More

    ಮಕ್ಕಳ ಜೀವನ ಬದಲಿಸಲಿರುವ ಬೇಸಿಗೆ ಶಿಬಿರ

    ಶ್ರೀರಂಗಪಟ್ಟಣ: ಬೇಸಿಗೆ ಶಿಬಿರಗಳು ಮಕ್ಕಳ ಜೀವನವನ್ನು ಬದಲಿಸುತ್ತವೆ ಎಂದು ಚಲನಚಿತ್ರ ನಿರ್ದೇಶಕ ಚಿದಾನಂದ ಎಸ್. ನಾಯಕ್ ತಿಳಿಸಿದರು.

    ಬೆಳಗಿನೊಳಗು ಬಳಗ ಮತ್ತು ಸಂಚಲನ ಮೈಸೂರು ಸಹಯೋಗದಲ್ಲಿ ಇತ್ತೀಚೆಗೆ ತಾಲೂಕಿನ ಮಹದೇವಪುರ ಗ್ರಾಮದ ಆನಂದಾಳ್ವರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕುಣಿಯೋಣು ಬಾರಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಗ್ರಾಮಾಂತರ ಮಕ್ಕಳಿಗಾಗಿ ಶಿಬಿರ ಆಯೋಜಿಸಿದ್ದು ಪ್ರಶಂಸನೀಯ. ಮಕ್ಕಳ ಸಮಗ್ರ ಬೆಳವಣಿಗೆಗೆ ವೇದಿಕೆಯಾಗುವ ಇಂತಹ ಬೇಸಿಗೆ ಶಿಬಿರಗಳ ಆಯೋಜನೆ ಸುಲಭ ಕಾರ್ಯವಲ್ಲ. ಮಕ್ಕಳು 20 ದಿನಗಳಲ್ಲಿ ಜಾನಪದ ಗೀತೆ, ಗಾಯನ ಕಲಿತಿದ್ದಾರೆ. ನಾಟಕ ಕಲಿತು ಅಭಿನಯಿಸಿದ್ದಾರೆ. ವೇದಿಕೆ ಮೇಲೆ ಅವರನ್ನು ನೋಡುವುದೇ ಖುಷಿ. ವೇದಿಕೆ ಮೇಲೆ ನಿಂತು ಮಾತನಾಡುವ, ಸೃಜನಶೀಲವಾಗಿ ಆಲೋಚಿಸುವುದನ್ನು ಮಕ್ಕಳು ಕಲಿತಿದ್ದಾರೆ ಎಂದರೆ ಅವರಲ್ಲಿ ಆತ್ಮ ಭರವಸೆ ಹೊಮ್ಮಿದೆ ಎಂದರ್ಥ ಎಂದರು.

    ಮೈಸೂರಿನ ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ ಮಾತನಾಡಿ, ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಉಳಿವಿಗೆ ಸವಾಲಾಗಿವೆ. ಸರ್ಕಾರವನ್ನು ಅವಲಂಬಿಸದೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
    ಶಿಬಿರದ ನಿರ್ದೇಶಕ ದೀಪಕ್ ಮೈಸೂರು ಮಾತನಾಡಿ, ಅಂಕಗಳಿಕೆಯ ಧಾವಂತದಲ್ಲಿ ಸಿಲುಕಿರುವ ಮಕ್ಕಳು ಸೃಜನಶೀಲ ಮತ್ತು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಮಾಜದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದರು.

    ಮೈಸೂರಿನ ಚಿದಾನಂದ ಎಸ್.ನಾಯಕ್ ನಿರ್ದೇಶನದ ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ ಕಿರುಚಿತ್ರ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಕವಿ ಕುವೆಂಪು ವಿರಚಿತ ಬೊಮ್ಮನಹಳ್ಳಿ ಕಿಂದರಿಜೋಗಿ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು. ಕಂಸಾಳೆ, ಮಾರಿ ಕುಣಿತ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.

    ಮಹದೇವಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿಂಗಮ್ಮ ಮಹದೇವು, ಎಂಡಿಸಿಸಿ ಮಾಜಿ ನಿರ್ದೇಶಕ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಸದಸ್ಯ ಕಾಳೇಗೌಡ, ಅಫೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ ಅರಕೆರೆ, ವೈದ್ಯ ಡಾ.ರವೀಂದ್ರ, ಮುಖಂಡರಾದ ಮಹದೇವಸ್ವಾಮಿ, ಎಂ.ಈ. ಜಗದೀಶ್, ದಾಸೇಗೌಡ, ಗವಿಸಿದ್ದು, ಮುರುಘೇಂದ್ರ ಸ್ವಾಮಿ, ಶಿಬಿರದ ಸಂಚಾಲಕ ವಿನೋದ್, ವಿ.ಅನಿಲ್‌ಕುಮಾರ್, ವಿ.ಮಧುಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts