More

    ಗುತ್ತಿಗೆಯಲ್ಲಿ ಅಕ್ರಮ, ಶೇ. 40 ಕಮಿಷನ್​: ನ್ಯಾಯಾಂಗ ತನಿಖೆ ಕೋರಿ ರಾಜ್ಯಪಾಲರನ್ನು ಭೇಟಿಯಾದ ಆಪ್​

    ಬೆಂಗಳೂರು: ಗುತ್ತಿಗೆ ನೀಡುವಲ್ಲಿ ನಡೆದ ಅಕ್ರಮ ಹಾಗೂ ಶೇ. 40 ಕಮಿಷನ್​ ಪಡೆದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿರುವ ಆಮ್​ ಆದ್ಮಿ ಪಕ್ಷದ ಮುಖಂಡರು ಇಂದು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಇಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರನ್ನು ಭೇಟಿಯಾದ ಆಪ್​ ಮುಖಂಡರು, ತಮ್ಮ ಮನವಿ ಪತ್ರವನ್ನು ಅವರಿಗೆ ಸಲ್ಲಿಸಿ ನ್ಯಾಯಾಂಗ ತನಿಖೆಗಾಗಿ ಕೇಳಿಕೊಂಡರು.

    ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ 2021ರ ಜುಲೈ 6ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಗುತ್ತಿಗೆ ಕಾಮಗಾರಿಗಳಲ್ಲಿನ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆ, ಬೃಹತ್‌ ನೀರಾವರಿ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ಎಷ್ಟೆಷ್ಟು ಶೇಕಡಾವಾರು ಮೊತ್ತ ಅಕ್ರಮವಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಇದೊಂದು ಗಂಭೀರ ಆರೋಪವಾಗಿದ್ದು, ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅಗತ್ಯ ಎಂದು ರಾಜ್ಯಪಾಲರಲ್ಲಿ ಕೋರಿಕೊಳ್ಳಲಾಗಿದೆ ಎಂದು ಪೃಥ್ವಿ ರೆಡ್ಡಿ ವಿವರಿಸಿದರು.

    ಇದನ್ನೂ ಓದಿ: ವಿಧಾನಪರಿಷತ್ ಮಾಜಿ ಸದಸ್ಯನಿಗೀಗ ಬಂಧನದ ಭೀತಿ; ಮದುವೆ ವಿಚಾರದಲ್ಲಿ ಮಾಡಿದ್ದ ಜಾತಿ ನಿಂದನೆ..

    ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೆವು. ಮುಖ್ಯಮಂತ್ರಿಯವರು ಕಳೆದ ಮೂರು ತಿಂಗಳ ಅವಧಿಯ ಗುತ್ತಿಗೆಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಆದರೆ ಹಲವು ವರ್ಷಗಳಿಂದ ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿರುವುದರಿಂದ ಕೇವಲ ತಮ್ಮ ಅಧಿಕಾರಾವಧಿಯಲ್ಲಿನ ಮೂರು ತಿಂಗಳಿನ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವುದು ಸರಿಯಲ್ಲ. ಅಲ್ಲದೆ, ಅಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಶಾಸಕರು ಭಾಗಿಯಾದ ಆರೋಪ ಇರುವುದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ತನಿಖೆ ನಡೆಸುವುದಕ್ಕೆ ನಮ್ಮ ಆಕ್ಷೇಪವಿದೆ, ಹೀಗಾಗಿ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಪೃಥ್ವಿ ರೆಡ್ಡಿ ಹೇಳಿದರು.

    ಇದನ್ನೂ ಓದಿ: ದೇವಸ್ಥಾನಗಳ ಬಾಗಿಲು ಮುರಿದು ಒಳಹೊಕ್ಕು ವಿಗ್ರಹಗಳ ಧ್ವಂಸ; ಆರೋಪಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

    ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ತೆರಿಗೆದಾರರಿಗೆ ಅನ್ಯಾಯವಾಗುತ್ತಿದೆ. ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರಿಂದ ತೆರಿಗೆದಾರರಲ್ಲೂ ವ್ಯವಸ್ಥೆಯ ಬಗ್ಗೆ ಭರವಸೆ ಮೂಡುತ್ತದೆ. ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಕ್ರಮ ಆಸ್ತಿಯು ಸರ್ಕಾರದ ಬೊಕ್ಕಸವನ್ನು ಸೇರಿ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಆದ್ದರಿಂದ ತಾವುಗಳು ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿನ ಎಲ್ಲ ಗುತ್ತಿಗೆ ಕಾಮಗಾರಿಗಳ ಅಕ್ರಮ ಕುರಿತು ರಾಜ್ಯ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಪತ್ರದ ಮೂಲಕ ರಾಜ್ಯಪಾಲರನ್ನು ಕೋರಿರುವುದಾಗಿ ಅವರು ತಿಳಿಸಿದರು.
    ರಾಜ್ಯಪಾಲರ ಭೇಟಿ ಸಂದರ್ಭದ ಆಮ್​ ಆದ್ಮಿ ಪಕ್ಷದ ಮುಖಂಡರಾದ ಮೋಹನ್ ದಾಸರಿ, ಬಿ.ಟಿ. ನಾಗಣ್ಣ, ಜಗದೀಶ್ ಚಂದ್ರ, ಸುರೇಶ್ ರಾಥೋಡ್, ಕುಶಲ ಸ್ವಾಮಿ, ವಿಜಯ್‌ ಶಾಸ್ತ್ರಿಮಠ ಜೊತೆಯಲ್ಲಿದ್ದರು.

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ಸಾಲಿಗ್ರಾಮ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ; ಕೆಲಸವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts