More

    ಸೇವಾ ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ ಲಾರಿ ಚಾಲಕರಿಂದ ಪ್ರತಿಭಟನೆ


    ರಾಣೆಬೆನ್ನೂರ: ತಾಲೂಕಿನ ಚಳಗೇರಿ ಟೋಲ್‌ನಾಕಾದಲ್ಲಿ ವಾಹನಗಳ ಸೇವಾ ಶುಲ್ಕವನ್ನು ಏಕಾಏಕಿ ಡಬಲ್ ಮಾಡಿರುವುದನ್ನು ಖಂಡಿಸಿ ದಾವಣಗೆರೆ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಸೋಮವಾರ ಟೋಲ್‌ನಾಕಾ ಎದುರು ಪ್ರತಿಭಟನೆ ನಡೆಸಲಾಯಿತು.

    ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ಚಳಗೇರಿ ಟೋಲ್‌ನಾಕಾವನ್ನು ಶ್ರೀ ಸಾಯಿ ಎಂಟರಪ್ರೈಸಸ್‌ನವರು ಗುತ್ತಿಗೆ ಪಡೆದಿದ್ದಾರೆ. ಆದರೆ, ಇವರು ಏಕಾಏಕಿ ಸೇವಾ ಶುಲ್ಕ ಏರಿಕೆ ಮಾಡಿರುವುದು ಖಂಡನೀಯ. ಈ ಹಿಂದೆ 10 ಚಕ್ರದ ಲಾರಿಗಳಿಗೆ 290 ರೂ. ಸೇವಾ ಶುಲ್ಕ ಇತ್ತು. ಅದನ್ನು ಈಗ 470 ರೂ. ಮಾಡಿದ್ದಾರೆ. 12 ಚಕ್ರದ ಲಾರಿಗಳಿಗೆ 445 ರೂ.ನಿಂದ 700 ರೂ.ಗೆ ಏರಿಕೆ ಮಾಡಿದ್ದಾರೆ. ಇದೇ ರೀತಿ ಕಾರು ಹಾಗೂ ಇತರ ವಾಹನಗಳು ಸೇರಿ ಎಲ್ಲದಕ್ಕೂ ಡಬಲ್ ಹಣ ಮಾಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮಾವಳಿ ಪ್ರಕಾರ ರಸ್ತೆ ದುರಸ್ತಿ ಕಾರ್ಯ ನಡೆದಾಗ ಯಾವುದೇ ರೀತಿ ಸೇವಾ ಶುಲ್ಕ ಏರಿಸುವಂತಿಲ್ಲ. ಅಲ್ಲದೆ ಎಲ್ಲ ರೀತಿಯ ಅನುಕೂಲ ಇದ್ದಾಗ ಮಾತ್ರ ಸೇವಾ ಶುಲ್ಕ ಏರಿಸಬೇಕು. ಆದರೆ, ಚಳಗೇರಿಯಿಂದ ಬಂಕಾಪುರ ಟೋಲ್‌ಗೆ ತಲುಪುವ ರಸ್ತೆಯಲ್ಲಿ ಸರಿಯಾಗಿ ಸರ್ವೀಸ್ ರಸ್ತೆ ಇಲ್ಲ. ಶೌಚಗೃಹ ಇಲ್ಲ, ಛತ್ರ ಹಾಗೂ ಮೋಟೆಬೆನ್ನೂರ ಬಳಿ ಸೇತುವೆ ಕಾಮಗಾರಿ ಇನ್ನೂ ಆಗಿಲ್ಲ. ಇಂಥ ಸಮಯದಲ್ಲಿ ಸೇವಾ ಶುಲ್ಕ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ.

    ಆದ್ದರಿಂದ ಗುತ್ತಿಗೆದಾರರು ಕೂಡಲೇ ಹಳೆಯ ದರವನ್ನು ನಿಗದಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಟೋಲ್‌ನಾಕಾದ ಅಧಿಕಾರಿ ರಾಘು ಚೌಧರಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ಮಿರ್ಜಾ ಕಲಿಮವುಲ್ಲಾ, ಕಮರ ಅಹ್ಮದ್, ಸ್ವಾಗಿ ವೀರಭದ್ರೇಶ, ಭೀಮಪ್ಪ, ತಿಮ್ಮಣ್ಣ, ಪ್ರಶಾಂತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts