More

    ಉಡುಪಿಯಲ್ಲೊಬ್ಬ ತೂಫಾನ್ ಬಾಕ್ಸರ್!

    ಉಡುಪಿ : ಫರಾನ್ ಅಖ್ತರ್ ಅಭಿನಯದ ಬಾಕ್ಸಿಂಗ್ ಕುರಿತಾದ ಸಿನಿಮಾ ‘ತೂಫಾನ್’ ಒಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಉಡುಪಿಯಲ್ಲೊಬ್ಬ ತೆರೆಮರೆಯ ಬಾಕ್ಸರ್ ಬೆಳಕಿಗೆ ಬಂದಿದ್ದಾರೆ.

    ಎಂಜಿಎಂ ಕಾಲೇಜಿನಲ್ಲಿ ದಿನಗೂಲಿ ಕೆಲಸ ಮಾಡುವ 26 ವರ್ಷದ ಯಮನೂರಪ್ಪ ಅವರದ್ದೂ ತೂಫಾನ್ ಸಿನಿಮಾದಂತ ಜೀವನ ಕಥೆ. ಬಾಲ್ಯದಿಂದಲೂ ರೆಸ್ಲಿಂಗ್, ಬಾಕ್ಸಿಂಗ್ ಬಗ್ಗೆ ನೂರಾರು ಕನಸು ಹೊತ್ತು ಬೆಳೆದವ ಯಮನೂರಪ್ಪ ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನವರು. ಊರಿನಲ್ಲಿ ಬಡತನವಾದ್ದರಿಂದ 5ನೇ ಕ್ಲಾಸಿಗೆ ಓದು ಮುಕ್ತಾಯ. ಕೂಲಿಗಾಗಿ ಮಂಗಳೂರು, ಗೋವಾ, ಉಡುಪಿ ಅಲೆದಾಟ. ಸಮಯ ಸಿಕ್ಕಾಗಲೆಲ್ಲ ಯುಟ್ಯೂಬ್‌ನಲ್ಲಿ ರೆಸ್ಲಿಂಗ್ ಮತ್ತು ಬಾಕ್ಸಿಂಗ್ ಕ್ರೀಡೆ ವೀಕ್ಷಿಸುತ್ತಿದ್ದರು. ಆಟದ ಬಗೆಗಿನ ಎಲ್ಲ ಬಗೆಯ ಮಾಹಿತಿ ತಿಳಿದುಕೊಳ್ಳುತ್ತಿದ್ದರು. ಗ್ರೇಟ್ ಕಲಿ ಈ ಯುವಕನಿಗೆ ದೇವರಂತೆ. ಅದರಂತೆ ಗ್ರೇಟ್ ಕಲಿಯ ಅಕಾಡೆಮಿ ಸೇರಲು ದೆಹಲಿಗೂ ಹೋಗಿದ್ದರು. ಅಲ್ಲಿ ವಸತಿ, ಆಹಾರ, ಶುಲ್ಕ ಸೇರಿ ತಿಂಗಳ ವೆಚ್ಚ 40 ಸಾವಿರ ರೂ. ಭರಿಸಲು ಸಾಧ್ಯವಿಲ್ಲ ಎಂದು ವಾಪಸ್ ಊರಿಗೆ ಮರಳಿದರು. ಬಳಿಕ ಎಂಜಿಎಂ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದು, ಆಶ್ರಯ ಪಡೆದಿದ್ದಾರೆ.

    ಬಾಕ್ಸಿಂಗ್ ಕಡೆಗಿನ ಅನನ್ಯ ಆಸಕ್ತಿ ಅವರನ್ನು ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ಮಣಿಪಾಲದಲ್ಲಿ ಜಿಮ್‌ಗೆ ಸೇರಿದರು. ವ್ಯವಸ್ಥಿತವಾಗಿ ಬಾಕ್ಸಿಂಗ್ ಕಲಿಸುವ ಕೋಚ್‌ಗಾಗಿ ಹುಡುಕಾಡಿದರು. ಕೊನೆಗೆ ಬಾಕ್ಸಿಂಗ್ ತರಬೇತುದಾರ ಅಲೆವೂರಿನ ಶಿವಪ್ರಸಾದ್ ಆಚಾರ್ಯ ಬಳಿ ತರಬೇತಿಗೆ ಸೇರಿಕೊಂಡರು. ಒಂದು ವರ್ಷದಿಂದ ಬಾಕ್ಸಿಂಗ್ ತರಬೇತಿ ಪಡೆಯುತ್ತಿರುವ ಯಮನೂರಪ್ಪ, ಬೆಂಗಳೂರಿನಲ್ಲಿ ನಡೆದ ಬಾಕ್ಸಿಂಗ್ ಕೂಟದಲ್ಲಿ ಭಾಗವಹಿಸಿದ್ದಾರೆ.

    ಕೋವಿಡ್ ಸಂದರ್ಭ ಎಲ್ಲ ಬಗೆಯ ಕ್ರೀಡಾ ಚಟುವಟಿಕೆ ಬಂದ್ ಆಗಿದ್ದರಿಂದ ಐದಾರು ತಿಂಗಳು ಕೋಚಿಂಗ್ ಸಾಧ್ಯವಾಗಿಲ್ಲ. ಆಸಕ್ತಿ, ಶ್ರಮವನ್ನು ಅರ್ಧಕ್ಕೆ ನಿಲ್ಲಿಸದೆ ಬಾಕ್ಸಿಂಗ್ ಕಿಟ್ ಕೊಂಡುಕೊಳ್ಳುವಷ್ಟು ಹಣವಿಲ್ಲದಿದ್ದರೂ ದೊಡ್ಡ ಟೈರನ್ನು ಮರಕ್ಕೆ ಕಟ್ಟಿ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ನನ್ನ ಪ್ರಯತ್ನ ಮುಂದುವರಿಯುತ್ತದೆ ಎನ್ನುವ ಯಮನೂರಪ್ಪ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾಗವಹಿಸುವ ಅಭಿಲಾಷೆ ಹೊಂದಿದ್ದಾರೆ.

    ರಾಷ್ಟ್ರ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ಸಿಕ್ಕರೆ ನಮ್ಮವನೊಬ್ಬ ಕ್ರೀಡಾ ಸಾಧಕನಾದ ಹೆಮ್ಮೆ ನಮಗೆ. ದಿನಗೂಲಿ ನೌಕರನಿಗಿದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಈ ರೀತಿ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ಸಿಗಬೇಕು.
    – ಮಂಜುನಾಥ್ ಕಾಮತ್, ಉಪನ್ಯಾಸಕ,
    ಎಂಜಿಎಂ ಕಾಲೇಜು ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts