More

    ಹಳ್ಳಿ ಯುದ್ಧ ಗೆದ್ದ ಸಾಫ್ಟ್​ವೇರ್ ಇಂಜಿನಿಯರ್

    ಕಾರವಾರ: ಇಲ್ಲಿನ 18 ಗ್ರಾಪಂಗಳಿಗೆ ಡಿ. 22ರಂದು ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ಶಾಂತಿಯುತವಾಗಿ ಸೇಂಟ್ ಮೈಕಲ್ ಶಾಲೆಯಲ್ಲಿ ನಡೆಯಿತು. ಒಟ್ಟು 226 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. 17 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, 207 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

    ಗ್ರಾಪಂ ಚುನಾವಣೆ ಗೆದ್ದ ಇಂಜಿನಿಯರಿಂಗ್ ಪದವೀಧರೆ: ಮುಡಗೇರಿ ಗ್ರಾಮ ಪಂಚಾಯಿತಿಯ ಸಾನಮುಡಗೇರಿ ಕ್ಷೇತ್ರದಿಂದ ಮೆಲಿಂಡಾ ಡಿಸೊಜಾ ಎಂಬ 28 ವರ್ಷದ ಯುವತಿ 268 ಮತ ಪಡೆದು ಜಯ ಗಳಿಸಿದ್ದಾಳೆ.

    ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಆಕೆ ಸೀಬರ್ಡ್ ನೌಕಾ ಯೋಜನೆಯ ಗುತ್ತಿಗೆ ಡ್ರಜ್ಜಿಂಗ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ತಾಪಂನವರ ಸೋಲು-ಗೆಲುವು: ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ 195 ಮತ ಪಡೆದು ಅಮದಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಮುಡಗೇರಿ ಗ್ರಾಪಂನಿಂದ ತಾಪಂ ಹಾಲಿ ಸದಸ್ಯ ಸುರೇಂದ್ರ ಗಾಂವಕರ್, ತಾಪಂ ಮಾಜಿ ಅಧ್ಯಕ್ಷೆ ಆರತಿ ಬಾನಾವಳಿ ಆಯ್ಕೆಯಾದರು. ದೇವಳಮಕ್ಕಿ ಗ್ರಾಪಂನಿಂದ ತಾಪಂ ಮಾಜಿ ಸದಸ್ಯ ಶ್ರೀಪಾದ ಗೌಡ ಆಯ್ಕೆಯಾಗಿದ್ದಾರೆ. ಕಿನ್ನರ ಗ್ರಾಪಂಗೆ ಸ್ಪರ್ಧಿಸಿದ್ದ ತಾಪಂ ಹಾಲಿ ಸದಸ್ಯ ಪ್ರಶಾಂತ ಗೋವೆಕರ್ ಸೋಲು ಕಂಡಿದ್ದಾರೆ.

    ಸಹೋದರರಿಗೆ ಸಿಹಿ: ಕಾರವಾರದ ಘಾಡಸಾಯಿ ಗ್ರಾಪಂಗೆ ಸಹೋದರರಿಬ್ಬರೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬೋಳಶಿಟ್ಟಾ ವಾರ್ಡ್ ನಿಂದ ಸ್ಪರ್ಧಿಸಿದ್ದ ಗಿರೀಶ ಕೊಠಾರಕರ್ 61 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹಳಗೇಜೂಗ ವಾರ್ಡ್​ನಿಂದ ಅವರ ಸಹೋದರ ಅವಿನಾಶ ಕೊಠಾರಕರ್ ಸ್ಪರ್ಧಿಸಿ ಗೆದ್ದಿದ್ದಾರೆ.

    ವಿಳಂಬಕ್ಕೆ ಅಸಮಾಧಾನ: 18 ಗ್ರಾಪಂ ಚುನಾವಣೆಯ ಮತ ಎಣಿಕೆ ಯಾವ ಹೊತ್ತಿಗೆ ನಡೆಯುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದರಿಂದ ತಾಲೂಕಿನ ವಿವಿಧೆಡೆಗಳಿಂದ ಅಭ್ಯರ್ಥಿಗಳು, ಅವರ ಬೆಂಬಲಿತರು, ಎಣಿಕೆ ಏಜೆಂಟರು ಬೆಳಗ್ಗೆಯೇ ಬಂದು ಕಾಯುತ್ತ ಕುಳಿತಿದ್ದರು. ಮಧ್ಯಾಹ್ನವಾದರೂ ಅವರ ಗ್ರಾಪಂ ಎಣಿಕೆ ಪಾಳಿ ಬಂದಿರಲಿಲ್ಲ. ಇದರಿಂದ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

    ಕಾರವಾರ ಅಂಕೋಲಾ ಗ್ರಾಮೀಣ ಭಾಗದಲ್ಲಿ ಶೂನ್ಯದಿಂದ ಕಮಲ ಮೇಲೆದ್ದು ಬಂದಿದೆ. ಪ್ರಧಾನಿ ಮೋದಿ ಅವರ ಸಾಧನೆಯನ್ನು ಮೆಚ್ಚಿದ ಜನ ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಿದ್ದಾರೆ. ಅಭಿವೃದ್ಧಿಯ ಮಂತ್ರವೇ ಇದಕ್ಕೆ ಮೂಲ ಕಾರಣ.

    | ರೂಪಾಲಿ ನಾಯ್ಕ, ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts