More

    ‘ಒಗ್ಗಟ್ಟಿನಲ್ಲಿ ಕರೊನಾ ಇಲ್ಲ’ ಎಂದು ತೋರಿಸಿಕೊಟ್ಟ ಯುವಕರು! ಸೋಂಕು ಪೀಡಿತನ ಜತೆಗಿದ್ದವರು ನೆಲಕ್ಕೆ ಟೇಪ್‌ ಹಚ್ಚಿದ್ದೇಕೆ?

    ಅಬುಧಾಬಿ: ’ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಜನಪ್ರಿಯ ನಾಣ್ಣುಡಿಯೀಗ ‘ಒಗ್ಗಟ್ಟಿನಲ್ಲಿ ಕರೊನಾ ಇದೆ’ ಎಂದೇ ಜನಪ್ರಿಯವಾಗಿದೆ. ಈ ಹೊಸ ನಾಣ್ಣುಡಿ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವಾಗಿ ಹರಿದಾಡುತ್ತಿದೆ.

    ಆದರೆ ಇದು ತಮಾಷೆಯಲ್ಲ, ಬದಲಿಗೆ ವಾಸ್ತವವೂ ಹೌದು. ಏಕೆಂದರೆ ಜನರು ಒಟ್ಟಿಗೇ ಸೇರಿದಂತೆ ಈ ಸೋಂಕು ಶರವೇಗದಲ್ಲಿ ಹರಡುತ್ತದೆ ಎಂಬುದು ಅಷ್ಟೇ ಸತ್ಯ. ಜನರು ಒಟ್ಟಿಗೇ ಸೇರಬೇಡಿ ಎಂದು ಪೊಲೀಸರು, ಅಧಿಕಾರಿಗಳು, ವೈದ್ಯರು ಎಷ್ಟೇ ಹೇಳುತ್ತಿದ್ದರೂ ಜನರು ಮಾತ್ರ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಒಂದೆಡೆ ಸೇರಿದ್ದರಿಂದಲೇ ಕರೊನಾ ಎಂಬ ಸೋಂಕು ಹೆಮ್ಮಾರಿಯಾಗಿ ಈ ಪರಿಯಲ್ಲಿ ಲಕ್ಷ ಲಕ್ಷ ಜನರ ದೇಹವನ್ನು ಸೇರಿಕೊಂಡಿದೆ.

    ಆದರೆ ಕರೊನಾ ಸೋಂಕಿತರ ಜತೆಗಿದ್ದರೂ ಕೆಲವೊಮ್ಮೆ ಇನ್ನೊಬ್ಬರಿಗೆ ಸೋಂಕು ತಗುಲುವುದಿಲ್ಲ. ಇದಕ್ಕೆ ಕಾರಣವನ್ನು ವೈಜ್ಞಾನಿಕವಾಗಿಯೂ ನಿರೂಪಿಸಲಾಗಿದೆ. ಅದೇನೆಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿದ್ದವರಲ್ಲಿ ಸೋಂಕು ಅಷ್ಟು ಬೇಗನೆ ವ್ಯಾಪಿಸುವುದಿಲ್ಲ ಎಂದು. ಇದು ಕೂಡ ನಿಜವೇ.

    ಆದರೆ ಇವೆಲ್ಲವುಗಳ ಹೊರತಾಗಿಯೂ ದುಬೈನ ಅಬುಧಾಬಿಯಲ್ಲಿ ಅಚ್ಚರಿಯೊಂದು ನಡೆದೇ ಹೋಗಿದೆ. ಸೋಂಕಿತನ ಜತೆಗೆ ಒಂದೇ ರೂಮಿನಲ್ಲಿ ವಾಸವಿದ್ದರೂ ಐದು ಯುವಕರಿಗೆ ಯಾವ ಸೋಂಕೂ ತಗುಲಿಲ್ಲ. ಹಾಗೆಂದು ಎಲ್ಲರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇದೆ ಎಂದೂ ಅಲ್ಲ. ಹಾಗಿದ್ದರೆ ಈ ಪವಾಡ ನಡೆದದ್ದು ಹೇಗೆ?

    ಅಬುಧಾಬಿಯ ಕಂಪೆ‌ನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಯುವಕರು ಒಂದೇ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು. ಆ ಪೈಕಿ ಒಬ್ಬನಿಗೆ ಜ್ವರ ಕಾಣಿಸಿಕೊಂಡಿದೆ. ಎಲ್ಲೆಡೆಗೂ ಕರೊನಾ ಸೋಂಕಿನ ಭೀತಿ ಇರುವ ಕಾರಣ, ಸೋಂಕಿಗೆ ಸಂಬಂಧಿಸಿದ ಸ್ಯಾಂಪಲ್‌ಗ‌ಳನ್ನು ಟೆಸ್ಟ್‌ಗೆ ಕಳುಹಿಸಲಾಗಿತ್ತು. ಒಬ್ಬನಿಗೆ ಜ್ವರ ಕಾಣಿಸಿಕೊಂಡ ತಕ್ಷಣವೇ ಜಾಗೃತವಾದ ಇತರ ಯುವಕರು, ಜ್ವರ ಪೀಡಿತನಿಗೆ ಕರೊನಾ ಸೋಂಕು ತಗುಲಿದೆಯೋ, ಇಲ್ಲವೋ ಎಂಬ ಬಗ್ಗೆ ವರದಿ ಬರುವವರೆಗೆ ಕಾಯದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರು. ನೆಲಕ್ಕೆ ಟೇಪ್‌ ಅಂಟಿಸಿದರು. ಇರುವ ಒಂದೇ ಕೊಠಡಿಯನ್ನು ಆರು ಭಾಗಗಳಾಗಿ ವಿಂಗಡಿಸಿದರು. ಒಬ್ಬೊಬ್ಬರೂ ಒಂದೊಂದು ಭಾಗದಲ್ಲಿ ಇರಲಾರಂಭಿಸಿದರು. ಜ್ವರದಲ್ಲಿದ್ದವನನ್ನು ಸರದಿ ಪ್ರಕಾರ ನೋಡಿಕೊಂಡರು.

    ಮಾಸ್ಕ್, ಗ್ಲೌಸ್‌ಗಳನ್ನು ಖರೀದಿ ಅದನ್ನು ಧರಿಸಿದರು. ಎಲ್ಲರೂ ತಮ್ಮ ತಮ್ಮ ಅಡುಗೆ ಪಾತ್ರೆಗಳನ್ನು ಪ್ರತ್ಯೇಕವಾಗಿಸಿಕೊಂಡರು. ಕೊಠಡಿಯ ನೆಲ ಮತ್ತಿತರ ಸಾಮಗ್ರಿಗಳನ್ನು ಪ್ರತಿಯೊಬ್ಬರು ಗಂಟೆಗೊಮ್ಮೆ ಕ್ರಿಮಿನಾಶಕಗಳಿಂದ ಸ್ವಚ್ಛಗೊಳಿಸುತ್ತಿದ್ದರು.

    ಈಗ ಎದುರಾದದ್ದು ಶೌಚಗೃಹದ ಸಮಸ್ಯೆ. ಆರು ಮಂದಿಗೆ ಆರು ಶೌಚಗೃಹವಂತೂ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಕೊಠಡಿಯಲ್ಲಿದ್ದ ಒಂದೇ ಒಂದು ಶೌಚಗೃಹವನ್ನು ಯಾರೇ ಬಳಸಲಿ, ಬಳಸಿದ ತತ್‌ ಕ್ಷಣವೇ ಅದನ್ನು ಕ್ರಿಮಿ ನಾಶಕಗಳಿಂದ ಸ್ವಚ್ಛಗೊಳಿಸುತ್ತಿದ್ದರು. ಇದೆಲ್ಲದರ ಪರಿಣಾಮವಾಗಿ, ಅವರೆಲ್ಲರೂ ಕೋವಿಡ್ ಟೆಸ್ಟ್‌ನಲ್ಲಿ ಪಾಸ್‌ ಆಗಿದ್ದಾರೆ.
    ಜ್ವರ ಬಂದಿದ್ದಾತನಿಗೆ ಸೋಂಕು ಇರುವುದು ಪತ್ತೆಯಾಗಿದೆ. ಆತನಿಗೆ ಆಸ್ಪತ್ರೆಗೂ ಅಡ್‌ಮಿಟ್‌ ಮಾಡಲಾಗಿದೆ. ಆದರೆ ಉಳಿದವರು ಮಾತ್ರ ಸೋಂಕಿನಿಂದ ಪಾಸ್‌ ಆಗಿದ್ದಾರೆ. ತತ್‌ಕ್ಷಣದಲ್ಲಿ ಜಾಗೃತೆ ಮಾಡಿಕೊಂಡ ಪರಿಣಾಮ ಎಲ್ಲರೂ ಈಗ ಸೇಫ್‌. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts