More

    ಬದಲಾದ ರಾಜಕೀಯ ಸಮೀಕರಣ; ಸದ್ದು ಮಾಡಿದ ಭ್ರಷ್ಟಾಚಾರ, ಜಾತಿಗಣತಿ ವಿವಾದಗಳು 

    ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಆರೋಪ-ಪ್ರತ್ಯಾರೋಪಗಳ ಭರಾಟೆ, ರ್ಯಾಲಿಗಳ ಅಬ್ಬರದ ನಡುವೆ ಫಲಿತಾಂಶ ಪ್ರಕಟವಾದಾಗ ರಾಜಕೀಯ ಸಮೀಕರಣ ಬದಲಾಗಿದ್ದು ಸ್ಪಷ್ಟವಾಯಿತು. ಕಾಂಗ್ರೆಸ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡರೆ, ಸೋಲು ಕಂಡ ಬಿಜೆಪಿ ಪ್ರತಿಪಕ್ಷ ಸ್ಥಾನಕ್ಕೆ ಬಂತು.

    ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಚಟುವಟಿಕೆಗಳು ಬಿರುಸಾಗಿದ್ದರೆ, ಕೊನೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯತ್ತ ಗಮನ ಕೇಂದ್ರೀಕೃತವಾಗಿದೆ. ವಿಧಾನಸಭಾ ಚುನಾವಣೆ ಸಿದ್ಧತೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವಾಗಲೇ ಗುತ್ತಿಗೆದಾರರ ಸಂಘ ಪ್ರಧಾನಿಗೆ ಬರೆದ 40 ಪರ್ಸೆಂಟ್ ಕಮೀಷನ್ ಆರೋಪದ ಪತ್ರ, ಕಾಂಗ್ರೆಸ್​ನಿಂದ ನಡೆದ ‘ಪೇ ಸಿಎಂ’ ಪೋಸ್ಟರ್ ವಾರ್ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದವು. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ವಿಜಯವನ್ನು ದಾಖಲಿಸಿ ಸರ್ಕಾರ ರಚನೆ ಮಾಡಿದರೆ, ಆಡಳಿತ ಪಕ್ಷದಲ್ಲಿದ್ದ ಬಿಜೆಪಿ ಹೀನಾಯ ಸೋಲನ್ನು ಕಾಣಬೇಕಾಯಿತು. ಜೆಡಿಎಸ್ ನಷ್ಟವನ್ನೇ ಅನುಭವಿಸಿತು.

    ಚುಕ್ಕಾಣಿ ಹಿಡಿದ ಕಾಂಗ್ರೆಸ್: ಕಳೆದ ಐದು ವರ್ಷಗಳ ಪೈಕಿ ನಾಲ್ಕು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್​ಗೆ ಈ ಚುನಾವಣೆ ‘ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿಯನ್ನುಂಟು ಮಾಡಿತ್ತು. ಸದನದ ಒಳಗೆ ಹಾಗೂ ಹೊರಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೋಡೆತ್ತಿನ ರೀತಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. ಪಕ್ಷದಲ್ಲಿನ ಒಗ್ಗಟ್ಟು, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಹೀಗೆ ಎಲ್ಲಿಯೂ ಎಡವಲಿಲ್ಲ. ಪರಿಣಾಮ, ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾದರು.

    ಅಧಿಕಾರ ಕಳೆದುಕೊಂಡ ಬಿಜೆಪಿ: ಆಂತರಿಕ ಕಚ್ಚಾಟದ ಫಲವಾಗಿಯೇ ನಕಾರಾತ್ಮಕ ವಿಷಯಗಳಿಗೆ ಹೆಚ್ಚು ಸುದ್ದಿಯಾಗಿದ್ದು ಬಿಜೆಪಿ. ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ವರಿಷ್ಠರು ತಮ್ಮ ಹೆಗಲ ಮೇಲೆ ಹಾಕಿಕೊಂಡು ರಾಜ್ಯ ನಾಯಕರನ್ನು ನಿರ್ಲಕ್ಷಿಸಿದರು. ಪರಿಣಾಮ, ಚುನಾವಣೆಯಲ್ಲಿ ಸೋಲು ಉಂಟಾಯಿತು. ಆರು ತಿಂಗಳ ನಂತರ ಪ್ರತಿಪಕ್ಷದ ನಾಯಕರಾಗಿ ಆರ್. ಅಶೋಕ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದರು. ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್, ಸದಾನಂದಗೌಡ ಹಾಗೂ ಇತರರು ಟೀಕೆಗಳನ್ನು ಇನ್ನೂ ಮುಂದುವರಿಸಿದ್ದಾರೆ.

    ಗ್ಯಾರಂಟಿಗಳ ಜಾರಿ: ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳ ಭರವಸೆಯನ್ನು ನೀಡಿತ್ತು. ಸರ್ಕಾರ ರಚನೆಯಾದ ಮೊದಲ ಸಂಪುಟದಲ್ಲಿಯೇ ಐದು ಗ್ಯಾರಂಟಿಗಳಿಗೆ ಅನುಮೋದನೆ ನೀಡಲಾಯಿತು. ಮಹಿಳೆಯರ ಉಚಿತ ಪ್ರಯಾಣ ‘ಶಕ್ತಿ’ಯಲ್ಲಿ ಇದುವರೆಗೂ ಒಂದು ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮಿ, ಐದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಹಾಗೂ ನಿರುದ್ಯೋಗಿ ಭತ್ಯೆ ನೀಡುವ ಯುವನಿಧಿ ಜಾರಿಯಾಗಿವೆ. ಸರ್ಕಾರ ಹೇಳುವ ಪ್ರಕಾರ ಈ ವರ್ಷಕ್ಕೆ 40 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. 4 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಆರೋಪಗಳಿವೆ.

    ಅಕ್ರಮಗಳ ತನಿಖೆ: ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೆಚ್ಚು ಸದ್ದು ಮಾಡಿದ್ದು ಹಿಂದಿನ ಸರ್ಕಾರದಲ್ಲಿ ನಡೆದಿದೆ ಎಂದು ಹೇಳಲಾದ ಅಕ್ರಮಗಳ ಕುರಿತ ತನಿಖೆ. ಪಿಎಸ್​ಐ 545 ಹುದ್ದೆಗಳ ಪರೀಕ್ಷಾ ಅಕ್ರಮ, ಗುತ್ತಿಗೆದಾರರ ಸಂಘ ಆರೋಪಿಸಿದ್ದ 40 ಪರ್ಸೆಂಟ್ ಹಗರಣ, ಬಿಟ್ ಕಾಯಿನ್, ಗುತ್ತಿಗೆ ಕಾಮಗಾರಿಗಳು ಹೀಗೆ ಸಾಕಷ್ಟು ವಿಚಾರಗಳಲ್ಲಿ ತನಿಖೆಗೆ ಆಯೋಗ, ಎಸ್​ಐಟಿಗಳನ್ನು ಸರ್ಕಾರ ರಚನೆ ಮಾಡಿದೆ. ಪಿಎಸ್​ಐಗಳ ಹುದ್ದೆಗೆ ಜನವರಿಯಲ್ಲಿ ಮರುಪರೀಕ್ಷೆ ನಡೆಸಲಾಗುತ್ತಿದೆ.

    ಪಕ್ಷಾಂತರ: ಚುನಾವಣೆಗೆ ಮುನ್ನ ದೊಡ್ಡಮಟ್ಟದ ಪಕ್ಷಾಂತರಕ್ಕೆ ರಾಜ್ಯವು ಸಾಕ್ಷಿಯಾಯಿತು. ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜೆಡಿಎಸ್​ನಿಂದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೀಗೆ ಅನೇಕರು ಕಾಂಗ್ರೆಸ್​ಗೆ ವಲಸೆ ಬಂದರು.

    ಹಿರಿಯರ ಅಪಸ್ವರ: ಕಾಂಗ್ರೆಸ್ ಸರ್ಕಾರ ದಲ್ಲಿ ಹಿರಿಯರಾದ ಆರ್.ವಿ. ದೇಶಪಾಂಡೆ, ಬಸವ ರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್ ಅವರಿಗೆ ಸ್ಥಾನ ಸಿಗಲಿಲ್ಲ. ಸರ್ಕಾರ ರಚನೆಯಾದಾಗಿ ನಿಂದಲೂ ಒಂದಲ್ಲ ಒಂದು ಸಂದರ್ಭದಲ್ಲಿ ಹಿರಿಯರನೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

    ಎರಡು ಬಜೆಟ್: ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದರೆ, ಸಿದ್ದರಾಮಯ್ಯ ಜುಲೈನಲ್ಲಿ -ಠಿ;3.27 ಲಕ್ಷ ಗಾತ್ರದ ಬಜೆಟ್ ಮಂಡಿಸಿದ್ದು ವಿಶೇಷ.

    ಬಿಜೆಪಿ ಜತೆ ಜೆಡಿಎಸ್ ಮೈತ್ರಿ: ಜೆಡಿಎಸ್ ವಿಧಾನಸಭೆ ಚುನಾವಣೆಯಲ್ಲಿ 19 ಸ್ಥಾನಗಳಿಗೆ ಸೀಮಿತವಾಯಿತು. ಹೀಗಾಗಿ ಜೆಡಿಎಸ್ ಕಾರ್ಯತಂತ್ರ ಬದಲಿಸಿಕೊಂಡು, ಬಿಜೆಪಿ ಜತೆ ಹೋಗಲು ನಿರ್ಧರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ವೇದಿಕೆ ಸಜ್ಜು ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕುಮಾರಸ್ವಾಮಿ ಆರೋಪಗಳನ್ನು ಮಾಡುತ್ತಿದ್ದು ಸಾಬೀತು ಮಾಡಲು ಹೋಗಿಲ್ಲ. ಪೆನ್​ಡ್ರೖೆವ್ ತೋರಿಸಿ ದರಾದರೂ ಅದರಲ್ಲಿ ಏನಿದೆ ಎಂಬುದು ಹೊರಬರಲಿಲ್ಲ.

    ಶಿಕ್ಷಣ ನೀತಿಗಳ ಚರ್ಚೆ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆದು ಕರ್ನಾಟಕ ಶಿಕ್ಷಣ ನೀತಿ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಯುಜಿಸಿ ಮಾಜಿ ಅಧ್ಯಕ್ಷ ತೋರಟ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಎನ್​ಇಪಿ ರದ್ದತಿಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

    ಕಾನೂನುಗಳ ರಚನೆ: ಹೊಸ ಸರ್ಕಾರ ಅನೇಕ ಹೊಸ ಕಾನೂನುಗಳನ್ನು ರಚನೆ ಮಾಡಿದೆ. ವಿಶೇಷ. ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಆಸಕ್ತಿಯ ಫಲವಾಗಿ ವಕೀಲರ ರಕ್ಷಣಾ ಕಾಯ್ದೆ, ಎಸ್​ಸಿಎಸ್​ಪಿ, ಟಿಎಸ್​ಪಿಯಲ್ಲಿ ಅನುದಾನ ವರ್ಗಾವಣೆಗೆ ಅವಕಾಶ ಇದ್ದ 7ಡಿ ತೆಗೆದು ಹಾಕಿರುವುದು, ದಲಿತರಿಗೆ ಭೂಮಿಯ ಹಕ್ಕಿನ ರಕ್ಷಣೆ ನೀಡುವ ಪಿಟಿಸಿಎಲ್, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಕಾಯ್ದೆ ಹೀಗೆ ಅನೇಕ ಹೊಸ ಕಾನೂನುಗಳು ಬಂದರೆ, ಕೆಲವು ಕಾಯ್ದೆಗಳು ತಿದ್ದುಪಡಿಯಾದವು. ಬೆಳಗಾವಿ ಅಧಿವೇಶನದಲ್ಲಿಯೇ 17 ಕಾಯ್ದೆಗಳಿಗೆ ಅಂಗೀಕಾರ ನೀಡಲಾಯಿತು.

    ಹಿಜಾಬ್ ಗದ್ದಲ: ವರ್ಷದ ಆರಂಭದಲ್ಲಿ ಹಿಜಾಬ್, ಹಲಾಲ್, ಆಜಾನ್ ಮೊದಲಾದ ವಿಚಾರಗಳು ಗದ್ದಲ ಎಬ್ಬಿಸಿದವು. ಸರ್ಕಾರ ಶಾಲೆಗಳಲ್ಲಿ ವಸ್ತ್ರಸಂಹಿತೆ ತಂದಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಹೇಳಿದರು. ಅದಕ್ಕೆ ಬಿಜೆಪಿ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ‘ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಸಮಜಾಯಿಷಿ ನೀಡಿದರು.

    ನಡೆಯದ ಚುನಾವಣೆ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಈ ವರ್ಷವೂ ಚುನಾವಣೆ ನಡೆಯಲಿಲ್ಲ. ಅದೇ ಪರಿಸ್ಥಿತಿ ಬಿಬಿಎಂಪಿಯದ್ದು ಸಹ. ಜಿಪಂ ಹಾಗೂ ತಾಪಂಗಳ ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ನಿಗದಿ ಎಲ್ಲವೂ ಆಗಿದೆ. ಆದರೆ ಚುನಾವಣೆ ನಡೆಸಲು ಮಾತ್ರ ಸರ್ಕಾರ ಸಿದ್ಧವಿಲ್ಲ. ಇದು ಸ್ಥಳೀಯ ನಾಯಕತ್ವ ಬೆಳವಣಿಗೆಗೆ ಅಡ್ಡಿಯಾಗಿದೆ.

    ಜಾತಿಗಣತಿಯ ಸದ್ದು: ಈ ವರ್ಷ ಹೆಚ್ಚು ಸದ್ದು ಮಾಡಿದ್ದು ಹಿಂದುಳಿದ ವರ್ಗಗಳ ಆಯೋಗ ಕಾಂತ ರಾಜ್ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ವರದಿ. ವರದಿಯೇ ಬಹಿರಂಗವಾಗದೇ ಅದನ್ನು ಒಪ್ಪಲು ಸಾಧ್ಯವಿಲ್ಲವೆಂದು ವೀರಶೈವ- ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯಗಳು ಪಟ್ಟು ಹಿಡಿದಿವೆ. ವರದಿ ಜಾರಿಯಾಗಲೇ ಬೇಕೆಂದು ಅಹಿಂದ ವರ್ಗಗಳು ಒತ್ತಾಯಿಸಿವೆ. ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಸಮಿತಿಯ ಕಾಲಮಿತಿ ಯನ್ನು ಸರ್ಕಾರ ವಿಸ್ತರಣೆ ಮಾಡಿದೆ. ವರದಿ ಬಂದ ನಂತರ ಪರಿಶೀಲನೆ ಮಾಡಿ ಮುಂದಿನ ಕ್ರಮವೆಂದು ಸರ್ಕಾರ ಹೇಳುತ್ತ ಬಂದಿದೆ.

    ರ‍್ಯಾಲಿ, ಯಾತ್ರೆಗಳ ಅಬ್ಬರ: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಚುನಾವಣಾ ರ್ಯಾಲಿ, ರೋಡ್ ಶೋಗಳನ್ನು ಸಾಕಷ್ಟು ನಡೆಸಿದರು. ಬಿಜೆಪಿಯ ಕೇಂದ್ರ ವರಿಷ್ಠರು ನಡೆಸಿದ ರ್ಯಾಲಿ, ಸಭೆಗಳ ಸಂಖ್ಯೆ 120 ಮೀರಿತ್ತು. ಬೆಂಗಳೂರಿನಲ್ಲಿಯೇ ಮೂರು ದಿನಗಳ ರೋಡ್ ಶೋ ಮಾಡಿದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ರಾಜ್ಯದ 52 ಕ್ಷೇತ್ರಗಳಲ್ಲಿ ಹಾದು ಹೋಯಿತು. ಆ ಕ್ಷೇತ್ರಗಳ ಪೈಕಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು.

    ಆದಾಯ ತೆರಿಗೆ ದಾಳಿ: ತೆಲಂಗಾಣ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಿತು. ಗುತ್ತಿಗೆದಾರರೊಬ್ಬರ ಮನೆಯಲ್ಲಿ 20 ಕೋಟಿ ರೂ. ನಗದು ದೊರಕಿತು. ಯಾರ ಮನೆಯಲ್ಲಿ ಏನೇನು ಸಿಕ್ಕಿದೆ, ಯಾರಿಗೆ ಸೇರಿದ್ದು ಎಂಬ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಬಹಿರಂಗ ಪಡಿಸಲಿಲ್ಲ.

    ತೀವ್ರಗೊಂಡ ಹೋರಾಟ: ಕನ್ನಡ ರಕ್ಷಣಾ ವೇದಿಕೆ ರಾಜ್ಯದಲ್ಲಿನ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕೆಂದು ದೊಡ್ಡ ಆಂದೋಲನದ ಮೂಲಕ ಗಮನ ಸೆಳೆದಿದೆ. ಸಿಎಂ ಸಿದ್ದರಾಮಯ್ಯ ಸಹ ಇದೇ ಮಾತನ್ನು ಹೇಳಿದ್ದಾರೆ.

    ಗುತ್ತಿಗೆದಾರರ ಆರೋಪ: ಹಿಂದಿನ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನ್ಯಾ. ನಾಗಮೋಹನದಾಸ್ ಆಯೋಗಕ್ಕೆ ದಾಖಲೆ ನೀಡುವ ಸಂದರ್ಭದಲ್ಲಿ ಈ ಸರ್ಕಾರದ ಬಗ್ಗೆಯೂ ದೂರು ನೀಡಿರುವುದಾಗಿ ಹೇಳಿ ಸಂಚಲನ ಮೂಡಿಸಿದ್ದರು. ಆದರೆ ನಿರ್ದಿಷ್ಟವಾಗಿ ಯಾವ ಸಚಿವರ ವಿರುದ್ಧ ಎಂಬ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.

    ಆದಾಯ ತೆರಿಗೆ ದಾಳಿ: ತೆಲಂಗಾಣ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಿತು. ಗುತ್ತಿಗೆದಾರರೊಬ್ಬರ ಮನೆಯಲ್ಲಿ 20 ಕೋಟಿ ರೂ. ನಗದು ದೊರಕಿತು. ಯಾರ ಮನೆಯಲ್ಲಿ ಏನೇನು ಸಿಕ್ಕಿದೆ, ಯಾರಿಗೆ ಸೇರಿದ್ದು ಎಂಬ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಬಹಿರಂಗ ಪಡಿಸಲಿಲ್ಲ.

    ವ್ಯಾಪಕ ವರ್ಗಾವಣೆ: ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೇ.6ರ ಮಿತಿಯೊಳಗೆ ಸರ್ಕಾರಿ ನೌಕರರ ವರ್ಗಾವಣೆಗೆ ಆದೇಶ ಮಾಡಿತ್ತು. ಆ ಮಿತಿ ಎಷ್ಟಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ವರ್ಗಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದವು. ಕುಮಾರಸ್ವಾಮಿ ಅವರಂತೂ ಒಂದು ಸಾವಿರ ಕೋಟಿ ರೂ.ಗಳ ಕೈಬದಲಾಗಿದೆ ಎಂಬ ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ವಿರುದ್ಧ ಆರೋಪಗಳು ಕೇಳಿಬಂದವು.

    ಕಾಡಿದ ಬರ: ರಾಜ್ಯವನ್ನು ಈ ವರ್ಷವೂ ಬರ ಕಾಡಿತು. ದೇಶದ ಹದಿನಾಲ್ಕು ರಾಜ್ಯಗಳಂತೆ ಕರ್ನಾಟಕವೂ ತೀವ್ರ ಬರಕ್ಕೆ ತುತ್ತಾಯಿತು. ಕೇಂದ್ರದಿಂದ 18,177 ಕೋಟಿ ರೂ.ಗಳ ನೆರವಿಗೆ ರಾಜ್ಯ ಮನವಿ ಮಾಡಿದೆ. ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ 2 ಸಾವಿರ ರೂ. ಬರ ಪರಿಹಾರ ನೀಡುವ ನಿರ್ಧಾರಕ್ಕೆ ಬರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts