More

    ಗ್ರಾಪಂಗೂ ಬಂತು ಕ್ಯೂಆರ್ ಕೋಡ್

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಇಂದು ಡಿಜಿಟಲೀಕರಣದ ಪ್ರಭಾವದಿಂದ ಎಲ್ಲ ವಸ್ತುಗಳ ಸೇವೆ ಆನ್ ಲೈನ್ ಮೂಲಕವೇ ಆಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೂ ಅಂತರ್ಜಾಲದ ಮೂಲಕವೇ ಹಣ ಪಾವತಿಸಲು ಅವಕಾಶವಿದೆ. ಇದೀಗ ಗ್ರಾಮಾಂತರ ಭಾಗಕ್ಕೂ ಇದು ವಿಸ್ತರಿಸಿದ್ದು, ತೆರಿಗೆ ಸೇರಿ ಇತರ ಸೇವಾ ಶುಲ್ಕವನ್ನು ‘ಕ್ಯೂಆರ್ ಕೋಡ್’ ಮೂಲಕ ಪಾವತಿಸುವ ಸೌಲಭ್ಯವನ್ನು ರಾಣೆಬೆನ್ನೂರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪರಿಚಯಿಸಲಾಗಿದೆ.

    ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಕ್ಯೂಆರ್ ಕೋಡ್ ಸ್ಕಾ್ಯನಿಂಗ್ ವ್ಯವಸ್ಥೆ ಇದೀಗ ಗ್ರಾಮಾಂತರ ಪ್ರದೇಶಕ್ಕೂ ಹಬ್ಬು ತ್ತಿದೆ. ಈಗಾಗಲೇ ಸೆಸ್, ವಿದ್ಯುತ್ ಬಿಲ್, ಆಸ್ತಿ ತೆರಿಗೆ, ನೀರಿನ ಶುಲ್ಕ ಸೇರಿ ಹಲವಾರು ಸೇವೆಗಳಲ್ಲಿ ಕ್ಯೂಆರ್ ಕೋಡ್ ಬಳಕೆ ಆಗುತ್ತಿದೆ.

    ತಾಲೂಕಿನ 40 ಗ್ರಾಪಂಗಳಲ್ಲಿ ತೆರಿಗೆ, ಸೇವಾ ಶುಲ್ಕ ಮತ್ತು ವಿವಿಧ ಬಿಲ್​ಗಳನ್ನು ಕ್ಯೂಆರ್ ಕೋಡ್ ಸ್ಕಾ್ಯನಿಂಗ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಾಂತಿಕಾರಕ ಬದಲಾವಣೆ ತೆರಿಗೆ ಪಾವತಿಯನ್ನು ಸುಲಭಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ತಾಲೂಕಿನ ಚಳಗೇರಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು. ತಾವು ಕುಳಿತಲ್ಲೇ ವಿವಿಧ ನಮೂನೆಯ ಶುಲ್ಕ ಪಾವತಿಸುವುದನ್ನು ರೂಢಿಸಿಕೊಂಡಿದ್ದೇವೆ ಎಂದು ಅವರು ಹೇಳುತ್ತಾರೆ.

    ಏನಿದು ಕ್ಯೂಆರ್ ಕೋಡ್?:

    ಗ್ರಾಮೀಣ ಭಾಗದಲ್ಲಿ ಇದೀಗ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶೇ. 80ರಷ್ಟು ಜನತೆ ಸ್ಮಾರ್ಟ್ ಫೋನ್​ಗಳನ್ನು ಬಳಸುತ್ತಿದ್ದಾರೆ. ಹಾಗಾಗಿ ಇಲ್ಲಿರುವ ಬಾಪೂಜಿ ಸೇವಾ ಕೇಂದ್ರದ ಮೂಲಕ ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. ಗ್ರಾಹಕರು ಗ್ರಾಪಂನಲ್ಲಿಟ್ಟಿರುವ ಕೋಡ್ ಮೇಲೆ ಸ್ಕಾ್ಯನ್ ಮಾಡಿದರೆ ತಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿ, ಆನ್​ಲೈನ್ ಮೂಲಕ ಪೇಮೆಂಟ್ ಸಂದಾಯ ಮಾಡಬಹುದು. ಈ ವ್ಯವಸ್ಥೆಯಿಂದ ಸಾರ್ವಜನಿಕರ ಸಮಯವೂ ಉಳಿತಾಯವಾಗುತ್ತಿದ್ದು, ಪಾರದರ್ಶಕತೆಗೆ ಒತ್ತು ನೀಡಿದಂತಗಿದೆ.

    ಸಾರ್ವಜನಿಕರು ಟ್ರೇಡ್ ಲೈಸೆನ್ಸ್ ಶುಲ್ಕದಿಂದ ಹಿಡಿದು ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಹದ್ದುಬಸ್ತು, ನಾಡಕಚೇರಿ ಅರ್ಜಿ, ಕೇಬಲ್ ಅನುಮತಿ, ಜಾತಿ ಆದಾಯ ಪತ್ರ, ನೀರಿನ ಬಿಲ್ ಸೇರಿ ವಿವಿಧ ತೆರಿಗೆಗಳನ್ನು ಈ ಕ್ಯೂಆರ್ ಕೊಡ್ ಮೂಲಕ ಪಾವತಿಸಬಹುದು.

    ಜನಸ್ನೇಹಿ ವ್ಯವಸ್ಥೆ

    ಗ್ರಾಪಂ ನೀಡುವ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ತೆರಿಗೆ ಮತ್ತು ಶುಲ್ಕವನ್ನು ಪಾವತಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ’ಕ್ಯೂಆರ್ ಕೋಡ್’ ಅಂಟಿಸಿ ಪ್ರಚುರಪಡಿಸಲಾಗುತ್ತಿದೆ. ಕೆಲ ಗ್ರಾಮ ಪಂಚಾಯಿತಿಯವರು ಡಿಜಿಟಲ್ ಪಾವತಿ ವ್ಯವಸ್ಥೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಿ ಸೌಲಭ್ಯ ಬಳಸಿಕೊಳ್ಳಲು ಅಭಿಯಾನ ಕೈಗೊಂಡಿದ್ದಾರೆ.

    ಕ್ಯೂಆರ್ ಕೋಡ್ ಸೌಲಭ್ಯದಿಂದ ಪಾರದರ್ಶಕತೆ ಬಂದಿದೆ. ಸಂಗ್ರಹಿಸಿದ ಬಿಲ್ ಮತ್ತು ತೆರಿಗೆ ಮೊತ್ತವನ್ನು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಲು ವಿನಿಯೋಗಿಸುತ್ತಿದ್ದ ಅಧಿಕಾರಿಗಳ ಸಮಯವೂ ಉಳಿಯುತ್ತಿದೆ. ಪಂಚಾಯಿತಿ ಮೂಲಕ ನೀಡುತ್ತಿದ್ದ 44 ಸೇವೆಗಳಿಗೆ ಕ್ಯೂಆರ್ ಕೋಡ್ ಬಳಕೆ ಮಾಡಲಾಗುತ್ತಿದೆ.

    | ವೆಂಕಟೇಶ ಉಕ್ಕಡಗಾತ್ರಿ, ಚಳಗೇರಿ ಗ್ರಾಪಂ ಪಿಡಿಒ

    ಗ್ರಾಪಂನಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ತಂದಿರುವುದು ತುಂಬಾ ಅನುಕೂಲವಾಗಿದೆ. ಇದೀಗ ಎಲ್ಲರೂ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಪಂನಲ್ಲಿ ಯಾವುದೇ ಹಣದ ದುರುಪಯೋಗ ಸಹ ಆಗುವುದಿಲ್ಲ.

    | ಬಸನಗೌಡ, ಚಳಗೇರಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts