More

    ವಿದೇಶಿ ನೌಕರಿ ಆಮಿಷ; ಅನಾಹುತದ ಸರಮಾಲೆ..

    ವಿದೇಶಿ ನೌಕರಿ ಆಮಿಷ; ಅನಾಹುತದ ಸರಮಾಲೆ..ಮಹಾನಗರದ ಪೊಲೀಸ್ ಠಾಣೆಯೊಂದಕ್ಕೆ ಬಂದ ಒಬ್ಬ ವ್ಯಕ್ತಿ ಹೀಗೆ ದೂರನ್ನಿತ್ತ: ನನ್ನ ಹೆಸರು ರಾಜಶೇಖರ್, 34 ವರ್ಷ, ಇಂಜಿನಿಯರಿಂಗ್ ಪದವಿ ಪಡೆದ ಕೂಡಲೇ ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯೊಂದರ ಉದ್ಯೋಗಕ್ಕೆ ಸೇರಿ ಉತ್ತಮ ಸಂಬಳ ಗಳಿಸುತ್ತಿದ್ದೆ. ಕೆಲ ಕಾಲದ ಬಳಿಕ ನನಗೆ ವಿದೇಶದಲ್ಲಿ ಕೆಲಸ ಮಾಡಿ ಹೆಚ್ಚಿನ ಹಣ ಗಳಿಸಬೇಕೆಂಬ ಆಸೆ ಮೂಡಿತು.

    ನನ್ನ ಸಹೋದ್ಯೋಗಿಯೊಬ್ಬ ತನಗೆ ದುಬೈನಲ್ಲಿರುವ ನೇಮಕಾತಿ ಸಂಸ್ಥೆಯೊಂದರ ಬಗ್ಗೆ ತಿಳಿದಿದ್ದು ಆ ಕಂಪನಿಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಮ್ಮಂತಹವರಿಗೆ ಕೆಲಸ ಕೊಡಿಸುತ್ತದೆಯೆಂದು ತಿಳಿಸಿ ಅದರ ವಿಳಾಸ ನೀಡಿದ. ಆ ಕಂಪನಿಗೆ ನನ್ನ ಬಯೋಡಾಟಾ ಕಳುಹಿಸಿದೆ. ಕೆಲ ದಿನಗಳ ನಂತರ ಉತ್ತರಿಸಿದ ಆ ಕಂಪನಿಯು ಬ್ಯಾಂಕಾಕ್​ನಲ್ಲಿರುವ ಸಂಸ್ಥೆಯೊಂದು ನನ್ನ ಬಗ್ಗೆ ಆಸಕ್ತಿ ಹೊಂದಿರುವುದೆಂದು ಹೇಳಿ ನನ್ನ ಸಂದರ್ಶನವನ್ನು ವಿಡಿಯೋ ಮೂಲಕ ಮಾಡಿತು. ನಾನು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದೇನೆಂದು ತಿಳಿಸಿ ಎರಡನೇ ಹಂತದ ಇಂಟರ್​ವ್ಯೂಗೆಂದು ದುಬೈಗೆ ಬರಹೇಳಿ ನನಗೆ ವಿಮಾನದ ಟಿಕೆಟ್ ಕಳಿಸಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿತು.

    ದುಬೈನಲ್ಲಿ ನನ್ನನ್ನು ಇಳಿಸಿದ್ದ ಹೊಟೇಲ್​ನಲ್ಲಿಯೇ ಸಂದರ್ಶನ ನಡೆಯಿತು. ಸಂದರ್ಶನಕ್ಕಾಗಿ ನನ್ನಂತೆಯೇ ಭಾರತ ಮತ್ತು ಪಾಕಿಸ್ತಾನಗಳಿಂದ 30 ಜನರು ಬಂದಿದ್ದು ನನ್ನನ್ನೂ ಸೇರಿ ಒಟ್ಟು 11 ಜನರನ್ನು ಆಯ್ಕೆ ಮಾಡಿದರು. ತಕ್ಷಣದಿಂದಲೇ ನಮ್ಮ ಸೇವೆ ಬೇಕಾಗಿರುವುದರಿಂದ ಕೂಡಲೇ ಥೈಲೆಂಡ್​ಗೆ ಹೋಗಲು ನಮಗೆ ಸೂಚಿಸಿದರು. ನಾವು ಪ್ರತಿಭಟಿಸಿದಾಗ ನಮಗೆ 10,000 ಡಾಲರ್​ಗಳನ್ನು ಇನ್ಸೆಂಟಿವ್ ಎಂದು ಕೂಡಲೇ ಕೊಡುವುದಲ್ಲದೆ, ಮೂರು ತಿಂಗಳ ಕೆಲಸದ ನಂತರ ನಮ್ಮ ಮನೆಗೆ ಹೋಗಲು ಒಂದು ತಿಂಗಳ ರಜೆ ಕೊಡಲಾಗುವುದೆಂದು ಹೇಳಿದರು. ಈ ಆಮಿಷಕ್ಕೆ ಒಪ್ಪಿದ ನಾವು 6 ಜನರನ್ನು ಬ್ಯಾಂಕಾಕ್​ಗೆ ಕರೆದೊಯ್ದರು. ನಮ್ಮ ವಿಮಾನವು ಥೈಲೆಂಡ್​ನಲ್ಲಿ ಇಳಿದ ಕೂಡಲೇ ಬ್ಯಾಂಕಾಕ್​ನ ವೀಸಾವನ್ನು ಕೊಡಿಸಿದರು.

    ನಂತರ ನಮ್ಮನ್ನು ವ್ಯಾನಿನಲ್ಲಿ ಕರೆದೊಯ್ಯಲಾಯಿತು. ನಮ್ಮ ವಾಹನ ಹೊರ ಊರಿಗೆ ಹೋಗುತ್ತಿರುವುದನ್ನು ಕಂಡು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಎಂದು ವಿಚಾರಿಸಿದಾಗ, ತಮ್ಮ ಕಚೇರಿಯು ಬ್ಯಾಂಕಾಕಿನಿಂದ 400 ಕಿ.ಮೀ ದೂರದಲ್ಲಿರುವುದಾಗಿ ತಿಳಿಸಿದರು. ಸುಮಾರು ಐದು ಗಂಟೆಗಳ ಪ್ರಯಾಣದ ನಂತರ ರಸ್ತೆಯಲ್ಲಿಯೇ ವ್ಯಾನನ್ನು ನಿಲ್ಲಿಸಿ ನಮ್ಮನ್ನು ಇಳಿಯಲು ಹೇಳಿದರು. ಆಗ ರಾತ್ರಿ ಹತ್ತಾಗಿತ್ತು. ನಾವು ಮುಂದೆ ಅರಣ್ಯ ಪ್ರದೇಶದಲ್ಲಿ ಹೋಗಬೇಕಾಗಿದ್ದು ಅಲ್ಲಿ ಕಳ್ಳರ ಭಯವಿರುವುದರಿಂದ ನಮ್ಮನ್ನು ಶಸ್ತ್ರಧಾರಿ ಪೊಲೀಸರಿರುವ ವಾಹನದಲ್ಲಿ ಕರೆದೊಯ್ಯಬೇಕಾಗಿದೆ ಎಂದು ಹೇಳಿ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಟ್ರಕ್ಕೊಂದನ್ನು ಏರಲು ಹೇಳಿದರು. ಅದರಲ್ಲಿ ನಾಲ್ವರು ಸಶಸ್ತ್ರಧಾರಿ ವ್ಯಕ್ತಿಗಳಿದ್ದರು.

    ಎರಡು ಗಂಟೆಗಳ ಪ್ರಯಾಣದ ನಂತರ ಒಂದು ನದಿಯ ಮುಂದೆ ನಮ್ಮನ್ನಿಳಿಸಿದರು. ನಂತರ ದೋಣಿಯೊಂದರಲ್ಲಿ ನದಿಯನ್ನು ದಾಟಿಸಿ ಆಚೆ ದಡದಲ್ಲಿದ್ದ ಇನ್ನೊಂದು ಟ್ರಕ್ಕನ್ನು ಏರಲು ಹೇಳಿದರು. ಅದರಲ್ಲಿ ಚೀನಿಯರಂತೆ ಕಾಣುತ್ತಿದ್ದ ಹಲವು ಸೈನಿಕರಿದ್ದರು. ಬೆಳಕಾಗುವ ವೇಳೆಗೆ ನಮ್ಮ ವಾಹನ ಒಂದು ಕ್ಯಾಂಪಿನ ಮುಂದೆ ಬಂದು ನಿಂತಿತು. ಸೈನಿಕರ ತಾಣದಂತೆ ಕಾಣುತ್ತಿದ್ದ ಆ ಕ್ಯಾಂಪ್​ನಲ್ಲಿ ಹಲವಾರು ದೊಡ್ಡ ಷೆಡ್​ಗಳಿದ್ದವು. ಅಂತಹ ಒಂದು ಷೆಡ್​ನಲ್ಲಿ ನಮ್ಮನ್ನು ತಂಗಲು ಹೇಳಿದರು. ನಾವು ಪ್ರತಿಭಟಿಸಿದಾಗ ಸೈನಿಕರು ನಮ್ಮನ್ನು ಹೊಡೆದು ಸುಮ್ಮನಾಗಿಸಿದರು. ಅಲ್ಲಿಗೆ ಬಂದ ಅಧಿಕಾರಿಯೊಬ್ಬ, ‘ನೀವು ಈಗ ಥೈಲೆಂಡ್ ದೇಶದಲ್ಲಿರದೆ ಮ್ಯಾನ್ಮಾರ್ (ಬರ್ವ) ನಲ್ಲಿದ್ದೀರಿ. ನೀವು ಕೆಲಸ ಮಾಡಬೇಕಿರುವುದು ಇದೇ ಕ್ಯಾಂಪಿನಲ್ಲಿ’ ಎಂದಾಗ ನಮಗೆ ಜಂಘಾಬಲವೇ ಉಡುಗಿಹೋಯಿತು. ನಂತರ ಅವರು ನಮ್ಮ ಮೊಬೈಲ್ ಮತ್ತು ಪಾಸ್​ಪೋರ್ಟ್​ಗಳನ್ನು ಕಿತ್ತಿಟ್ಟುಕೊಂಡರು. ನಮಗೆ ಬೇರೆ ಬಟ್ಟೆ ಧರಿಸಲು ಕೊಟ್ಟು ನಮ್ಮ ಭಾವಚಿತ್ರವನ್ನು ತೆಗೆದುಕೊಂಡರು.

    ಆ ಕ್ಯಾಂಪಿನ ಜೀವನ ದುಸ್ತರವಾಗಿತ್ತು. ವಿಪರೀತ ಸೆಖೆಯಾಗುತ್ತಿತ್ತು. ಅರಣ್ಯ ಪ್ರದೇಶವಾದ್ದರಿಂದ ಸೊಳ್ಳೆಗಳ ಕಾಟ. ಒಂದು ಷೆಡ್ ನಮ್ಮ ಕಚೇರಿಯಾಗಿತ್ತು. ಅಲ್ಲಿ 100ಕ್ಕಿಂತ ಹೆಚ್ಚು ಕಂಪ್ಯೂಟರ್​ಗಳು ಇದ್ದವು. ಅಲ್ಲಿ ಏರ್ ಕಂಡಿಷನ್ ವ್ಯವಸ್ಥೆಯಿತ್ತು. ಅಲ್ಲಿ ಕೆಲವು ಹೆಣ್ಣು ಮಕ್ಕಳೂ ಕೆಲಸ ಮಾಡುತ್ತಿದ್ದರು. ಅಲ್ಲಿದ್ದ ಹೆಚ್ಚಿನ ಜನ ಚೀನೀಯರಂತೆ ಕಾಣುತ್ತಿದ್ದರು. ನಾವು ಮಾಡಬೇಕಾದ ಕೆಲಸ ಏನೆಂದು ಕೇಳಿದಾಗ, ಇದೊಂದು ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡುವ ಕಂಪನಿ. ನೀವು ಬೇರೆ ಬೇರೆ ದೇಶಗಳಲ್ಲಿನ ಜನರನ್ನು ಸಂರ್ಪಸಿ ಅವರಿಗೆ ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ತೊಡಗಿಸಿ ಹಣವನ್ನು ದ್ವಿಗುಣಗೊಳಿಸಬಹುದೆಂದು ನಂಬಿಸಬೇಕು. ಆರಂಭದಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣ ಮಾಡಿ ಅವರ ವಿಶ್ವಾಸ ಗಳಿಸಬೇಕು. ನಂತರ ಹೆಚ್ಚಿನ ಹಣ ತೊಡಗಿಸಲು ಪ್ರಚೋದಿಸಿ ಆ ಹಣ ಬಂದ ಕೂಡಲೇ ಅವರನ್ನು ಬ್ಲಾಕ್ ಮಾಡಿ ಅವರಿಂದ ದೂರವಾಗಬೇಕು. ಇದೇ ನಮ್ಮ ಕೆಲಸ ಎಂದರು.

    ನಾವೆಲ್ಲ ಹೌಹಾರಿ, ‘ಸರ್ ಇದು ಸೈಬರ್ ಕ್ರೈಮ್ ಅಪರಾಧವಾಗುತ್ತದೆ. ಇದಕ್ಕೆ ಭಾರಿ ಪ್ರಮಾಣದ ಶಿಕ್ಷೆಯಾಗುತ್ತದೆ’ ಎಂದು ಹೇಳಿ ಇಂತಹ ಅಪರಾಧಗಳನ್ನು ಮಾಡಲು ನಮಗೆ ಸಾಧ್ಯವಿಲ್ಲವೆಂದೆವು. ಅದಕ್ಕವರು ನಾವೀಗ ಇರುವುದು ಮ್ಯಾನ್ಮಾರ್​ನ ಮ್ಯಾವಡ್ಡಿ ಎನ್ನುವ ಪ್ರಾಂತದಲ್ಲಿ. ಇಲ್ಲಿ ಆ ದೇಶದ ಸರ್ಕಾರದ್ದಾಗಲೀ, ಸೈನ್ಯದ್ದಾಗಲೀ ಅಧಿಕಾರ ನಡೆಯುವುದಿಲ್ಲ. ಇದು ನಮ್ಮ ಅಧೀನದಲ್ಲಿರುವ ಪ್ರದೇಶವಾದ್ದರಿಂದ ಇಲ್ಲಿ ನಡೆಯುವ ಯಾವುದೂ ಅಪರಾಧವೇ ಅಲ್ಲವೆಂದರು. ನಾವೆಲ್ಲರೂ ನಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಗೋಗರೆದಾಗ, ನಿಮ್ಮ ಮೇಲೆ ಸಾಕಷ್ಟು ಹಣ ಖರ್ಚು ಮಾಡಿ ಇಲ್ಲಿ ಕರೆತಂದಿರುವ ಕಾರಣ ಸ್ವದೇಶಕ್ಕೆ ವಾಪಸ್ ಕಳಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು. ನಾವು ಜೀತದ ಗುಲಾಮರಾಗಿದ್ದೇವೆ ಎಂದು ಆಗ ಖಾತ್ರಿಯಾಯಿತು.

    ನಮ್ಮಿಂದ ಪ್ರತಿದಿನ ಸುಮಾರು 15 ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದರು. ದಿನಕ್ಕೆ ಮೂರು ಸಲ ಹೊಟ್ಟೆ ತುಂಬಾ ಊಟ ಕೊಡುತ್ತಿದ್ದರು. ಬೇಕಾದವರಿಗೆ ಸಿಗರೇಟ್, ಮದ್ಯ ಕೊಡುತ್ತಿದ್ದರು. ಕಾಫಿ, ಟೀ ಯಥೇಚ್ಛವಾಗಿ ಸಿಗುತ್ತಿತ್ತು. ಯಾರಾದರೂ ಕೆಲಸ ಮಾಡುವಾಗ ನಿದ್ದೆ ಮಾಡಿದರೆ ಅವರಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಎಬ್ಬಿಸಲಾಗುತ್ತಿತ್ತು.

    ಒಂದು ವಾರ ಕಳೆಯುವಷ್ಟರಲ್ಲಿ ನಮಗೆ ಜೈಲಿನಲ್ಲಿದ್ದ ಅನುಭವವಾಯಿತು. ಹೇಗಾದರೂ ಮಾಡಿ ಊರಿಗೆ ತಪ್ಪಿಸಿಕೊಂಡು ಹೋಗಬೇಕೆಂದು ಹಲವಾರು ಪ್ರಯತ್ನಗಳನ್ನು ಮಾಡಿದೆವು. ಆ ಜಾಗವು ದಟ್ಟ ಅರಣ್ಯ ಪ್ರದೇಶದಲ್ಲಿದ್ದ ಕಾರಣ ಎಲ್ಲಿಗೆ ಹೋದರೆ ಏನಾಗುತ್ತದೆ ಎಂದು ಗೊತ್ತಿರಲಿಲ್ಲ ಮತ್ತು ಸ್ಥಳೀಯರ ಭಾಷೆ ಕೂಡಾ ನಮಗೆ ಬರುತ್ತಿರಲಿಲ್ಲ. ಆ ಸ್ಥಳದಲ್ಲಿ ಇಬ್ಬರನ್ನು ಬಿಟ್ಟರೆ ಯಾರಿಗೂ ಇಂಗ್ಲೀಷ್ ಬರುತ್ತಿರಲಿಲ್ಲ. ನಾವು ಕಂಗಾಲಾದೆವು. ಹೀಗೆ ಸುಮಾರು ಮೂರು ತಿಂಗಳು ಕಳೆದವು.

    ಏತನ್ಮಧ್ಯೆ ನಮ್ಮ ಕುಟುಂಬದ ಸದಸ್ಯರು ನಮ್ಮಿಂದ ಯಾವುದೇ ಸಂದೇಶವಿಲ್ಲದೇ ಗಾಬರಿಗೊಂಡು ಹುಡುಕಲು ಸಕಲ ಯತ್ನಗಳನ್ನು ಮಾಡುತ್ತಿದ್ದರು. ನಾವು ಬಂದಿಯಾದ 101ನೇ ದಿನ ನಮ್ಮೊಡನಿದ್ದ ತಮಿಳುನಾಡಿನ ಸಹೋದ್ಯೋಗಿಯೊಬ್ಬ ಕ್ಯಾಂಪಿನ ಕಾವಲುಗಾರನೊಬ್ಬನ ಪರಿಚಯ ಮಾಡಿಕೊಂಡು ಅವನ ಮೊಬೈಲ್ ಪಡೆದು ನಮ್ಮ ಸಂಕಷ್ಟದ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ. ಅದರಲ್ಲಿ ಭಾರತ ಮತ್ತು ತಮಿಳುನಾಡು ಸರ್ಕಾರಕ್ಕೆ ಟ್ಯಾಗ್ ಮಾಡಿದ. ಈ ವಿಡಿಯೋ ಭಾರತದಲ್ಲಿ ಬಹಿರಂಗವಾಗುತ್ತಲೇ ಭಾರತ ಸರ್ಕಾರ ಎಚ್ಚೆತ್ತು ನಮ್ಮನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡತೊಡಗಿತು.

    ಆದರೆ, ನಾವಿದ್ದ ಪ್ರದೇಶವು ಗೆರಿಲ್ಲಾಗಳ ವಶದಲ್ಲಿದ್ದ ಕಾರಣ ಮ್ಯಾನ್ಮಾರ್ ಸರ್ಕಾರವೂ ಏನೂ ಮಾಡುವಂತಿರಲಿಲ್ಲ. ಭಾರತ ಸರ್ಕಾರದ ತೀವ್ರ ಒತ್ತಡದಿಂದಾಗಿ ಆ ದೇಶದ ಸೈನಿಕರು ನಮ್ಮ ಕ್ಯಾಂಪಿಗೆ ಮುತ್ತಿಗೆ ಹಾಕಿ ನಮ್ಮನ್ನು ರಕ್ಷಿಸಲು ಹೊರಟಿದ್ದರು. ಈ ಮಾಹಿತಿಯನ್ನರಿತ ನಾವಿದ್ದ ಕ್ಯಾಂಪಿನ ಮುಖಂಡ ಕೂಡಲೇ ನಮ್ಮೆಲ್ಲರನ್ನೂ ಕರೆಸಿದ. ನಮ್ಮಿಂದ ಕಸಿದುಕೊಂಡಿದ್ದ ಮೊಬೈಲ್ ಫೋನುಗಳು ಮತ್ತು ಪಾಸ್​ಪೋರ್ಟ್​ಗಳನ್ನು ನಮಗೆ ಹಿಂದಿರುಗಿಸಲು ಸೂಚಿಸಿದ. ಇನ್ನು ಒಂದೇ ಗಂಟೆಯ ಅವಧಿಯಲ್ಲಿ ಈ ಕ್ಯಾಂಪಿನ ಹಿಂದಿನ ಗೇಟಿನಿಂದ ಹೊರಡಿ ಎಂದ. ನಾವು ಬೇಗಬೇಗನೇ ನಮ್ಮ ವಸ್ತುಗಳನ್ನು ತೆಗೆದುಕೊಂಡು ಕ್ಯಾಂಪಿನ ಹೊರಗೆ ಬಂದೆವು. ಫೋನುಗಳಲ್ಲಿ ಇಂಟರ್​ನೆಟ್ ಇರಲಿಲ್ಲವಾದ್ದರಿಂದ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ತಿಳಿಯಲಿಲ್ಲ. ಒಬ್ಬ ಕಾವಲುಗಾರ ಹಾದಿಯನ್ನು ತೋರಿಸಿದ. ಸುಮಾರು 5 ಕಿಮೀ ಅರಣ್ಯದಲ್ಲಿ ನಡೆದ ನಂತರ ನಾವು ಬಂದ ನದಿ ತೀರವನ್ನು ತಲುಪಿ ಅಲ್ಲಿದ್ದ ಅಂಬಿಗನಿಗೆ ನಮ್ಮ ಬಂಗಾರದ ಆಭರಣಗಳನ್ನು ನೀಡಿ ದಡ ದಾಟಿ ಥೈಲೆಂಡ್ ದೇಶವನ್ನು ಪ್ರವೇಶಿಸಿದೆವು.

    ಸ್ವಲ್ಪ ದೂರ ನಡೆದುಕೊಂಡು ಹೋದಾಗ ಥೈಲೆಂಡ್ ಪೊಲೀಸರು ನಮ್ಮನ್ನು ಬಂಧಿಸಿ ಹತ್ತಿರದ ಕಚೇರಿಯೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮನ್ನು ಹೊಡೆದು ನಾವು ಎಲ್ಲಿಂದ ಬಂದೆವೆಂದು ವಿಚಾರಿಸಿದರು. ನಾವು ಥೈಲೆಂಡ್​ನ ವೀಸಾ ತೋರಿಸಿದ ನಂತರ ನಮ್ಮನ್ನು ಟ್ರಕ್ಕಿನಲ್ಲಿ ಕೂರಿಸಿಕೊಂಡು ಬ್ಯಾಂಕಾಕ್​ಗೆ ಕರೆದುಕೊಂಡು ಬಂದರು. ಅಲ್ಲಿ ಡಿಟೆನ್​ಷನ್ ಸೆಂಟರ್ ಎನ್ನುವ ಜಾಗದಲ್ಲಿ ಇಟ್ಟರು. ಅಲ್ಲಿ ನಮ್ಮಂತೆಯೇ ಥೈಲೆಂಡ್​ಗೆ ಬಂದಿದ್ದ ಹಲವಾರು ಜನರಿದ್ದರು. ಎರಡು ದಿನಗಳು ಅಲ್ಲಿ ಕಳೆದ ನಂತರ ನಮ್ಮನ್ನು ಭಾರತದ ರಾಯಭಾರಿ ಕಚೇರಿಯವರು ಬಿಡಿಸಿಕೊಂಡು ಬಂದರು. ಅವರು ನಮಗೆ ಭಾರತಕ್ಕೆ ಮರಳುವ ವಿಮಾನದ ಟಿಕೆಟ್ ಕೊಟ್ಟು ದೇಶಕ್ಕೆ ವಾಪಸ್ ಕಳುಹಿಸಿದರು. ನಮಗೆ ಭಾಷೆ ಬರದಿದ್ದ ಕಾರಣ ತೀರಾ ತೊಂದರೆಗೀಡಾಗಬೇಕಾಯಿತು.’

    ಪೊಲೀಸರು ಮಾನವ ಕಳ್ಳಸಾಗಾಣಿಕೆ ಪ್ರಕರಣ ದಾಖಲು ಮಾಡಿದರೂ ಯಾವುದೇ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಏಕೆಂದರೆ ಅವರೆಲ್ಲಾ ವಿದೇಶದಲ್ಲಿದ್ದಾರೆ. ‘ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು, ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು, ಮುಟ್ಟಿಮುಟ್ಟದವೋಲುಪಾಯದಿಂ ನೋಡದನು, ಗಟ್ಟಿ ಪುರುಳೇನಲ್ಲ ಮಂಕುತಿಮ್ಮ’ ಎನ್ನುವಂತೆ ವಿದೇಶದಲ್ಲಿ ಕೆಲಸಕ್ಕೆ ಸೇರುವ ಮುನ್ನ ಆ ಸಂಸ್ಥೆಗಳು ತೋರುವ ಆಸೆ ಆಮಿಷಗಳಿಗೆ ಬಲಿಯಾಗದೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದೇ ಮುನ್ನಡೆಯುವುದು ವಿಹಿತ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts