More

    ರಾಗಿ, ತೊಗರಿ ಭರಪೂರ ಇಳುವರಿ

    ಲಿಂಗದಹಳ್ಳಿ: ನಾನು ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಕೃಷಿ ಇಲಾಖೆಯಿಂದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿ ಭಾಗಿಯಾಗಿದ್ದೇನೆ. ಈ ವರ್ಷ ಬರಗಾಲವಿದ್ದರೂ ಲಿಂಗದಹಳ್ಳಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರದಲ್ಲಿ ತೊಗರಿ ಮತ್ತು ರಾಗಿ ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಪಡೆದಿರುವುದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಶ್ರಮವೇ ಮುಖ್ಯ ಕಾರಣ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಂತಸ ವ್ಯಕ್ತಪಡಿಸಿದರು.

    ಲಿಂಗದಹಳ್ಳಿ ಬೀಜೋತ್ಪಾದನಾ ಕೇಂದ್ರದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಮತ್ತು ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಲ್ಲಿ ಬೆಳೆದ ಬಿತ್ತನೆ ಬೀಜಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೀಜ ನಿಗಮಗಳ ಮೂಲಕ ಸಂಸ್ಕರಿಸಿ ರೈತರಿಗೆ ನೀಡಲಾಗುವುದು. ರೈತರು ಇದೇ ಬಿತ್ತನೆ ಬೀಜಗಳನ್ನು ಬಳಸುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳಂತೆಯೇ ಉಳಿದ ಇಲಾಖೆಗಳ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ಈ ಬಾರಿ ತರೀಕೆರೆ ತಾಲೂಕಿನ ವಾಡಿಕೆ ಮಳೆಯಲ್ಲಿ ಶೇ.32ರಷ್ಟು ಮಳೆಯಾಗಿದ್ದರೂ ಬೀಜೋತ್ಪಾದನಾ ಕೇಂದ್ರದ 100 ಎಕರೆ ಜಮೀನಿನ ಪೈಕಿ 12 ಎಕರೆಯಲ್ಲಿ ತೊಗರಿ ಮತ್ತು 20 ಎಕರೆಯಲ್ಲಿ ರಾಗಿ ಬೆಳೆ ಉತ್ತಮ ಇಳುವರಿ ಬಂದಿದೆ. ಮಳೆಯಾಶ್ರಿತ ಜಮೀನುಗಳಲ್ಲೂ ರೈತರು ಹೆಚ್ಚಿನ ಆದಾಯ ಪಡೆಯಬಹುದು. ಬರಗಾಲದಿಂದಾಗಿ ಮುಂಗಾರು ಬೆಳೆಗಳೆಲ್ಲವೂ ರೈತರ ಕೈತಪ್ಪಿವೆ. ಪ್ರತಿ ಎಕರೆಗೆ 890 ರೂ. ಬೆಳೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಲ್.ಸುಜಾತಾ ಮಾತನಾಡಿ, ಸತತ 5 ವರ್ಷಗಳಿಂದ ನಷ್ಟದಲ್ಲೇ ನಡೆಯುತ್ತಿದ್ದ ಲಿಂಗದಹಳ್ಳಿ ಬೀಜೋತ್ಪಾದನಾ ಕೇಂದ್ರ ಈ ಬಾರಿ ರಾಗಿ ಮತ್ತು ತೊಗರಿ ಬೆಳೆಯಲ್ಲಿ ಉತ್ತಮ ಸಲು ಪಡೆಯುವ ಮೂಲಕ ಸುಮಾರು 30 ಲಕ್ಷ ರೂ. ಮೌಲ್ಯದ ಬೆಳೆ ಬೆಳೆದಿದೆ. ಇದರಲ್ಲಿ 5 ಲಕ್ಷ ರೂ. ಖರ್ಚು ಕಳೆದರೂ ಅಂದಾಜು 25 ಲಕ್ಷ ರೂ. ನಿವ್ವಳ ಲಾಭ ಬರಲಿದೆ.
    ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಗಿ ಮತ್ತು ತೊಗರಿ ರಾಶಿಗಳಿಗೆ ಡಿಸಿ ಮೀನಾ ನಾಗರಾಜ್ ಸೇರಿ ಮತ್ತಿತರರು ಪೂಜೆ ಸಲ್ಲಿಸಿದರು. ಯಲ್ಲಾಪುರದ ಸಿದ್ದಿ ಸಮುದಾಯದ ಮಹಿಳೆಯರು ನೃತ್ಯ ಪ್ರದರ್ಶಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಕೃಷಿ ಅಧಿಕಾರಿಗಳಾದ ಲೋಕೇಶಪ್ಪ , ಎಂ.ಆರ್.ಹಂಸವೇಣಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಆರ್.ಚಂದ್ರಮೌಳಿ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಿ.ಆರ್.ರವಿ, ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸಿರಿಧಾನ್ಯ ಕೃಷಿಕರಾದ ಕಡೂರು ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts