More

    ನಗರ ಮಧ್ಯೆ ಆಟಿಕಳೆಂಜನಿಗೆ ಮರುಜೀವ: ಸುರತ್ಕಲ್‌ನಲ್ಲಿ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ

    ಮಂಗಳೂರು: ನಗರೀಕರಣದ ನಡುವೆ ಬಹುತೇಕ ಕಣ್ಮರೆಯಾಗುತ್ತಿರುವ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಪ್ರತೀಕ ‘ಆಟಿಕಳೆಂಜ’ನಿಗೆ ಮತ್ತೆ ಮರು ಶಕ್ತಿ ನೀಡುವ ಕಾಯಕಕ್ಕೆ ಇಲ್ಲಿನ ಸುರತ್ಕಲ್ ಸಮೀಪದ ಕೆಲವರು ಕೈಹಾಕಿದ್ದಾರೆ.

    ವಿನಾಯಕ ಫ್ರೆಂಡ್ಸ್ ಕ್ಲಬ್ ಮೂರನೇ ಬ್ಲಾಕ್ ಕಾಟಿಪಳ್ಳ ಮತ್ತು ಗಗ್ಗರ ದೈವೊಲೆನ ಪದಿನಾಜಿ ಕಟ್ಲೆ ಸಹಯೋಗದಲ್ಲಿ ‘ಆಟಿ ಕಳೆಂಜ ನಿಮ್ಮ ಮನೆಗೆ’ ಎಂಬ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ದೈವದ ಮಧ್ಯಸ್ಥ ರವಿರಾಜ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಶುಭ ಕೋರಿದರು. ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಹರೀಶ್ ಬಂಗೇರ, ವಿನಾಯಕ ಪ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ವಿಶ್ವನಾಥ ಮಾನೆ, ಗಗ್ಗರ ದೈವೊಲೆನ ಪದಿನಾಜಿ ಕಟ್ಲೆ ಇದರ ಸುನೀಲ್ ಕೃಷ್ಣಾಪುರ ಇದ್ದರು. ನವೀನ್ ಕುತ್ತಾರ್ ತಂಡದ ಆಟಿ ಕಳೆಂಜವನ್ನು ಕಾಟಿಪಳ್ಳದ ನಾಗರಿಕರು ಪ್ರಶಂಸಿಸಿದ್ದಾರೆ.

    ಆಟಿ ಕಳೆಂಜ ಹಿನ್ನೆಲೆ: ಊರಿಗೆ ಬಂದ ಮಾರಿ, ಕಷ್ಟಕಾರ್ಪಣ್ಯ ತೊಡೆದು ಹಾಕಲೆಂದು ದ.ಕ ಜಿಲ್ಲೆಯಲ್ಲಿ ಆಷಾಢ ಮಾಸದಲ್ಲಿ ‘ಆಟಿ ಕಳೆಂಜ’ ಎಂಬ ಜನಪದ ಕಲಾ ಪ್ರಕಾರ ಆಚರಣೆಯಲ್ಲಿದೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ ಸಮುದಾಯದವರು ಮಾಡುತ್ತಾರೆ. ತೆಂಗಿನ ಗರಿಗಳ ಉಡುಗೆ, ಕೆಂಪು ಚಲ್ಲಣ, ಅಡಕೆ ಹಾಳೆಯ ಶಿರಸ್ತ್ರಾಣ, ತೆಂಗಿನ ಗರಿಗಳ ಕೊಡೆ ಹಿಡಿದು ಮನೆಮನೆಗೆ ತೆರಳಿ ಪಾಡ್ದನ, ತೆಂಬರೆಯ ನಾದಕ್ಕೆ ಹೆಜ್ಜೆ ಹಾಕುತ್ತಾನೆ. ಹೀಗೆ ಬಂದ ಕಳೆಂಜನಿಗೆ ಗೆರಸೆಯಲ್ಲಿ ಭತ್ತ ಅಥವಾ ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಿಲು, ಸ್ವಲ್ಪ ಅಟ್ಟದ ಮಸಿ ಇಟ್ಟುಕೊಡುತ್ತಾರೆ.

    ಅಲ್ಲದೆ ಆತ ಅಂಗಳ ಇಳಿದು ಹೋಗುವಾಗ ಸುಣ್ಣ ಮಿಶ್ರಿತ ಅರಿಶಿಣದ ನೀರಿನಲ್ಲಿ ಆತನಿಗೆ ಆರತಿ ಎತ್ತಿ ಆ ನೀರನ್ನು ದಾರಿಗಡ್ಡವಾಗಿ ಉದ್ದಕ್ಕೆ ಚೆಲ್ಲುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎನ್ನುವುದು ತುಳುನಾಡ ಜನರ ನಂಬಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts