More

    ಅಪ್ರಾಪ್ತನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ: ವೈದ್ಯೆ ವಿರುದ್ಧದ ಕೇಸ್​ ರದ್ದು ಮಾಡಲು ಹೈಕೋರ್ಟ್​ ನಕಾರ

    ಬೆಂಗಳೂರು: ಮಂಡ್ಯ ಮೂಲದ ಅಪ್ರಾಪ್ತನೊಬ್ಬನನ್ನು ಅಪಹರಿಸಿ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯೆಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್​ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.

    ಪ್ರಕರಣದ ಎಫ್​ಐಆರ್​ ಮತ್ತದರ ಸಂಬಂಧ ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಡಾ.ಅನಿತಾ ಪಾಟೀಲ್​ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್​ ಗೋವಿಂದ ರಾಜ್​ ಅವರಿದ್ದ ಪೀಠ ವಜಾಗೊಳಿಸಿದೆ.

    ಹೈಕೋರ್ಟ್​ ಹೇಳಿದ್ದೇನು?: ಅಪ್ರಾಪ್ತ ಬಾಲಕನೊಬ್ಬನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ ಮಾಡಿದ ಆರೋಪ ಅರ್ಜಿದಾರರ ಮೇಲಿದೆ. ಆ ಆರೋಪ ಸಂಬಂಧ ತನಿಖೆ ನಡೆಸಿರುವ ಪೊಲೀಸರು, ಅರ್ಜಿದಾರರೂ ಸೇರಿ ಹಲವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ತೃತೀಯ ಲಿಂಗಿಗಳೂ ಇದ್ದು, ಸಂತ್ರಸ್ತ ಬಾಲಕನ ಲಿಂಗ ಪರಿವರ್ತಿಸಿ ಆತನನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ ಎಂಬ ಆರೋಪವಿದೆ. ಯಾವುದೇ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿದ್ದರೂ, ಅದು ವಿಚಾರಣಾ ನ್ಯಾಯಾಲಯದ ವಿಚಾರಣೆಯಿಂದ ಸಾಬೀತಾಗಬೇಕಿದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

    ವೈದ್ಯರ ವಿರುದ್ಧ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನಿರ್ಲಕ್ಷ್ಯ ತೋರಿದ ಆರೋಪವಿದ್ದಾಗ ಮಾತ್ರ ಮತ್ತೊಬ್ಬ ವೈದ್ಯರಿಂದ ಅಭಿಪ್ರಾಯ ಪಡೆಯಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರ ವೈದ್ಯೆಯ ವಿರುದ್ಧ ಅಂತಹ ಯಾವುದೇ ಆರೋಪವಿಲ್ಲ. ಬಾಲಕನೊಬ್ಬನಿಗೆ ಯಶಸ್ವಿಯಾಗಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸಿ ಹೆಣ್ಣಾಗಿ ಪರಿವರ್ತಿಸಿದ ಆರೋಪ ವೈದ್ಯೆಯ ಮೇಲಿದೆ. ಶಸ್ತ್ರಚಿಕಿತ್ಸೆ ನಡೆದಾಗ ಸಂತ್ರಸ್ತ ಅಪ್ರಾಪ್ತನಾಗಿದ್ದ. ಇಂತಹ ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಬಿಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿ ವಜಾಗೊಳಿಸಿದೆ.

    ಪ್ರಕರಣವೇನು?: ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆ ಟೌನ್​ ಪೊಲೀಸ್​ ಠಾಣೆಗೆ 2018ರ ಫೆ.11ರಂದು ಸಾಕಮ್ಮ ಎಂಬುವರು ದೂರು ನೀಡಿ, ವೈದ್ಯೆ ಅನಿತಾ ಪಾಟೀಲ್​ ಹಾಗೂ ಇತರರು ತಮ್ಮ ಮೊಮ್ಮಗನನ್ನು ಅಪಹರಿಸಿ, ಬಲವಂತವಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಅಪ್ರಾಪ್ತರ ಅಪಹರಣ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಮಕ್ಕಳ ಕಳ್ಳ ಸಾಗಣೆ ಸೇರಿ ಐಪಿಸಿಯ ವಿವಿಧ ಸೆಕ್ಷನ್​ಗಳು ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿ ವಿಚಾರಣಾ ನ್ಯಾಯಾಲಯಕ್ಕೆ 2019ರ ಜ.5ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

    ವೈದ್ಯೆಯ ವಾದವೇನು?:
    ಡಾ.ಅನಿತಾ ಪಾಟೀಲ್​ ಪರ ವಕೀಲರು ವಾದ ಮಂಡಿಸಿ, ದೂರುದಾರರು ಆರೋಪಿಸಿರುವಂತೆ ಅರ್ಜಿದಾರರು ಯಾವುದೇ ಶಸ್ತ್ರಚಿಕಿತ್ಸೆ ಮಾಡಿಲ್ಲ. ಪ್ರಕರಣದಲ್ಲಿ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ. ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಜೇಕಬ್​ ಮ್ಯಾಥ್ಯೂ ಮತ್ತು ಪಂಜಾಬ್​ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ರೂಪಿಸಿರುವ ಮಾರ್ಗಸೂಚಿ ಪಾಲನೆಯಾಗಿಲ್ಲ. ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿ ಬಂದಾಗ ಏಕಾಏಕಿ ವೈದ್ಯರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗದು. ಆರೋಪದ ಕುರಿತು ಮತ್ತೊಬ್ಬ ವೈದ್ಯರಿಂದ ಅದರಲ್ಲೂ ಮುಖ್ಯವಾಗಿ ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಂದ ಅಭಿಪ್ರಾಯ ಪಡೆಯಬೇಕು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಈ ಪ್ರಕ್ರಿಯೆ ನಡೆಸದೆ ವೈದ್ಯರ ವಿರುದ್ಧ ಕ್ರಿಮಿನಲ್​ ಕ್ರಮ ಜರುಗಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ತೀರ್ಪು ಪಾಲನೆಯಾಗಿಲ್ಲ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

    ಈ ವಾದವನ್ನು ಅಲ್ಲಗಳೆದಿದ್ದ ಸರ್ಕಾರದ ಪರ ವಕೀಲ ಮಹೇಶ್​ ಶೆಟ್ಟಿ, ಅರ್ಜಿದಾರರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳಿಲ್ಲ. ಬದಲಿಗೆ, ಒತ್ತಾಯಪೂರ್ವಕವಾಗಿ ಲಿಂಗ ಪರಿವರ್ತನೆ ಮಾಡಿರುವ ಗಂಭೀರ ಆರೋಪವಿದೆ. ಆದ್ದರಿಂದ, ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ತೀರ್ಪು ಅನ್ವಯಿಸುವುದಿಲ್ಲ ಎಂದು ಕೋರ್ಟ್​ನ​ ಗಮನಕ್ಕೆ ತಂದಿದ್ದರು.

    ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್​, ಅರ್ಜಿದಾರರು ತಮ್ಮ ವಾದವನ್ನು ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಿ, ಅಲ್ಲಿಯೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸ್ವತಂತ್ರರಿದ್ದಾರೆ ಎಂದು ಸ್ಪಷ್ಟಪಡಿಸಿದೆ.

    ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಗಂಡ… ಚೀರಾಡುತ್ತಾ ಗಂಡನನ್ನೇ ಬಿಗಿದಪ್ಪಿಕೊಂಡ ಪತ್ನಿ! ಮೈಸೂರಲ್ಲಿ ಭೀಕರ ಘಟನೆ

    ರೋಗಿಯ ಜೀವ ಉಳಿಸಲು ಬೆಂಗಳೂರಿನ ಟ್ರಾಫಿಕ್​ನಲ್ಲಿ 3 ಕಿ.ಮೀ. ಓಡಿದ ಡಾಕ್ಟರ್​! ವಿಡಿಯೋ ವೈರಲ್​, ಎಲ್ಲೆಡೆ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts