More

    ಮುಖ್ಯಾಧಿಕಾರಿ ವಿರುದ್ಧ ಕ್ರಮ

    ತಿ.ನರಸೀಪುರ: ಪುರಸಭೆ ಸದಸ್ಯರನ್ನು ನಿರ್ಲಕ್ಷಿಸಿ ಸಭೆ ನಡೆಸಿ ಸ್ಥಳೀಯ ಜನಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಿರುವ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸಲು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

    ಪಟ್ಟಣ ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿ ಕೆ.ಆರ್.ರಕ್ಷಿತ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ ವಿರುದ್ಧ ಆರೋಪ ಮಾಡಿದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

    ಸದಸ್ಯ, ನಿಕಟಪೂರ್ವ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ, ಮುಖ್ಯಾಧಿಕಾರಿ ಈ ಹಿಂದೆ 2023ರ ಜು.3 ರಂದು ಏಕಪಕ್ಷೀಯವಾಗಿ ಸಭೆ ನಡೆಸಿ ಸದಸ್ಯರನ್ನು ದೂರವಿಟ್ಟು ನಮ್ಮ ಹಕ್ಕಿಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಇದಕ್ಕೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.

    ನಗರೋತ್ಥಾನ ಯೋಜನೆಯಡಿ ಆರಂಭಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣಗೊಂಡಿದ್ದು, ನಮ್ಮನ್ನು ಆಯ್ಕೆ ಮಾಡಿದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಅನ್ಯರಿಗೆ ಗುತ್ತಿಗೆ ಕೊಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

    ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಅಭಿವೃದ್ಧಿ ಅನುದಾನದ ಬಳಕೆ ಹಾಗೂ ಫಲಾನುಭವಿಗಳ ಆಯ್ಕೆಯಲ್ಲೂ ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾದ ಸದಸ್ಯರನ್ನು ನಿರ್ಲಕ್ಷಿಸಲಾಗಿದೆ. ಹೀಗಾದರೆ ನಮ್ಮಗಳ ಆಗತ್ಯವಾದರೂ ಏನಿದೆ ಎಂದು ಸದಸ್ಯರಾದ ಪ್ರೇಮಾ ಮರಯ್ಯ, ಬೇಬಿ ಹೇಮಂತ್ ಕುಮಾರ್ ಹಾಗೂ ಸಿ.ಪ್ರಕಾಶ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

    ಶೋಭಾರಾಣಿ ಮಲ್ಲೇಶ್ ಮಾತನಾಡಿ, ಪುರಸಭೆಗೆ 18 ನೇ ವಾರ್ಡ್‌ನಿಂದಲೇ ಹೆಚ್ಚಿನ ಆದಾಯ ಬರುತ್ತಿದ್ದರೂ ಇಲ್ಲಿವರೆಗೂ ಅಭಿವೃದ್ಧಿಗೆ ಬಿಡಿಗಾಸು ಅನುದಾನವನ್ನೂ ನೀಡಿಲ್ಲ. ವಾಣಿಜ್ಯ ವಹಿವಾಟು ಹೆಚ್ಚಾಗಿರುವ ಹಾಗೂ ಜನ ದಟ್ಟಣೆ ಸಂಚಾರವಿರುವ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಎಸ್.ಕೆ.ಕಿರಣ್ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳಿಗೂ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಅನ್ಯ ಕೆಲಸಕ್ಕೆ ನಿಯೋಜನೆಗೊಂಡಿರುವ ಪೌರ ಕಾರ್ಮಿಕರನ್ನು ಸ್ವಚ್ಛತೆ ಕಾರ್ಯಕ್ಕೆ ವಾಪಸ್ ಕರೆಯಿಸಿಕೊಂಡು ಎಲ್ಲ ವಾರ್ಡ್‌ಗಳಿಗೂ ತಲಾ ಒಬ್ಬೊಬ್ಬ ಪೌರ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು.

    ಮಾಜಿ ಅಧ್ಯಕ್ಷರಾದ ಎನ್.ಸೋಮು ಮತ್ತು ಎಸ್. ಮದನ್ ರಾಜ್ ಮಾತನಾಡಿ, ಆಯಾಯ ವಾರ್ಡ್‌ಗಳಲ್ಲಿ ಕಂದಾಯ ಇಲಾಖೆ ಮಾದರಿಯಲ್ಲಿ ಖಾತೆ ಅದಾಲತ್ ಮಾಡುವ ಮೂಲಕ ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಹೊಸ ಬಡಾವಣೆಗಳ ನಿರ್ಮಾಣ ಹೆಚ್ಚಾಗುತ್ತಿದ್ದು, ಲೇಔಟ್‌ಗಳ ನಿರ್ಮಾಣ ಸಂಬಂಧ ಆಯಾ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.

    ಪುರಸಭಾ ಸದಸ್ಯರಾದ ರೂಪಾ ಕರಿಯಪ್ಪ, ಎಲ್. ಮಂಜುನಾಥ್, ಸೈಯೀದ್ ಅಹಮ್ಮದ್, ಜಿ. ರೂಪಶ್ರೀ, ಆರ್.ನಾಗರಾಜು, ಮಹದೇವಮ್ಮ, ಬಿ.ವಸಂತ ಶ್ರೀೀಕಂಠ, ಮಾದೇವಿ, ರಾಜೇಶ್ವರಿ ರಾಘವೇಂದ್ರ, ಆರ್.ತೇಜಸ್ವಿನಿ, ಪಿ.ಮೋಹನ್, ನಾಗರತ್ನ ಮಾದೇಶ್, ಮಂಜು( ಬಾದಾಮಿ ) ಇನ್ನಿತರರು ಹಾಜರಿದ್ದರು.

    ಅನುಪತಿ ಪಡೆದು ದಿನಾಂಕ ನಿಗದಿ: ಪುರಸಭೆ ಸದಸ್ಯರ ಸಲಹೆ ಸೂಚನೆಗಳನ್ನು ಆಲಿಸಿದ ಆಡಳಿತಾಧಿಕಾರಿ ಕೆ.ಆರ್.ರಕ್ಷಿತ್, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸವನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನುಮತಿ ಪಡೆದುಕೊಂಡು ಪುರಸಭೆಯ ನೂತನ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಪೋಟೋ ಕ್ಯಾಪ್ಷನ್ 09 01 :ತಿ.ನರಸೀಪುರ ಪುರಸಭೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಉಪ ವಿಭಾಗಾಧಿಕಾರಿ ರಕ್ಷಿತ್ , ಮುಖ್ಯಾಧಿಕಾರಿ ಬಿ.ಕೆ.ಸಂತಕುಮಾರಿ ಹಾಗೂ ಸದಸ್ಯರಿದ್ದರು.
    =-=-=-=-=-=-=-=-=-=-=-=-=-=-=-=-=-=-=-=-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts