಸಿದ ಕಾರ್ಯಕರ್ತರು: ನಗರದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಯಾವುದೇ ಕಾರಣಕ್ಕೂ ಮಸೂದೆ ಅನುಷ್ಠಾನಗೊಳಿಸಬಾರದು.

    ಒಂದು ವೇಳೆ ಎರಡು ಕಾಯ್ದೆ ಜಾರಿಗೊಳಿಸಿದರೆ ಹೋರಾಟ ಮುಂದುವರಿಸಲಾಗುವುದು ಎಂದು ಸಂಘಟನೆಗಳ ಕಾರ್ಯಕರ್ತರು ಎಚ್ಚರಿಸಿದರು. ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಜಯಶ್ರೀ ಗುರನ್ನವರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

    ವ್ಯಾಪಾರಿಗಳಿಗೆ ಸಂಕಷ್ಟ: ಬಂದ್‌ನಿಂದ ಜನರು ಮನೆಯಿಂದ ಹೊರಗೆ ಬರದ ಕಾರಣ ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿತ್ತು. ರಸ್ತೆ ಬದಿ ಹಾಗೂ ತಳ್ಳು ಗಾಡಿ ವ್ಯಾಪಾರಿಗಳು ಸಮಸ್ಯೆ ಅನುಭವಿಸಿದರು. ಮಧ್ಯಾಹ್ನದ ನಂತರ ಮಳೆ ಆರಂಭವಾದ ಕಾರಣ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಮನೆಗೆ ತೆರಳುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts