More

    ಚುನಾವಣೆ ಬಳಿಕ ರಾಜಕಾರಣದಲ್ಲಿ ಮಹತ್ವದ ಬದಲಾವಣೆ

    ಅರಕಲಗೂಡು : ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಕಳೆದ ಬಳಿಕ ಮಹತ್ವದ ಬದಲಾವಣೆಯಾಗಲಿದ್ದು, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಮತದಾರರು ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಿ ಬದಲಾವಣೆಗೆ ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
    ತಾಲೂಕಿನ ರಾಮನಾಥಪುರದಲ್ಲಿ ಗುರುವಾರ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ನಾಯಕತ್ವ ನಂಬಿ ಕಷ್ಟ ಕಾಲದಲ್ಲೂ ಇಲ್ಲಿನ ಜನರು ಕೈ ಹಿಡಿದಿದ್ದಾರೆ. ನಮ್ಮ ಕುಟುಂಬ ಜಿಲ್ಲೆಗೆ ಹಾಗೂ ರಾಜ್ಯಕ್ಕೇನು ದ್ರೋಹ ಮಾಡಿಲ್ಲ. ರಾಜ್ಯದಲ್ಲಿ ನೀರಾವರಿ ಸಮಸ್ಯೆ ಬಗೆಹರಿಸಲು ಗೌಡರು ಶ್ರಮ ಪಟ್ಟಿದ್ದಾರೆ. ಈ ಭಾಗದಲ್ಲಿ ದಿ. ಎಚ್.ಎನ್. ನಂಜೇಗೌಡರೂ ಕೈ ಜೋಡಿಸಿದ್ದಾರೆ. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ವಿಚಾರವಾಗಿ ನಮ್ಮ ನೀರು ನಮ್ಮ ಹಕ್ಕು ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ನಂತರ ತಮಿಳುನಾಡು ಜತೆ ಹೊಂದಾಣಿಕೆ ಮಾಡಿಕೊಂಡು ಕಾವೇರಿ ನೀರು ಹರಿಸಿ ಹಳೇ ಕರ್ನಾಟಕ ಭಾಗದ ಜನರಿಗೆ ಬರದ ಪರಿಸ್ಥಿತಿ ತಂದಿಟ್ಟಿದ್ದಾರೆ ಎಂದು ದೂರಿದರು.
    ರಾಜ್ಯದ ಅಭಿವೃದ್ಧಿ ಕಡೆಗಣಿಸಿರುವ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಇಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರು ಹಂಚುತ್ತಿದ್ದ ಸೀರೆ ಪಡೆಯಲು ನೂಕು ನುಗ್ಗಲಿನಲ್ಲಿ ಮಹಿಳೆಯರು ಭಾರಿ ಪೆಟ್ಟು ತಿನ್ನುವಂತಾಗಿತ್ತು. ಈಗ ಮಹಿಳೆಯರಿಗೆ ಎರಡು ಸಾವಿರ ರೂ. ಆಸೆ ತೋರಿಸಿ ಕೈ ಒಡ್ಡುವ ಪರಿಸ್ಥಿತಿಗೆ ದೂಡಿದ್ದಾರೆ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಕಾರ್ಯಕ್ರಮಗಳಿಗೆ ನೀಡುತ್ತಿದ್ದು, 1.5 ಸಾವಿರ ಕೋಟಿ ರೂ. ಸಾಲ ಮಾಡಿ 52 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ 6.80 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಸಾಲವನ್ನು ತೀರಿಸುವವರು ಯಾರು, ಮಹಿಳೆಯರಿಗೆ ಎರಡು ಸಾವಿರ ರೂ ಕೊಡುವುದು ದೊಡ್ಡ ಕೆಲಸವೇ ಎಂದು ಪ್ರಶ್ನಿಸಿದರು.
    ಕಾಂಗ್ರೆಸ್‌ನವರು ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದರು. ವೈಯಕ್ತಿಕ ಸ್ಥಾನಮಾನದ ಆಸೆಗೆ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದಕ್ಕಾಗಿ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು 28 ಸ್ಥಾನ ಗೆಲ್ಲಿಸುವ ಸಲುವಾಗಿ ಎಲ್ಲೆಡೆ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ವಿಶ್ವಾಸ ಇಟ್ಟಿದ್ದು ಅವರ ಅಪ್ಪಣೆ ಮೇರೆಗೆ ಪ್ರವಾಸ ಹಮ್ಮಿಕೊಂಡಿರುವುದಾಗಿ ಹೇಳಿದರು.
    ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯ ಜನರು ಬರಗಾಲ ಎದುರಿಸುತ್ತಿದ್ದು ಕುಡಿಯಲು ನೀರಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದರು. ಹಳ್ಳಿಮೈಸೂರು ಹೋಬಳಿಗೆ ನಾಲೆ ನಿರ್ಮಿಸಿದ್ದು ದೇವೇಗೌಡರ ಕಾಲದಲ್ಲಿ. ಮುಂದಿನ ದಿನಗಳಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜು ತರುವುದಾಗಿ ಹೇಳಿದರು.
    ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಕಾಡುತ್ತದೆ. ಉಚಿತ ಉಚಿತ ಎನ್ನುತ್ತ ಕಾಂಗ್ರೆಸ್‌ನವರು ರಾಜ್ಯದ ಎಲ್ಲ ವರ್ಗದವರಿಗೆ ಬರಗಾಲವನ್ನು ಉಚಿತವಾಗಿ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
    ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಕುಮಾರಸ್ವಾಮಿ ಅವರು ಆರೋಗ್ಯವನ್ನು ಲೆಕ್ಕಿಸದೆ ಓಡಾಡುತ್ತಿದ್ದಾರೆ. ಅಧಿಕ ಮತ ಕೊಡಿಸಲು ನನ್ನ ತಂದೆ ಸ್ಥಾನದಲ್ಲಿ ನಿಂತು ಎ. ಮಂಜು ಅವರು ಮನೆ ಮನೆಗೆ ನುಗ್ಗಿ ಮತ ಕೇಳುತ್ತಿದ್ದಾರೆ. ಎ. ಮಂಜು ಅವರ ಮಾರ್ಗದರ್ಶನದಲ್ಲಿ ನಾನು ಕೊನೇ ಉಸಿರು ಇರುವ ತನಕ ರಾಜಕೀಯ ಮಾಡುವೆ ಎಂದರು. ಮಾಜಿ ಸಚಿವ ಎಚ್.ಎಂ.ವಿಶ್ವನಾಥ್, ಶಾಸಕ ಎ. ಮಂಜು ಮಾತನಾಡಿದರು.

    ರೇವಣ್ಣ ಕಾಲೆಳೆದ ಎ. ಮಂಜು
    ನಾನು ಲೋಕಸಭಾ ಚುನಾವಣೆಗೆ ಒಮ್ಮೆ ದೇವೇಗೌಡರ ಎದುರು ಹಾಗೂ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಎದುರು ಸ್ಪರ್ಧಿಸಿ ಎರಡು ಬಾರಿ ಸೋತಿರುವೆ. ಈ ಬಾರಿ ಎಲ್ಲರೂ ಕುಮಾರಸ್ವಾಮಿ ಅವರ ಜತೆ ಒಟ್ಟಾಗಿ ಕೆಲಸ ಮಾಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಎ.ಮಂಜು ಹೇಳಿದರು. ಹೊಳೆನರಸೀಪುರ ತಾಲೂಕಿನ ಅಭಿವೃದ್ಧಿಗೆ ಮಾತ್ರ ರೇವಣ್ಣ ಒತ್ತು ನೀಡಿದ್ದು ಅಷ್ಟೆ, ನಾನು ಮಂತ್ರಿಯಾಗಿದ್ದಾಗ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಿದೆ. ರೇವಣ್ಣ ತಾನು ಮಾಡಿಸಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಭೆಯಲ್ಲಿ ರೇವಣ್ಣ ಅವರ ಕಾಲೆಳೆದರು.

    ಪ್ರೀತಂಗೌಡ ಫೋಟೋಗೆ ಕೊಕ್

    ಚುನಾವಣಾ ಪ್ರಚಾರ ಸಭೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಫೋಟೋಗೆ ಕೊಕ್ ನೀಡಲಾಗಿತ್ತು.ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಪ್ರಮುಖ ನಾಯಕರು ಭಾವಚಿತ್ರ ಇದ್ದರೂ ಪ್ರೀತಂಗೌಡ ಅವರ ಫೋಟೋ ಮಾಯವಾಗಿತ್ತು. ಅಲ್ಲದೆ ತಾಲೂಕಿನ ಬಿಜೆಪಿ ಪ್ರಮುಖ ನಾಯಕರೆನಿಸಿಕೊಂಡಿರುವ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯೋಗಾ ರಮೇಶ್ ಸಭೆಗೆ ಗೈರಾಗಿದ್ದರು. ಈ ಕುರಿತು ಕುಮಾರಸ್ವಾಮಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಸ್ಥಳೀಯರು ಹಾಕಿಲ್ಲ, ಕೆಲವು ಕಡೆ ನಮ್ಮ ಫೋಟೋ ಕೂಡ ಹಾಕುವುದಿಲ್ಲ ಎಂದು ನುಣುಚಿಕೊಂಡರು.

    ಶ್ರೀಗಳಭೇಟಿಗೆ ಕಾಂಗ್ರೆಸ್‌ನವರು ಹೋಗುವುದಿಲ್ಲವೇ ?
    ಅರಕಲಗೂಡು : ಕಾಂಗ್ರೆಸ್ ಸಹವಾಸ ಮಾಡಿ ನಮ್ಮ ಜೆಡಿಎಸ್ ಹಾಳಾಯಿತು. ವರ್ಷದ ಮೊದಲ ಹಬ್ಬದ ಮರುದಿನ ಶ್ರೀಗಳ ಆಶೀರ್ವಾದ ಪಡೆಯಲು ತೆರಳಿದ್ದೇವೆ, ಅವರೇನು ಎಲ್ಲರೂ ಒಟ್ಟಿಗೆ ಹೋಗುವುದಿಲ್ಲವೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
    ಜೆಡಿಎಸ್‌ನ ಎಲ್ಲ ಮುಖಂಡರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪರ್ಯಾಯ ಮಠ ಹುಟ್ಟುಹಾಕಲು ಯತ್ನಿಸಿದ ಕುರಿತು ನಿಮ್ಮ ವಿರುದ್ಧ ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಸಮಾಜದಲ್ಲಿ ಹಲವಾರು ಮಠಗಳಿವೆ. ಹಾಗಾಗಿ ದೇವೇಗೌಡರು ದೊಡ್ಡ ಸಮಾಜಕ್ಕೆ ಇನ್ನೊಂದು ಮಠ ಇರಲಿ ಎಂದು ಬೆಳೆಸಲು ಹೋಗಿದ್ದು. ಪರ್ಯಾಯಾವಾಗಿ ಮಠ ಹುಟ್ಟು ಹಾಕಲು ಅಲ್ಲ. ಇನ್ನೊಬ್ಬರು ಇರಲಿ ಅಂತ ಸಹಕಾರ ನೀಡಿದ್ದು ಎಂದರು.

    ಹಾಸನದಲ್ಲಿ ಪ್ರಜ್ವಲ್ ಹೆಸರು ಹೇಳದೆ ಪ್ರೀತಂಗೌಡ ಪ್ರಚಾರ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪದೇ ಪದೆ ಆತನ ಹೆಸರು ಯಾಕೆ ಹೇಳಬೇಕು. ಅವರು ಬಿಜೆಪಿ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆಯಲ್ಲಿದ್ದಾರೆ. ಎನ್‌ಡಿಎ ಅರ್ಭರ್ಥಿ ಪರ ಮತ ಕೇಳುತ್ತಿದ್ದಾರೆ. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ ಅದನ್ನು ಬಹಿರಂಗವಾಗಿ ಹೇಳಕ್ಕಾಗುತ್ತಾ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts