More

    ರಸ್ತೆಗಿಳಿಯದ ಸ್ವಚ್ಛತಾ ಮಷಿನ್

    ಬೆಂಗಳೂರು: ಪಾಲಿಕೆ ಖರೀದಿಸಿರುವ 17 ಕಸ ಗುಡಿಸುವ ಯಂತ್ರಗಳಿಗೆ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆ ಭಾಗ್ಯ ಏನೋ ಸಿಕ್ಕಿದೆ. ಆದರೆ ರಸ್ತೆ ಸ್ವಚ್ಛಗೊಳಿಸುವ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. 5 ತಿಂಗಳ ಹಿಂದೆ ನಗರಕ್ಕೆ ಬಂದಿರುವ ಯಂತ್ರಗಳು ಸದ್ಯ ಕೆಲಸವಿಲ್ಲದೆ ನಿಂತಿವೆ!

    ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವಲ್ಲಿ ವಿಫಲವಾಗಿರುವ ಪಾಲಿಕೆ, ಸ್ವಚ್ಛತೆಗಾಗಿ 17 ದುಬಾರಿ ಯಂತ್ರಗಳನ್ನು ಖರೀದಿಸಿದೆ. 2019ರ ಅಕ್ಟೋಬರ್ ತಿಂಗಳಲ್ಲೇ ಯಂತ್ರಗಳು ಪಾಲಿಕೆಯ ಸುಪರ್ದಿಗೆ ಬಂದಿದ್ದವು. ಆದರೆ ಅವುಗಳಿಗೆ ಸಿಎಂ ಹಸಿರು ನಿಶಾನೆ ನೀಡಬೇಕು ಎಂಬ ಕಾರಣಕ್ಕೆ ನಗರದ ಹೊರವಲಯದಲ್ಲಿ ನಿಲ್ಲಿಸಲಾಗಿತ್ತು.

    ಸಿಎಂ ಯಡಿಯೂರಪ್ಪ ಫೆ.8ರಂದು ಯಂತ್ರಗಳಿಗೆ ಹಸಿರು ನಿಶಾನೆ ತೋರಿದರೂ ಪಾಲಿಕೆ ಯಂತ್ರಗಳನ್ನು ರಸ್ತೆಗಿಳಿಸಿಲ್ಲ. ನಗರದಲ್ಲಿ ಅಂದಾಜು 2 ಸಾವಿರ ಕಿ.ಮೀ. ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿವೆ. ರಸ್ತೆಗಳ ಬದಿ ಮತ್ತು ವಿಭಜಕಗಳ ಪಕ್ಕದಲ್ಲಿರುವ ಕಸ ಹಾಗೂ ಮಣ್ಣು ವಾಹನ ಸಂಚಾರದಿಂದ ಗಾಳಿಯಲ್ಲಿ ಸೇರಿಕೊಳ್ಳುತ್ತಿವೆ.

    ಈ ಅಶುದ್ಧ ಗಾಳಿ ಸೇವಿಸುವ ಜನರು ಅಸ್ತಮಾ, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆ ಎದುರಿ ಸುವಂತಾಗಿದೆ. ಸ್ವಚ್ಛತೆ ಮಾಡುವಲ್ಲಿ ಪೌರಕಾರ್ವಿುಕರಗೆ ಆಗುವ ತೊಂದರೆ ತಪ್ಪಿಸುವ ದೃಷ್ಟಿಕೋನದಿಂದಲೂ ಯಂತ್ರಗಳನ್ನು ಖರೀದಿಸಲಾಗಿದೆ.

    ಕೇವಲ 40 ಕಿ.ಮೀ. ಸ್ವಚ್ಛತೆ

    ಪಾಲಿಕೆ ಖರೀದಿ ಮಾಡಿರುವ 17 ಹೊಸ ಯಂತ್ರ ಗಳಲ್ಲಿ ತಾಂತ್ರಿಕ ದೋಷಗಳಿವೆ ಎಂದು ಪಾಲಿಕೆ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಂತ್ರಗಳು ಪ್ರತಿನಿತ್ಯ 60 ಕಿ.ಮೀ. ಸ್ವಚ್ಛತೆ ಮಾಡಬೇಕು ಎಂದು ಅಂದಾಜಿಲಾಗಿತ್ತು. ಆದರೆ ಅವು ಕೇವಲ 40 ಕಿ.ಮೀ. ಸ್ವಚ್ಛತೆ ಮಾಡುವ ಸಾಮರ್ಥ್ಯ ಹೊಂದಿವೆ. ವಾಹನಗಳು ಚಲಿಸುವಾಗಲೇ ಸ್ವಚ್ಛತೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಬದಲಿಗೆ, ಅಲ್ಲಲ್ಲಿ ನಿಲ್ಲಿಸಿಕೊಂಡು ಪೈಪ್ ಹಿಡಿದು ಕಾರ್ವಿುಕರೇ ಸ್ವಚ್ಛತೆ ಮಾಡಬೇಕಿದೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಹೆಚ್ಚು ಹಣ ಪಾವತಿ

    3 ವರ್ಷಗಳ ಹಿಂದೆ ಒಂದಕ್ಕೆ 1 ಕೋಟಿ ರೂ.ನಂತೆ 14 ಸ್ವಯಂಚಾಲಿತ ಕಸ ಗುಡಿಸುವ ಯಂತ್ರಗಳನ್ನು ಪಾಲಿಕೆ ಖರೀದಿಸಿದೆ. ಅವುಗಳ ನಿರ್ವಹಣೆಗೆ ಮಾಸಿಕ 6.25 ಲಕ್ಷ ರೂ. ಪಾವತಿಸುತ್ತಿದೆ. ಆದರೆ ಹೊಸ ಯಂತ್ರಗಳ ಖರೀದಿಯಲ್ಲಿ ಪ್ರತಿಯೊಂದಕ್ಕೆ 1.35 ಕೋಟಿ ರೂ. ಪಾವತಿಸಲಾಗಿದೆ. ಜತೆಗೆ ಅವುಗಳ ಕಾರ್ಯನಿರ್ವಹಣೆ ಪ್ರತಿ ಕಿ.ಮೀ. ಸ್ವಚ್ಛತೆಗೆ 600 ರೂಪಾಯಿ ನೀಡುವ ಮೂಲಕ ಮಾಸಿಕ 7.05 ಲಕ್ಷ ರೂ. ಪಾವತಿ ಮಾಡಲು ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

    ಪಾಲಿಕೆ ಖರೀದಿಸಿದ 17 ಹೊಸ ಕಸ ಗುಡಿಸುವ ಯಂತ್ರಗಳನ್ನು ವಲಯ ವಾರು ಜಂಟಿ ಆಯುಕ್ತರಿಗೆ ಒಪ್ಪಿಸಬೇಕಿದೆ. ಆಯುಕ್ತರು ಕಾರ್ಯನಿಮಿತ್ತ ದೆಹಲಿಗೆ ತೆರಳಿದ್ದು, ಮರಳಿದ ನಂತರ ಯಂತ್ರಗಳನ್ನು ಹಂಚಿಕೆ ಮಾಡಿ ಸ್ವಚ್ಛತೆ ಮಾಡಲು ರಸ್ತೆಗಿಳಿಸಲಾಗುವುದು.

    |ಎಂ. ಗೌತಮ್ ಕುಮಾರ್​ ಮೇಯರ್

     

    ಸತೀಶ್ ಕೆ. ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts