More

    ದೈವತ್ವಕ್ಕೆ ಕೊಂಡೊಯ್ಯುವ ತಾಣ ದೇವಾಲಯ

    ಬಾಳೆಹೊನ್ನೂರು: ಮನಸ್ಸಿಗೆ ಸ್ಫೂರ್ತಿ ತುಂಬುವುದು ಹಾಗೂ ಮನುಷ್ಯತ್ವದಿಂದ ದೈವತ್ವಕ್ಕೆ ಕೊಂಡೊಯ್ಯುವ ತಾಣವೇ ದೇವಾಲಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

    ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
    ದೇವಾಲಯದಲ್ಲಿ ದೇವರು ಮತ್ತು ನಮ್ಮ ನಡುವೆ ಕೇವಲ ಭಕ್ತಿ ಹೊರತು ಬೇರೇನೂ ಇರಬಾರದು. ಭಕ್ತಿಯ ಉದ್ದೀಪನೆ ಮಾಡುವ ಕೆಲಸವಾಗಬೇಕು. ಕೆಲವೆಡೆ ವಾಸ್ತವಕ್ಕೆ ಇರಬೇಕಾದ ಭಕ್ತಿ, ಶ್ರದ್ಧೆಯನ್ನು ಕೆಲವರು ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ದೈವ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನಿಜವಾದ ಭಕ್ತಿ ಎಂದರು.
    ಪೂಜಾ ಸಮಿತಿ ಅಧ್ಯಕ್ಷ ಬಿ.ಎನ್.ಸೋಮೇಶ್‌ಗೌಡ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಬಿಡುತ್ತಿರಲಿಲ್ಲ. ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಹಿಳೆಯರನ್ನು ಸಮಾಜದ ಮುಂಚೂಣಿಗೆ ಕರೆದುಕೊಂಡು ಬಂದಿವೆ. ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣ ಮಾಡುವ ಮೂಲಕ ಆರ್ಥಿಕ ಕ್ರಾಂತಿ ಮಾಡಿದೆ ಎಂದರು.
    ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಟ್ರಸ್ಟಿ ಬೆಳಸೆ ರತ್ನಾಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಖಾಂಡ್ಯ ಕ್ಷೇತ್ರದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತಿದೆ. ಯೋಜನೆಯ ದೂರದೃಷ್ಟಿತ್ವಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.
    ಖಾಂಡ್ಯ ಹೋಬಳಿ ನಾಟಿ ವೈದ್ಯ ಬೋಬಣ್ಣಗೌಡ, ನಿವೃತ್ತ ಯೋಧರಾದ ಚಾಕಲುಮನೆ ಪ್ರವೀಣ್, ಜಾರ್ಜ್ ಅವರನ್ನು ಸನ್ಮಾನಿಸಲಾಯಿತು.
    ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಕಾಫಿ ಬೆಳೆಗಾರೆ ಪುಷ್ಪಾ ರಾಜೇಗೌಡ, ದೇವದಾನ ಗ್ರಾಪಂ ಅಧ್ಯಕ್ಷ ಕೆ.ಎಂ.ಶೇಷಪ್ಪ ಗೌಡ, ಯೋಜನಾಧಿಕಾರಿ ಸುರೇಶ್, ಪೂಜಾ ಸಮಿತಿ ಉಪಾಧ್ಯಕ್ಷ ಪ್ರೇಮೇಶ್, ಜಗದೀಶ್, ಚಂದ್ರಶೇಖರ್ ರೈ, ಗುರುಮೂರ್ತಿ ಬೆಳಸೆ, ಮಸೀಗದ್ದೆ ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts