More

    ಸವಾಲಾದ ಸರಣಿ ಕೊಲೆಗಳು: ಆ ಕ್ಷಣ- ಭಾಗ 1

    ಸವಾಲಾದ ಸರಣಿ ಕೊಲೆಗಳು: ಆ ಕ್ಷಣ- ಭಾಗ 12006ರ ಅಕ್ಟೋಬರ್ 20ರಂದು ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಯಾರೋ ಫೋನ್ ಮಾಡಿ ನಗರದ ತಿಹಾರ್ ಜೈಲಿನ ಮೂರನೇ ಗೇಟಿನ ಬಳಿ ಸಂಶಯಾಸ್ಪದವಾಗಿ ಕಾಣುತ್ತಿರುವ ದೊಡ್ಡ ಮೂಟೆ ಬಿದ್ದಿದೆ ಎಂದು ತಿಳಿಸಿದರು. ಈ ಮೇರೆಗೆ ಹರಿನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಕಾಂಪೌಂಡಿನ ಪಕ್ಕ ಒಂದು ಗೋಣಿಚೀಲ ಬಿದ್ದಿತ್ತು. ಅದರೊಳಗೆ ಹಗ್ಗದಲ್ಲಿ ಸುತ್ತಿದ್ದ ಬೆತ್ತದ ಬುಟ್ಟಿಯಿತ್ತು. ಬುಟ್ಟಿಯೊಳಗಡೆ ಕೆಂಪು ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣದ ಶರ್ಟ್​ನಲ್ಲಿ ಕಟ್ಟಲಾಗಿದ್ದ ರುಂಡವಿರದ ಪುರುಷನ ದೇಹವಿತ್ತು. ಆ ದೇಹದ ಕಾಲುಗಳನ್ನು ಮೊಣಕಾಲಿನಿಂದ ಕೆಳಗಡೆಯೂ, ಕೈಗಳನ್ನು ಮೊಣಕೈನ ಕೆಳಗೂ ಕತ್ತರಿಸಲಾಗಿತ್ತು. ಶವದ ಮರ್ವಂಗವನ್ನು ಕತ್ತರಿಸಲಾಗಿತ್ತು. ಮೃತನು ಧರಿಸಿದ್ದ ಒಳಚಡ್ಡಿ ಮತ್ತು ಬನಿಯನ್ ದೇಹದ ಮೇಲೆಯೇ ಇದ್ದವು. ಶವದ ಎಡತೋಳಿನ ಮೇಲೆ ಚೇಳಿನ ಹಚ್ಚೆ ಗುರುತಿದ್ದು, ಬಲತೋಳಿನ ಮೇಲೆ ಅಮಿತ್ ಎಂದಿತ್ತು. ತೊಡೆ, ಎದೆ ಮತ್ತು ಬೆನ್ನಿನ ಮೇಲೆ ರಕ್ತ ನೀಲಿಗಟ್ಟಿದ ಗುರುತುಗಳಿದ್ದವು. ಬುಟ್ಟಿಯಲ್ಲಿ ಹಸಿರು ಶಾಯಿಯಲ್ಲಿ ಹಿಂದಿಯಲ್ಲಿ ಬರೆದ ಪತ್ರವಿದ್ದ್ದು, ಅದರಲ್ಲಿ ಹೀಗಿತ್ತು:

    ‘ದೆಹಲಿ ಪೊಲೀಸರೇ, ಇಲ್ಲಿಯವರೆಗೆ ನನ್ನ ಮೇಲೆ ಸುಳ್ಳು ಕೇಸುಗಳನ್ನು ಹಾಕುತ್ತ ಬಂದಿರುತ್ತೀರಿ. ಈಗ ನಿಜವಾಗಿ ಕೊಲೆ ಮಾಡಿದ್ದೇನೆ. ಈಗ ನನ್ನನ್ನು ಬಂಧಿಸಬಲ್ಲಿರಾ. ಬಂಧಿಸಿದರೆ ನೀವು ನಿಜವಾದ ಪೊಲೀಸರು ಎಂದು ಭಾವಿಸುತ್ತೇನೆ. ಸುಳ್ಳು ಪ್ರಕರಣಗಳನ್ನು ಹಾಕುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಈ ರೀತಿಯ ಪ್ರಕರಣಗಳು ಮುಂದುವರಿಯುತ್ತಲೇ ಹೋಗುತ್ತವೆ. ಡಿಸಿಪಿ ಮನಿಷ್ ಅಗರವಾಲ್ ಮತ್ತು ಹೆಡ್ ಕಾನ್ಸ್​ಟೇಬಲ್ ಬಲಬೀರ್ ಸಿಂಗ್ ಸುಳ್ಳು ಪ್ರಕರಣವನ್ನು ಹಾಕಿದ್ದ ಕಾರಣವೇ ಹೀಗೆ ಮಾಡುತ್ತಿದ್ದೇನೆ. ನಾನು ದೊಡ್ಡ ಗ್ಯಾಂಗ್​ಸ್ಟರ್ ಅಲ್ಲ ಮತ್ತು ಕುಖ್ಯಾತ ಅಪರಾಧಿಯಲ್ಲ. ಆದರೂ ನನ್ನನ್ನು ಗಡೀಪಾರು ಮಾಡಿಸಿದಿರಿ. ನಿಜವಾದ ಅಪರಾಧಿ ಹಿಡಿಯಲು ನೀವು ಲಾಯಕ್ಕಿಲ್ಲ. 2003ರ ನವೆಂಬರ್​ನಲ್ಲಿ ಒಂದು ಕೊಲೆ ಮಾಡಿದೆ. ಆಗಲೂ ಪತ್ತೆಮಾಡಲಾಗಲಿಲ್ಲ. ಹಾಗೆಯೇ ಈ ಪ್ರಕರಣವನ್ನು ಬೇಧಿಸಲು ಸಾಧ್ಯವಿಲ್ಲ. ನಾನು ನಿಮಗಾಗಿ ಕಾಯುತ್ತಿರುತ್ತೇನೆ. ನಿಮ್ಮ ಅಪ್ಪ ಮತ್ತು ನಿಮ್ಮ ಭಾವ’. ಕಡೆಯಲ್ಲಿ ಸಿ.ಸಿ ಎಂದು ಬರೆದಿತ್ತು.

    ಹರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲು ಮಾಡಿ ಮೃತದೇಹ ಯಾರದು, ದೇಹದ ಇತರ ಭಾಗಗಳು ಎಲ್ಲಿ ಎಂದು ಪತ್ತೆ ಮಾಡಲು ತನಿಖೆ ಆರಂಭವಾಯಿತು. ಮೃತದೇಹದ ಫೋಟೋಗಳನ್ನು ದೆಹಲಿ ಮತ್ತು ಸುತ್ತಲಿನ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ರವಾನಿಸಿ ಕಳೆದ ಕೆಲವು ದಿನಗಳಲ್ಲಿ ದಾಖಲಾಗಿರುವ ಕಾಣೆಯಾದ ಕೇಸುಗಳ ಬಗ್ಗೆ ವಿಚಾರಿಸಲಾಯಿತು. ಮುಂಡದ ಶವಪರೀಕ್ಷೆ ಮಾಡಿದ ವೈದ್ಯರು ಮೃತನು 28 ವರ್ಷದವ ನಾಗಿರಬಹುದು ಎಂದು ಅಂದಾಜು ಮಾಡಿ, ಅವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆನಂತರ ಶವವನ್ನು ಕತ್ತರಿಸಲಾಗಿದೆ ಎಂದು ತಿಳಿಸಿದರು. ಮೃತದೇಹದ ಡಿಎನ್​ಎ ಸ್ಯಾಂಪಲ್ ರಕ್ಷಿಸಿಟ್ಟು ಶವವನ್ನು ಪೊಲೀಸರು ದಫನ್ ಮಾಡಿದರು.

    ಆರೋಪಿ ಪೊಲೀಸರನ್ನುದ್ದೇಶಿಸಿ ಬರೆದಿದ್ದ ಪತ್ರ ಕೆಲವು ಕುರುಹುಗಳನ್ನು ನೀಡಿತ್ತು. ಅವೆಂದರೆ 2003ರ ನವೆಂಬರ್​ನಲ್ಲಿ ನಡೆದಿದ್ದ ಒಂದು ಕೊಲೆ. ಮತ್ತು ಡಿಸಿಪಿ ಅಗರವಾಲ್ ಹೆಸರು. ಸದರಿ ಅಧಿಕಾರಿ ಆ ಸಮಯದಲ್ಲಿ ದೆಹಲಿ ವಾಯವ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಆ ವಿಭಾಗದಲ್ಲಿ 2003ರಲ್ಲಿ ನಡೆದಿದ್ದ ಎಲ್ಲ ಕೊಲೆಗಳ ಕಡತಗಳನ್ನು ಪರಿಶೀಲಿಸಲಾಯಿತು. ಅಷ್ಟರಲ್ಲಿ ಹರಿನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಹೋಷಿಯಾರ್ ಸಿಂಗ್​ರ ಮೊಬೈಲ್ ಫೋನಿಗೆ ಲ್ಯಾಂಡ್​ಲೈನ್​ನಿಂದ ಕರೆ ಮಾಡಿದ ಅಪರಿಚಿತ, ‘ನೀವು ಮತ್ತು ಜೈಲಿನ ಅಧಿಕಾರಿಗಳು ಈ ಹಿಂದೆ ನನಗೆ ತೊಂದರೆ ಕೊಟ್ಟಿದ್ದೀರಿ, ಅಮಾಯಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದಿದ್ದರೆ ಇನ್ನು ಮುಂದೆ ನಾನು ಕೊಚ್ಚಿ ಹಾಕಿದ ಶವಗಳನ್ನು ಜೈಲಿನ ಮುಂದೆ ಎಸೆಯುತ್ತೇನೆ ಹುಷಾರ್’ ಎಂದು ಹೇಳಿ ಕರೆಯನ್ನು ಕಟ್ ಮಾಡಿದ. ಆ ಕರೆ ಪಶ್ಚಿಮ ದೆಹಲಿಯಲ್ಲಿನ ಒಂದು ಟೆಲಿಫೋನ್ ಬೂತ್​ನಿಂದ ಬಂದದ್ದಾಗಿ ಪತ್ತೆ ಮಾಡಿದ ಹೋಷಿಯಾರ್ ಸಿಂಗ್ ಅಲ್ಲಿಗೆ ದಾವಿಸಿದರು. ಆ ಬೂತಿನಲ್ಲಿದ್ದ ಆಪರೇಟರ್ 30 ವರ್ಷ ವಯಸ್ಸಿನ ವ್ಯಕ್ತಿ ಒಂದು ರೂಪಾಯಿ ನಾಣ್ಯಗಳನ್ನು ಮಷೀನಿಗೆ ಹಾಕಿ ಕರೆ ಮಾಡಿದ್ದೆಂದು ತಿಳಿಸಿದ. ಎಷ್ಟೇ ಪರಿಶ್ರಮ ಪಟ್ಟರೂ ಮೃತನ ಅಥವಾ ಕೊಲೆಗಾರನ ಬಗ್ಗೆ ಸುಳಿವು ಸಿಗಲಿಲ್ಲ. 2007ರ ಏಪ್ರಿಲ್ 25ರ ಬೆಳಗ್ಗೆ ಅದೇ ತಿಹಾರ್ ಜೈಲಿನ 3ನೆ ಗೇಟಿನ ಬಳಿ ಇನ್ನೊಂದು ಪ್ರಕರಣ ವರದಿಯಾಯಿತು. ಪ್ಲಾಸ್ಟಿಕ್ ಚೀಲದೊಳಗಿದ್ದ ರಟ್ಟಿನ ಪೆಟ್ಟಿಗೆಯಲ್ಲಿ ತಲೆ ಮತ್ತು ಕೈಕಾಲುಗಳಿರದ ಪುರುಷನ ಮೃತದೇಹವಿದ್ದು, ಮರ್ವಂಗವನ್ನು ಕತ್ತರಿಸಲಾಗಿತ್ತು. ಮೃತನು 30 ವರ್ಷ ವಯಸ್ಸಿನವನಾಗಿದ್ದು, ಡಬ್ಬದ ಮೇಲಿದ್ದ ಎರಡು ಬೆರಳಚ್ಚು ಗುರುತುಗಳನ್ನು ತನಿಖಾಧಿಕಾರಿ ಪಡೆದುಕೊಂಡರು. ಹರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಾಯಿತು.

    ಅದೇ ದಿನ ದೆಹಲಿಯ ಹೈದರಪುರ್ ಬಡಾವಣೆಯ ಕಾಲುವೆ ದಡದ ಮೇಲೆ ಮಾನವನ ಒಂದು ಕಾಲು ಬಿದ್ದಿದ್ದ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಅದೇ ದಿನ ದೆಹಲಿ ಪಕ್ಕದಲ್ಲಿರುವ ಉತ್ತರ ಪ್ರದೇಶದ ಲೋನಿ ಪಟ್ಟಣದ ತರಕಾರಿ ಮಾರುಕಟ್ಟೆ ಬಳಿ 2 ಡಬ್ಬಗಳಲ್ಲಿ ವ್ಯಕ್ತಿಯ ಕೈ ಮತ್ತು ಪುರುಷನ ಮರ್ಮಾಂಗ ಸಿಕ್ಕಿತು. ಹರಿನಗರ ಪೊಲೀಸರು ಆವುಗಳನ್ನು ವಶಪಡಿಸಿಕೊಂಡು ಜೈಲಿನ ಮುಂದೆ ಸಿಕ್ಕಿದ್ದ ಮುಂಡದೊಡನೆ ಪರೀಕ್ಷಿಸಿದಾಗ ಇವೆಲ್ಲವೂ ಒಬ್ಬನದೇ ಎಂದು ತಿಳಿದುಬಂದಿತು.

    ಇಲ್ಲಿಯವರೆಗೆ ದಾಖಲಾಗಿದ್ದ ಎರಡೂ ಪ್ರಕರಣಗಳು ಒಂದೇ ಬಗೆಯದಾಗಿದ್ದರೂ ಯಾವ ಹೊಸ ಕುರುಹೂ ದೊರೆತಿರಲಿಲ್ಲ. ಈ ಪ್ರಕರಣಗಳ ತನಿಖೆ ಮುಂದುವರಿದಂತೆ 2007ರ ಮೇ 18ರಂದು ಜೈಲಿನ ಒಂದನೆಯ ಗೇಟಿನ ಫುಟ್​ಪಾತ್ ಬಳಿ ಪ್ಲಾಸ್ಟಿಕ್ ಚೀಲವೊಂದು ಬಿದ್ದಿದೆ ಎಂಬ ಮಾಹಿತಿ ಬಂದಾಗ ಪೊಲೀಸರು ಹೌಹಾರಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ಆ ಚೀಲವನ್ನು ಬಿಚ್ಚಿ ನೋಡಿದಾಗ ಅದರಲ್ಲಿಯೂ ಪುರುಷನೊಬ್ಬನ ತಲೆ, ಕೈಕಾಲು ಮತ್ತು ಮರ್ವಂಗಗಳಿರದ ದೇಹವಿತ್ತು. ಆ ಚೀಲದಲ್ಲಿ ಹಿಂದಿಯಲ್ಲಿ ಬರೆದ ಮೂರು ಪುಟಗಳ ಪತ್ರವಿದ್ದು, ಅದರಲ್ಲಿ ಹೀಗೆ ಬರೆದಿತ್ತು: ‘ದೆಹಲಿ ಪೊಲೀಸರೇ, ನನ್ನನ್ನು ಹಿಡಿಯದಿದ್ದರೆ ನೀವು ನಾಲಾಯಕ್ ಎಂದೇ ಭಾವಿಸಬೇಕಾಗುತ್ತದೆ. ತಿಹಾರ್ ಜೈಲಿನ ಕೈದಿಗಳಿಗೆ ಯಾವ ರೀತಿಯಾಗಿ ತೊಂದರೆ ಕೊಡಲಾಗುತ್ತಿದೆ ಎಂದು ನಿಮಗೆ ತಿಳಿದಿಲ್ಲ. ನನಗೆ ದೆಹಲಿ ಡಿಸಿಪಿ ಮನಿಷ್ ಕುಮಾರ್ ಅವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ, ನಾನು ಅವರಿಗೆ ಸವಾಲು ಎಸೆಯುತ್ತೇನೆ. ಈ ಹಿಂದೆ ಅಕ್ಟೋಬರ್ 20ರಂದು ಒಂದು ಶವ ಎಸೆದಿದ್ದೆ. ಇಲ್ಲಿಯವರೆಗೆ ಈ ಶವ ಯಾರದು, ಕೊಲೆ ಮಾಡಿದವರು ಯಾರು ಎಂದು ನಿಮಗೆ ಪತ್ತೆ ಮಾಡಲಾಗಿಲ್ಲ. ಶವದ ಮೇಲೆ ಅಮಿತ್ ಎಂಬ ಹೆಸರು ಬರೆದಿದ್ದರೂ ಆ ಶವ ಯಾರದೆಂದು ಹೇಳಲಿಲ್ಲ. ಕೆಲ ದಿನಗಳ ಹಿಂದೆ ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ನಿಮಗೆ ಉಡುಗೊರೆಯಾಗಿ ಕಳುಹಿಸಿದ್ದೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ನನ್ನ ದೂರುಗಳನ್ನು ಆಲಿಸಿ. ಇಲ್ಲದಿದ್ದರೆ ಪ್ರತಿ 15 ದಿನಕ್ಕೊಮ್ಮೆ ಇದೇ ರೀತಿಯ ಉಡುಗೊರೆ ಕಳುಹಿಸುತ್ತೇನೆ. ನಾಲ್ಕೈದು ವರ್ಷಗಳಲ್ಲಿ ಏಳೆಂಟು ಕೊಲೆ ಮಾಡಿದ್ದೇನೆ, ನನಗೆ ತಲೆ ಕೆಟ್ಟಿದೆ. ನಾನು ಅಪರಾಧಿಯಾಗಲು ದೆಹಲಿ ಪೊಲೀಸರೇ ಕಾರಣವೆಂದು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ’. ಈ ಪ್ರಕರಣ ದಾಖಲಾದ ಮರುದಿನ ಬೆಳಗ್ಗೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಕಾಂಪೌಂಡಿನಲ್ಲಿ ಸಂಶಯಾಸ್ಪದ ಪೆಟ್ಟಿಗೆಯೊಂದು ಬಿದ್ದಿತ್ತು. ಆ ಕಾರ್ಡ್​ಬೋರ್ಡ್ ಪೆಟ್ಟಿಗೆಯಲ್ಲಿ ಭುಜದಿಂದ ಕತ್ತರಿಸಲಾಗಿದ್ದ ಮಾನವನ ಎರಡು ಕೈಗಳೂ ಹಾಗೂ ಪುರುಷನ ಜನನಾಂಗ ಇದ್ದವು. ಹಿಂದಿನ ಬೆಳಗ್ಗೆ ತಿಹಾರ್ ಜೈಲಿನ ಮುಂದೆ ಸಿಕ್ಕ ರುಂಡದೊಂದಿಗೆ ಹೋಲಿಸಿದಾಗ ಆ ಎಲ್ಲ ಭಾಗಗಳೂ ಒಂದೇ ದೇಹದಿಂದ ಕತ್ತರಿಸಲಾಗಿವೆ ಎಂದು ತಿಳಿದುಬಂತು.

    (ಮುಂದುವರಿಯುವುದು) (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts