More

    ತಿಮ್ಮಪ್ಪ ಭಾಗವತರ ನಿರ್ಗಮನ; ಕಾಲನೇ ಕಿತ್ತುಕೊಂಡ ನಾದ-ಲಯ

    ಪ್ರಸಿದ್ಧ ಭಾಗವತರಾದ ತಿಮ್ಮಪ್ಪ ಭಾಗವತ ಬಾಳೆಹದ್ದ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದರು. ಕಳೆದ ಮೂರೂವರೆ ದಶಕಗಳಿಂದ ಯಕ್ಷಗಾನ ಭಾಗವತರಾಗಿ, ಹಾರ್ಮೋನಿಯಂ ವಾದಕರಾಗಿ, ಹಿಂದುಸ್ತಾನಿ ಗಾಯಕರಾಗಿ, ಯಕ್ಷ ಗುರುವಾಗಿ, ಸಂಗೀತ ಸಂಯೋಜಕರಾಗಿ ಹೆಸರು ಮಾಡಿದ್ದರು. ಅಲ್ಲದೇ ರಂಗಾಯಣ ತಂಡದಲ್ಲಿ ಕೈದಿಗಳಿಗೆ ನಾಟಕ ಕಲಿಸುವ ಗುರುವಾಗಿದ್ದರು. ಈ ಅಪೂರ್ವ ಸಾಧಕನ ಕುರಿತು ಅವರ ನಿಕಟವರ್ತಿ ಯಕ್ಷಗಾನ ಕಲಾವಿದ, ಮೈಸೂರು ಆಕಾಶವಾಣಿಯ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಅವರಿಂದ ನುಡಿನಮನ.

    ಬಾಳೆಹದ್ದ ತಿಮ್ಮಪ್ಪ ಭಾಗವತರು ಇನ್ನಿಲ್ಲ ಎನ್ನುವ ಸುದ್ದಿ ರಂಗಬಂಧುಗಳಿಗೆಲ್ಲ ನುಂಗಲಾರದ ತುತ್ತು. ಯಕ್ಷಗಾನದ ಪ್ರಯೋಗಶೀಲ ಭಾಗವತರೆಂದು ಹೆಚ್ಚು ಪರಿಚಿತರಾದರೂ ನಾಟಕದ ರಂಗಭೂಮಿಗೂ ಅವರ ಸಂಗೀತದ ಕೊಡುಗೆ ಗಣನೀಯವಾದುದು. ನತ್ಯ ರೂಪಕಗಳಿಗೂ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಊರಿನ ಭಜನೆ ತಂಡದಿಂದ ಆರಂಭಿಸಿ ರಂಗಾಯಣದ ನಾಟಕದ ವರೆಗೆ ಎಲ್ಲರಿಗೂ ಬೇಕಾದವರಾಗಿದ್ದವರು ತಿಮ್ಮಪ್ಪಣ್ಣ. ಹಿಂದುಸ್ತಾನಿ ಸಂಗೀತದ ಪರಿಸರದಲ್ಲಿಯೇ ಬೆಳೆದವರು, ತಂದೆಯಿಂದ ಕರ್ನಾಟಕ ಸಂಗೀತದ ಸಂಗತಿಗಳನ್ನು ಅರಿತವರು. ಅವೆರಡನ್ನೂ ಯಕ್ಷಗಾನದ ಭಾಗವತಿಕೆಯಲ್ಲಿ ಹದವಾಗಿ ಬಳಸಬಲ್ಲ ಜ್ಞಾನವಿತ್ತು. ಅವರ ಪ್ರಯೋಗಶೀಲತೆಯ ಧೈರ್ಯದಿಂದಾಗಿಯೇ ಅನೇಕ ಕಾರ್ಯಕ್ರಮಗಳು ಬೆಳಕು ಕಂಡಿವೆ.

    ಯಕ್ಷಗಾನದ ಭಾಗವತಿಕೆಯಲ್ಲಿ ಅವರ ವಿಶೇಷವೆಂದರೆ ಪ್ರತಿ ಸನ್ನಿವೇಶದ ಭಾವ ಸಂದರ್ಭವನ್ನು ಗುರುತಿಸಿ ಅದಕ್ಕೆ ಬೇಕಾದ ರಾಗದಲ್ಲಿ ಹಾಡುವುದು. ಕರ್ಣಪರ್ವದಂತಹ ಪ್ರಸಂಗದಲ್ಲಿ ಒಂದೇ ಪದ್ಯದಲ್ಲಿ ಮೂರು ಘಟನೆಗಳನ್ನು ಹೇಳಿದಾಗ ಮೂರು ರಾಗಗಳನ್ನೇ ಬಳಸಿ ಆ ಪದ್ಯಕ್ಕೆ ಜೀವತುಂಬಿದ ನಿದರ್ಶನಗಳೂ ಇವೆ. ರಾಗ-ತಾಳಗಳ ಖಚಿತತೆ ಅವರಿಗೆ ಒಲಿದು ಬಂದಿತ್ತು. ಒಮ್ಮೆ ಹಾಡಿದ ಪದ್ಯವನ್ನು ಪೂರ್ಣವಾಗಿ ನೆನಪಿಡುವ ಅವರ ಸ್ಮರಣ ಶಕ್ತಿ ಅಪರೂಪದ್ದಾಗಿತ್ತು. ತಾಳಮದ್ದಲೆಯ ಭಾಗವತಿಕೆಯಲ್ಲಿ ಅವರಿಗಿದ್ದ ಅರ್ಥಪ್ರಜ್ಞೆ ಅರ್ಥಧಾರಿಗಳಿಗೆ ಬೆರಗುಹುಟ್ಟಿಸುವಷ್ಟಿತ್ತು. ಶೇಣಿಭಟ್ಟರಂತಹ ವಾಗ್ಮಿಗಳೂ ಅದನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಅನೇಕ ನಾಟಕಗಳಿಗೆ ಸಮರ್ಥ ಸಂಗೀತ ನಿರ್ದೇಶನ ನೀಡಿದ್ದರು. ಪ್ರಯೋಗಶೀಲ ರಂಗಕರ್ಮಿ ಶ್ರೀ ಹುಲಗಪ್ಪ ಕಟ್ಟಿಮನಿಯವರ ಅನೇಕ ಸಾಹಸಗಳಲ್ಲಿ ಕೈಜೋಡಿಸಿದ್ದ ತಿಮ್ಮಪ್ಪ ಭಾಗವತರು ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಿಗೆ ಸಮಾನ ಕೌಶಲದಿಂದ ಸಂಗೀತ ನಿರ್ದೇಶನ ನೀಡಬಲ್ಲರು ಎನ್ನುವುದನ್ನು ತೋರಿಸಿದ್ದರು. ಸಂದರ್ಭ, ಸನ್ನಿವೇಶ, ರಂಗದ ಮೇಲಿನ ಪಾತ್ರಗಳ ವಯಸ್ಸು-ಸ್ವಭಾವಗಳನ್ನು ತಿಳಿದು ಸಂಗೀತವನ್ನು ಸಂಯೋಜಿಸಬಲ್ಲ ಸೂಕ್ಷ್ಮ ಸಂವೇದನೆ ಅವರಿಗಿತ್ತು. ಭರತ ನಾಟ್ಯದ ವಿದುಷಿಯರ ನಿರ್ದೇಶನದ ನತ್ಯ ರೂಪಕಗಳಿಗೆ ತಿಮ್ಮಪ್ಪ ಹೆಗಡೆಯವರು ಸಂಗೀತ ಸಂಯೋಜಿಸಿ ಹಾಡಿದ ಸಂದರ್ಭಗಳು ನೆನಪಾದರೆ ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತಗಳೆರಡಕ್ಕೂ ಸಲ್ಲುವ ಪ್ರತಿಭೆ ಎನ್ನುವುದು ಕಣ್ಣಿಗೆ ಕಟ್ಟುತ್ತದೆ.

    ತಿಮ್ಮಪ್ಪ ಹೆಗಡೆಯವರ ತಂದೆ ಬಾಳೆಹದ್ದ ಕಷ್ಣ ಭಾಗವತರು ಯಕ್ಷಗಾನದ ಭಾಗವತಿಕೆಯ ಅಕಾಡೆಮಿಕ್ ಶಿಸ್ತನ್ನು ಎತ್ತಿಹಿಡಿದ ಸಂಗೀತಜ್ಞರು. ಅವರಿಂದ ರಾಗ-ತಾಳಗಳ ಜ್ಞಾನ, ಹೊಸ್ತೋಟ ಮಂಜುನಾಥ ಭಾಗವತರ ಸಹವಾಸದಲ್ಲಿ ಪಡೆದ ರಂಗದ ನಡೆಗಳ ಒಡನಾಟ, ಬಯಲಾಟ ಮತ್ತು ತಾಳಮದ್ದಲೆಗಳೆರಡರಲ್ಲೂ ನಿರಂತರ ತೊಡಗಿಕೊಳ್ಳುವಿಕೆಯಿಂದ ತಿಮ್ಮಪ್ಪ ಭಾಗವತರಿಗೆ ಯಕ್ಷಗಾನದ ಭಾಗವತಿಕೆಯ ಎಲ್ಲ ಪಟ್ಟುಗಳೂ ತಿಳಿದಿದ್ದವು.

    ತನ್ನ ಸಂಗಡ ಇದ್ದವರ ಖರ್ಚನ್ನೆಲ್ಲ ತಾನೇ ವಹಿಸಿಕೊಂಡು, ಮನೆಯಲ್ಲಿಯೂ ಆತಿಥ್ಯ ನೀಡಿ, ಯಾವ ಪ್ರತಿಷ್ಠೆಯನ್ನು ತೋರದೆ ತನ್ನ ಪರಿಸರದ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇವೆಸಲ್ಲಿಸುತ್ತ ಬಂದ, ಎಲ್ಲರ ಪ್ರೀತಿಯ ತಿಮ್ಮಪ್ಪಣ್ಣ ಸಾಧನೆಯ ಹಾದಿಯಲ್ಲಿರುವಾಗಲೇ ಈ ಲೋಕವನ್ನು ತ್ಯಜಿಸಿದ್ದಾರೆ. ಅವರ ಸಂಪರ್ಕದಲ್ಲಿ ಬಂದವರೆಲ್ಲ ಅವರಿಗೆ ಋಣಿಗಳು ಎನ್ನುವಷ್ಟು ಔದಾರ್ಯ ಅವರದಾಗಿತ್ತು. ಸರದಿಯನ್ನು ತಪ್ಪಿಸಿ, ಹಿರಿಯರನ್ನು ಸರಿಸಿ ಸಾವಿನ ಮನೆಗೆ ಮುಂದಾಗಿ ಹೋದದ್ದು ಸರಿಯಾಗಲಿಲ್ಲ ಎಂಬ ಕೊರಗು ಸಹದಯರಿಗೆಲ್ಲ ನಿರಂತರವಾದದ್ದು. ಕಾಲ ಅಕಾಲದಲ್ಲಿ ಅವರನ್ನು ಕರೆದುಕೊಂಡ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸೋಣವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts