More

    ನಿರ್ದಿಷ್ಟ ಗುರಿ, ಛಲವಿದ್ದಲ್ಲಿ ಸಾಧನೆ ಸುಲಭ

    ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಮತ್ತು ಸಾಧಿಸುವ ಛಲವಿದ್ದಲ್ಲಿ ಯಾವುದೇ ಸಾಧನೆ ಮಾಡಬಹುದು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ದಕ್ಷಿಣ ಕನ್ನಡದ ಸುರೇಶ್ ಅಭಿಪ್ರಾಯಪಟ್ಟರು.

    ತಾಲೂಕಿನ ಮೂಗ್ತಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚಿಕ್ಕಮಗಳೂರು ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಸಿವಿಲ್ ಸರ್ವೀಸ್ ಪರೀಕ್ಷೆ ತರಬೇತಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
    ಮಕ್ಕಳ ಭವಿಷ್ಯದ ಕನಸು ಕಾಣುವ ಪಾಲಕರಿಗೆ ತಮ್ಮ ಮಕ್ಕಳು ಉನ್ನತ ಮಟ್ಟಕ್ಕೆ ಹೋದಾಗ ಹೆಚ್ಚು ಸಂತೋಷವಾಗುತ್ತದೆ. ವಿದ್ಯಾರ್ಥಿ ಜೀವನವನ್ನು ವ್ಯರ್ಥಮಾಡದೆ ನಿರಂತರ ಪರಿಶ್ರಮಪಟ್ಟರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಬಹುದು ಎಂದು ತಿಳಿಸಿದರು.
    ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲು ಎಂಬ ಮನೋಭಾವ ಬದಲಾಗಿದೆ. ಗ್ರಾಮೀಣ ಶಾಲಾ ಕಾಲೇಜುಗಳ ಮಕ್ಕಳಿಗೆ ಐಎಎಸ್, ಐಪಿಎಸ್‌ನಂಥ ಉನ್ನತ ಹುದ್ದೆಗೇರುವ ಎಲ್ಲ ಅವಕಾಶಗಳು ಇದೆ. ಇದಕ್ಕೆ ಪೂರಕವಾಗುವಂತೆ ಚಿಕ್ಕಮಗಳೂರಿನ ಲಯನ್ಸ್ ಕ್ಲಬ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಲಯನ್ಸ್ ಸಂಸ್ಥೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಮೂಗ್ತಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗೆ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿದೆ. 5 ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ಹಮ್ಮಿಕೊಂಡಿದ್ದು, ಮೊದಲ ಕಾರ್ಯಕ್ರಮವನ್ನು ಮೂಗ್ತಿಹಳ್ಳಿ ಸರ್ಕಾರಿ ಕಾಲೇಜಿನಿಂದಲೇ ಆರಂಭಿಸಲಾಗಿದೆ ಎಂದು ತಿಳಿಸಿದರು.
    ಕಾಲೇಜಿನ ಪ್ರಾಚಾರ್ಯ ಶಿವಕುಮಾರ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕಾಲೇಜಿನ ವಿವಿಧ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕಲ್ಪಿಸಿದೆ. ಲಯನ್ಸ್ ಸಂಸ್ಥೆಯ ಜಯರಾಮೇಗೌಡ ಅವರು ಕಾಲೇಜಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಕೆಲ ಬಡ ಮಕ್ಕಳಿಗೆ ಸಮವಸ್ತ್ರ ಒದಗಿಸಲು ನೆರವಾಗಿದ್ದಾರೆ ಎಂದರು.
    ಲಯನ್ಸ್ ಕ್ಲಬ್ ಮುಖ್ಯ ಸಂಯೋಜಕ ಪ್ರೊ. ಜಗದೀಶಪ್ಪ, ಕಾರ್ಯಕ್ರಮ ಸಂಯೋಜಕ ಜಯರಾಮೇಗೌಡ, ನಿವೃತ್ತ ಪ್ರಾಚಾರ್ಯ ಎಸ್.ಆರ್. ವೈದ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts