More

    ಡೆಂಘೆ ಜ್ವರದಿಂದ ಯುವಕ ಸಾವು

    ಬೇಲೂರು: ಡೆಂಘೆ ಜ್ವರದಿಂದ ಬಳಲುತ್ತಿದ್ದ ಪಟ್ಟಣ ಪುರಸಭೆಯ 23ನೇ ವಾರ್ಡ್‌ನ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

    ಶಾರುಕ್ (24) ಮೃತಪಟ್ಟ ಯುವಕ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಕಳೆದ 6 ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ಶಾರುಕ್ ಎರಡು ದಿನದಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ತಲೆನೋವು ಹಾಗೂ ಸುಸ್ತು ಎಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಡೆಂಘೆ ಜ್ವರ ಕಮ್ಮಿಯಾಗದ ಕಾರಣ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಂ.ಮಮತಾ, ಪುರಸಭೆ ಮುಖ್ಯಾಧಿಕಾರಿ ಇಂದು, ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ಆಕ್ರೋಶ: ಪುರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಡೆಂಘೆ ಜ್ವರ ಹೆಚ್ಚಳವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳಿಂದ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದಾರೆ. ಇದಕ್ಕೆ ಸುತ್ತಲಿನ ಅಸ್ವಚ್ಛತೆಯೇ ಕಾರಣ. ಎಲ್ಲೆಂದರಲ್ಲಿ ಕಸ ಕಡ್ಡಿ ಬಿದ್ದಿರುವುದಲ್ಲದೆ ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಇದರಿಂದ ದಿನದಿಂದ ದಿನಕ್ಕೆ ವಿವಿಧ ರೋಗಗಳು ಹರಡಲು ಕಾರಣವಾಗುತ್ತಿದೆ. ಮುಂದೆ ಇಂತಹ ಘಟನೆಗೆ ಕಾರಣವಾಗದಂತೆ ಪುರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ ದಿನನಿತ್ಯ ವಾರ್ಡಿನಲ್ಲಿ ಸ್ವಚ್ಛಗೊಳಿಸಲು ತಿಳಿಸಬೇಕೆಂದು ತಹಸೀಲ್ದಾರ್‌ಗೆ ಮನವಿ ಮಾಡಿದರು.

    23ನೇ ವಾರ್ಡಿನ ಸ್ವಚ್ಛತೆಯ ಬಗ್ಗೆ ತಹಸೀಲ್ದಾರ್ ಎಂ.ಮಮತಾ ಪರಿಶೀಲಿಸಿದರು. ಚರಂಡಿಗಳಲ್ಲಿರುವ ಕಸ ಕಡ್ಡಿಗಳನ್ನು ನೋಡಿ ಸ್ಥಳದಲ್ಲಿದ್ದ ಪುರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಅಸ್ವಚ್ಛತೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವಾರ್ಡ್ ಸೇರಿದಂತೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಪರಿಶೀಲಿಸಿ ಯಾವುದೇ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

    ಪುರಸಭೆ ಮುಖ್ಯಾಧಿಕಾರಿ ಇಂದೂ, ಆರೋಗ್ಯಾಧಿಕಾರಿ ಲೋಹಿತ್, ಸದಸ್ಯ ಅಕ್ರಂಪಾಷಾ, ಆರೋಗ್ಯ ಇಲಾಖೆಯ ಪುಷ್ಪ ಸೇರಿದಂತೆ ಇತರರಿದ್ದರು. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts