More

    ಆನ್‌ಲೈನ್ ಮೂಲಕ ತರಿಸಿದ ಬಿರಿಯಾನಿ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

    ಕಾಸರಗೋಡು: ಆನ್‌ಲೈನ್ ಮೂಲಕ ತರಿಸಿದ ಆಹಾರ ಸೇವಿಸಿದ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಶನಿವಾರ ಮೃತಪಟ್ಟಿದ್ದಾಳೆ. ಆಹಾರದಲ್ಲಿ ವಿಷಾಂಶ ಸೇರಿದ್ದರಿಂದ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.
    ಚೆಮ್ನಾಡ್ ಪಂಚಾಯಿತಿ ಪೆರುಂಬಳ ಬೇನೂರ್ ನಿವಾಸಿ ದಿ.ಕುಮಾರನ್-ಅಂಬಿಕಾ ದಂಪತಿ ಪುತ್ರಿ ಅಂಜುಶ್ರೀ ಪಾರ್ವತಿ(19) ಮೃತ ಯವತಿ. ಈಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ಡಿ.31ರಂದು ಕಾಸರಗೋಡು ಅಡ್ಕತ್ತಬೈಲ್‌ನ ಹೋಟೆಲ್‌ನಿಂದ ಆನ್‌ಲೈನ್ ಮೂಲಕ ಬಿರಿಯಾನಿ ತರಿಸಿ ಸೇವಿಸಿದ್ದು, ಬಳಿಕ ಅಸ್ವಸ್ಥಗೊಂಡಿದ್ದಳು. ಸನಿಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಒಂದೆರಡು ದಿನದ ಬಳಿಕ ಮತ್ತೆ ಅಸ್ವಸ್ಥಗೊಂಡಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯನ್ವಯ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
    ಮೂವರು ವಶಕ್ಕೆ: ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಹೋಟೆಲ್ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಮೃತದೇಹ ಮಹಜರಿಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಂಜುಶ್ರೀ ಸೇವಿಸಿದ್ದ ಅದೇ ಆಹಾರವನ್ನು ಇನ್ನೂ ಕೆಲವರು ಸೇವಿಸಿ ಅಸೌಖ್ಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ಆಹಾರ ಸುರಕ್ಷಾ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ವಿಷಾಹಾರ ಪೂರೈಸಿದ ಹೋಟೆಲ್ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮಹಿಳಾಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
    ವರ್ಷದೊಳಗೆ ಎರಡನೇ ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ ವಿಷಾಹಾರ ಸೇವಿಸಿ ಸಾವಿಗೀಡಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಕಳೆದ ಮೇ 1ರಂದು ಹೋಟೆಲ್ ಒಂದರಿಂದ ಶವರ್ಮ ಸೇವಿಸಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಕರಿವೆಳ್ಳೂರು ನಿವಾಸಿ ದೇವನಂದಾ(17) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಈ ಘಟನೆ ಕೇರಳಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.
    ಅಧಿಕಾರಿಗಳಿಂದ ದಾಳಿ: ಆಹಾರ ವಿತರಿಸಿದ ಅಡ್ಕತ್ತಬೈಲಿನ ಹೋಟೆಲ್‌ಗೆ ಆಹಾರ ಸುರಕ್ಷಾ ವಿಭಾಗದ ಕಾಸರಗೋಡು ಜಿಲ್ಲಾ ಸಹಾಯಕ ಆಯುಕ್ತರು ಹಾಗೂ ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿ, ಹೋಟೆಲ್‌ಗೆ ಬೀಗ ಜಡಿದಿದ್ದಾರೆ.
    ವರದಿ ನಂತರವಷ್ಟೆ ಖಾತ್ರಿ: ಅಂಜುಶ್ರೀ ಪಾರ್ವತಿ ಸಾವಿನ ಬಗ್ಗೆ ಮರಣೋತ್ತರ ತಪಾಸಣಾ ವರದಿ ಕೈಸೇರಿದ ನಂತರವಷ್ಟೇ ನಿಖರ ಕಾರಣ ತಿಳಿಯಲು ಸಾಧ್ಯ. ಆಸ್ಪತ್ರೆಗಳಲ್ಲಿ ಆಕೆಗೆ ನೀಡಲಾದ ಚಿಕಿತ್ಸೆಗಳ ಎಲ್ಲ ದಾಖಲೆಗಳನ್ನು ವಶಕ್ಕೆ ತೆಗೆದು ಪರಿಶೀಲನೆ ನಡೆಸಲಾಗುತ್ತಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ ರಾಮದಾಸ್ ತಿಳಿಸಿದ್ದಾರೆ.
    ಇಡುಕ್ಕಿಯಲ್ಲೂ ಶವರ್ಮ ಸೇವಿಸಿ ಅಸೌಖ್ಯ: ಇಡುಕ್ಕಿಯಲ್ಲಿ ಶವರ್ಮ ಸೇವಿಸಿದ ಏಳರ ಹರೆಯದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಶನಿವಾರ ಅಸೌಖ್ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದಿದೆ. ಶವರ್ಮ ತಯಾರಿಸಿ ನೀಡಿದ ನೆಡುಕಂಡಂನ ಹೋಟೆಲನ್ನು ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳು ಮುಚ್ಚಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts