More

    ಐಪಿಎಲ್ ವೇಳಾಪಟ್ಟಿ ಪ್ರಕಟ ವಿಳಂಬಕ್ಕೆ ಕಾರಣವೇನು ಗೊತ್ತೇ?

    ದುಬೈ: ಐಪಿಎಲ್ 13ನೇ ಆವೃತ್ತಿಯ ಪಂದ್ಯಗಳನ್ನು ಯುಎಇಯ 3 ತಾಣಗಳಲ್ಲಿ ನಡೆಸುವುದೆಂದು ಈಗಾಗಲೆ ಎಲ್ಲ ಯೋಜನೆ ಸಿದ್ಧವಾಗಿದೆ. ಆದರೆ ಈ ನಡುವೆ ಅಬುಧಾಬಿಯಲ್ಲಿ ಇತ್ತೀಚೆಗೆ ಕರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಅಲ್ಲಿ ಪಂದ್ಯಗಳು ನಡೆಯುವ ಬಗ್ಗೆ ಅನುಮಾನಗಳು ಮೂಡಿವೆ. ಇದರಿಂದಾಗಿ, ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಯ ವೇಳಾಪಟ್ಟಿ ಅಂತಿಮಗೊಳ್ಳುವುದು ಕೂಡ ವಿಳಂಬವಾಗುತ್ತಿದೆ.

    ಪಂದ್ಯಗಳನ್ನು ಆಯೋಜಿಸಲು ಅಬುಧಾಬಿ ಲಭ್ಯವಾಗುವ ಬಗ್ಗೆ ಬಿಸಿಸಿಐಗೆ ಈಗ ಗೊಂದಲಗಳು ಮೂಡಿವೆ. ಹೀಗಾಗಿ, 8 ತಂಡಗಳು ಈಗಾಗಲೆ ಯುಎಇ ತಲುಪಿದ್ದರೂ, ವೇಳಾಪಟ್ಟಿ ಅಂತಿಮಗೊಳಿಸುವುದು ಇನ್ನೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

    ಅಬುಧಾಬಿಯಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯಿಂದಾಗಿ ಸ್ಥಳೀಯಾಡಳಿತ, ನಗರಕ್ಕೆ ಪ್ರವೇಶಿಸುವ ವೇಳೆ ಕರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಇದರಿಂದಾಗಿ ಟೂರ್ನಿಯ ವೇಳೆ ತಂಡಗಳ ಆಟಗಾರರು, ಸಿಬ್ಬಂದಿ, ಪ್ರಸಾರ ವಾಹಿನಿ ಸಿಬ್ಬಂದಿ, ಐಪಿಎಲ್ ವ್ಯವಸ್ಥಾಪಕ ಅಧಿಕಾರಿಗಳು ದುಬೈ ಅಥವಾ ಶಾರ್ಜಾದಿಂದ ಅಬುಧಾಬಿ ಪ್ರವೇಶಿಸುವ ವೇಳೆ ಮತ್ತೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದು ಅಬುಧಾಬಿಯಲ್ಲಿ ಪಂದ್ಯಗಳ ಆಯೋಜನೆಗೆ ಅಡೆತಡೆ ಎದುರಾಗುವಂತೆ ಮಾಡಿದೆ. ಈ ಸಂಬಂಧ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜತೆಗೆ ಬಿಸಿಸಿಐ ಮಾತುಕತೆ ನಡೆಸುತ್ತಿದ್ದು, ಜೈವಿಕ-ಸುರಕ್ಷಾ ವಾತಾವರಣದಲ್ಲಿರುವ ಕಾರಣ ಕಡ್ಡಾಯ ಪರೀಕ್ಷೆಯಿಂದ ಪಾರಾಗುವ ಬಗ್ಗೆ ಸ್ಥಳೀಯಾಡಳಿತದ ಮನ ಒಲಿಸುವ ಕಾರ್ಯ ಸಾಗಿದೆ.

    ಇದನ್ನೂ ಓದಿ: ಐಪಿಎಲ್ ಉದ್ದೀಪನ ಪರೀಕ್ಷೆಯಲ್ಲಿ ಸ್ಟಾರ್ ಕ್ರಿಕೆಟಿಗರೇ ಟಾರ್ಗೆಟ್!

    ಈ ನಡುವೆ ಅಬುಧಾನಿಯನ್ನು ಟೂರ್ನಿಯಿಂದ ಸಂಪೂರ್ಣವಾಗಿ ದೂರವಿಡುವ ಬದಲು ಅಲ್ಲಿ ಆದಷ್ಟು ಕಡಿಮೆ ಪಂದ್ಯಗಳನ್ನು ಏರ್ಪಡಿಸುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿದೆ. ಇದರಿಂದಾಗಿ ವೇಳಾಪಟ್ಟಿ ಸ್ವಲ್ಪ ವಿಚಿತ್ರವಾಗಿ ರೂಪುಗೊಳ್ಳಲಿದ್ದು, 2011ರ ಮಾದರಿಯಲ್ಲಿ ತಂಡಗಳು ತವರು ಮತ್ತು ಎದುರಾಳಿ ನೆಲದ ಪಂದ್ಯಗಳನ್ನು ಸತತವಾಗಿ ಆಡುವ ಪ್ರಮೇಯವೂ ಎದುರಾಗಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ 8 ತಂಡಗಳ ಪೈಕಿ 6 ತಂಡಗಳು ದುಬೈನಲ್ಲೇ ನೆಲೆಸಿದ್ದರೆ, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಮಾತ್ರ ಅಬುಧಾಬಿಯಲ್ಲಿ ವಾಸ್ತವ್ಯ ಹೂಡಿವೆ.

    20 ಸಾವಿರಕ್ಕೂ ಅಧಿಕ ಕರೊನಾ ಪರೀಕ್ಷೆ
    ಐಪಿಎಲ್ ಟೂರ್ನಿಯ ವೇಳೆ ಸರಿಸುಮಾರು 3 ತಿಂಗಳ ಅವಧಿಯಲ್ಲಿ 20 ಸಾವಿರಕ್ಕೂ ಅಧಿಕ ಕೋವಿಡ್-19 ಟೆಸ್ಟ್ ನಡೆಯುವ ನಿರೀಕ್ಷೆ ಇದೆ. ಟೂರ್ನಿಯ ವೇಳೆ ಕರೊನಾ ಪರೀಕ್ಷೆಗಾಗಿ ಬಿಸಿಸಿಐ, ವಿಪಿಎಚ್ ಹೆಲ್ತ್‌ಕೇರ್ ಸಂಸ್ಥೆಯನ್ನು ನೇಮಿಸಿದೆ. ಆಟಗಾರರು, ಕೋಚ್‌ಗಳು ಮಾತ್ರವಲ್ಲದೆ, ಫ್ರಾಂಚೈಸಿ ಸಿಬ್ಬಂದಿ, ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳನ್ನೂ ವಿಪಿಎಚ್ ಹೆಲ್ತ್‌ಕೇರ್ ಪರೀಕ್ಷೆಗೆ ಒಳಪಡಿಸಲಿದೆ. ಕ್ವಾರಂಟೈನ್ ಅವಧಿಯಲ್ಲಿ ಎಲ್ಲರೂ 1, 3 ಮತ್ತು 6ನೇ ದಿನ ಪರೀಕ್ಷೆಗೆ ಒಳಪಟ್ಟ ಬಳಿಕ ಟೂರ್ನಿಯ ವೇಳೆ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ.

    ಯುಎಇ ಯಾರಿಗೆ ವರದಾನ? ಶುರುವಾಗಿದೆ ಲೆಕ್ಕಾಚಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts