More

    ಕೋಚಿಮುಲ್ ವಿಭಜನೆಗೆ ಸಚಿವ ಸಂಪುಟ ಅಸ್ತು: ಸಚಿವ ಡಾ.ಸುಧಾಕರ್ ಮೇಲುಗೈ

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ವಿಭಜನೆಗೆ ಪಣತೊಟ್ಟಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಕಡೆಗೂ ಹಠ ಸಾಧಿಸುವಲ್ಲಿ ಸಫಲರಾಗಿದ್ದಾರೆ.

    ಹೈನುಗಾರಿಕೆಯ ಹರಿಕಾರ, ಕೇಂದ್ರ ಮಾಜಿ ಸಚಿವ ದಿ.ಎಂ.ವಿ.ಕೃಷ್ಣಪ್ಪನವರ ಪ್ರಯತ್ನದಿಂದ 1987ರ ಏಪ್ರಿಲ್ 1ರಂದು ಸ್ಥಾಪಿತವಾಗಿದ್ದ ಕೋಚಿಮುಲ್ 34 ವರ್ಷಗಳ ಬಳಿಕ ವಿಭಜನೆಗೆಯಾಗುತ್ತಿದ್ದು, ಜಿಲ್ಲೆಯ ರೈತರ ರಕ್ಷಣೆಗೆ ಜನಪ್ರತಿನಿಧಿಗಳು ಹಾಗೂ ಸಹಕಾರಿಗಳು ಯಾವ ರೀತಿ ಕಾರ್ಯತಂತ್ರಗಳನ್ನು ಹೆಣೆಯುತ್ತಾರೆಂಬುದುದನ್ನು ಕಾದು ನೋಡಬೇಕಿದೆ.

    ಕೋಲಾರ ಜಿಲ್ಲೆಯಲ್ಲಿ 1,47,630 ಮಂದಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹೊಂದಿದ್ದಾರೆ. ಈ ಪೈಕಿ 41182 ಮಂದಿ ಸಕ್ರಿಯವಾಗಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,50,886 ಸದಸ್ಯರಲ್ಲಿ 41,525 ರೈತರು ಸಕ್ರಿಯ ಸದಸ್ಯತ್ವರಾಗಿದ್ದಾರೆ.

    ಕೋಲಾರದಿಂದ ಚಿಕ್ಕಬಳ್ಳಾಪುರ 2008ರಲ್ಲಿ ಪ್ರತ್ಯೇಕವಾದಾಗಿನಿಂದಲೂ ಕೋಚಿಮುಲ್ ವಿಭಜನೆ ಕುರಿತು ಕೆಲವರು ಪ್ರಸ್ತಾಪಿಸಿದ್ದರಾದರೂ ಜನಪ್ರತಿನಿಧಿಗಳು ಮತ್ತು ಒಕ್ಕೂಟದ ನಿರ್ದೇಶಕರು ಅವಕಾಶ ನೀಡಿರಲಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ವಿಭಜನೆಗೆ ಧೈರ್ಯ ತೋರಿರಲಿಲ್ಲ, ಆದರೆ ಡಾ.ಸುಧಾಕರ್ ಸಚಿವರಾದ ಮೇಲೆ ಈ ಜಿಲ್ಲೆಯ ಕೆಲ ಸಹಕಾರಿಗಳು, ರಾಜಕಾರಣಿಗಳ ಒತ್ತಡ ಹಾಗೂ ಸ್ವತಃ ಸಚಿವ ಸುಧಾಕರ್ ವಿಭಜನೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಪರಿಣಾಮ ಸರ್ಕಾರ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಕೋಚಿಮುಲ್ ವಿಭಜನೆಗೆ ಮುನ್ನಡಿ ಬರೆದಿದೆ. ಒಕ್ಕೂಟದ ಆಸ್ತಿ ಹಾಗೂ ಸಾಲದ ಹೊರೆಯನ್ನು ಸಮಾನವಾಗಿ ವಿಭಜಿಸಿ ಮುಂದೆ ಎರಡೂ ಜಿಲ್ಲೆಯ ಒಕ್ಕೂಟ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಪ್ಲಾನ್ ಮಾಡಬೇಕಿದೆ.

    ಸದ್ಯ ಕೋಲಾರ ಜಿಲ್ಲೆಯಲ್ಲಿ 5.11 ಲಕ್ಷ, ಚಿಕ್ಕಬಳ್ಳಾಪುರದಲ್ಲಿ 4.20 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ವಿಭಜನೆಯಿಂದ ಕೋಲಾರ ಒಕ್ಕೂಟಕ್ಕೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವ ಲಕ್ಷಣ ಕಂಡು ಬರದಿದ್ದರೂ ಪೈಪೋಟಿ ದೃಷ್ಟಿಯಿಂದ ಮಾರುಕಟ್ಟೆ ವಿಸ್ತರಣೆ ಹಾಗೂ ಗುಣಮಟ್ಟದ ಹಾಲು ಖರೀದಿಗೆ ಗಮನಹರಿಸದಿದ್ದಲ್ಲಿ ಆದಾಯ ಕುಂಠಿತಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

    ಒಕ್ಕೂಟಕ್ಕೆ ಈಗಾಗಲೇ ಎಲ್ಲ ಮೂಲಸೌಕರ್ಯ ಒದಗಿಸಲಾಗಿದೆ. ಸ್ಯಾಚೆಟ್ ಹಾಲು ಮಾರಾಟಕ್ಕೆ ಬೇಕಾದ ತಾಂತ್ರಿಕ ವ್ಯವಸ್ಥೆಯ ಜತೆಗೆ ಕೆಎಂಎಫ್ ಮಾದರಿಯಲ್ಲಿ ಹಾಲಿನ ಉತ್ಪನ್ನ ತಯಾರಿಸುವಲ್ಲಿ ಒಕ್ಕೂಟ ಗಮನ ಸೆಳೆದಿದೆ. ಒಕ್ಕೂಟ ಇನ್ನಷ್ಟು ಪ್ರಗತಿಯತ್ತ ಮುನ್ನಡೆಯಲು 2018ರಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ವಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ವಿಭಜನೆಯಿಂದ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಅವಕಾಶ ಸಿಗುವುದು ಅನುಮಾನ.

    ಕೋಚಿಮುಲ್ ವಿಭಜನೆಗೆ ಸಚಿವ ಸಂಪುಟ ಅಸ್ತು: ಸಚಿವ ಡಾ.ಸುಧಾಕರ್ ಮೇಲುಗೈ ಕೋಲಾರ ಜಿಲ್ಲೆಯ ನಿರ್ದೇಶಕರು ಹಾಗೂ ಜನಪ್ರತಿನಿಧಿಗಳು, ವಿಭಜನೆ ಮಾಡುವುದಾದರೆ ಒಕ್ಕೂಟಕ್ಕೆ ಆಗುವ ನಷ್ಟಕ್ಕೆ ಯಾರು ಹೊಣೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಗೋಲ್ಡನ್ ಡೇರಿ ನಿರ್ಮಾಣದ ಬಳಿಕ ವಿಭಜನೆ ಮಾಡಿ ಎಂದು ಸಲಹೆ ನೀಡಿದ್ದರು. ಸಚಿವ ಸುಧಾಕರ್ ಒಕ್ಕೂಟ ವಿಭಜನೆ ಮೂಲಕ ಮೇಲುಗೈ ಸಾಧಿಸಬಹುದೆಂಬ ಕಾರಣಕ್ಕೆ ಒತ್ತಡ ಹೇರಿದ್ದರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಹಿತಕ್ಕಾಗಿ 200 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ವಿುಸಲಾಗಿದೆ. 3 ಕಡೆ ಚಿಲ್ಲಿಂಗ್ ಸೆಂಟರ್, ಶಿಡ್ಲಘಟ್ಟದಲ್ಲಿ ಪಶು ಆಹಾರ ಘಟಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಳಿದ್ದಕ್ಕಿಂತ ಹೆಚ್ಚಿನ ಸಹಕಾರ ನೀಡಿದ್ದರೂ ಸಚಿವ ಸುಧಾಕರ್ ರಾಜಕೀಯ ದ್ವೇಷದಿಂದ ಕೋಚಿಮುಲ್ ವಿಭಜನೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ತಾರತಮ್ಯ ಆಗಬಹುದೆಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ತಂಡ ವಿಭಜನೆಗೆ ಒಪ್ಪದಂತೆ ಕೋರಿದ್ದರಾದರೂ ಸಫಲವಾಗಿಲ್ಲ.

    ಕೋಚಿಮುಲ್​ನಲ್ಲಿ ವಿವಿಧ ವಿಭಾಗಗಳಲ್ಲಿ 360 ಜನ ಕಾರ್ಯನಿರ್ವಹಿಸುತ್ತಿದ್ದು, ವಿಭಜನೆಯಿಂದ 180 ಜನ ಕೋಲಾರ ಒಕ್ಕೂಟದಲ್ಲಿ ಉಳಿಯಲಿದ್ದಾರೆ. ಇನ್ನುಳಿದವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಅಥವಾ ನಿಯೋಜನೆ ಮಾಡಬಹುದು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 1200 ನೌಕರರ ಪೈಕಿ ಅರ್ಧದಷ್ಟು ಜನರಿಗೆ ಸೇವಾ ಭದ್ರತೆ ಕಲ್ಪಿಸುವುದು ಆಡಳಿತ ಮಂಡಳಿಗೆ ತಲೆನೋವಾಗಬಹುದು.

    ಡಿಸಿಸಿ ಬ್ಯಾಂಕ್ ಮೇಲೂ ಕಣ್ಣು: ಕೋಚಿಮುಲ್ ವಿಭಜನೆ ಪ್ರಯತ್ನದಲ್ಲಿ ವಿರೋಧಿಗಳ ಲೆಕ್ಕಾಚಾರ ತಲೆಕೆಳಕಾಗಿಸಿರುವ ಸುಧಾಕರ್, ಡಿಸಿಸಿ ಬ್ಯಾಂಕ್ ವಿಭಜನೆಗೂ ಕೈಹಾಕುವ ಸಾಧ್ಯತೆ ಇದೆ. ಈಗಾಗಲೆ ಡಿಸಿಸಿ ಬ್ಯಾಂಕಿನ ವಿಚಾರದಲ್ಲಿ ಸದ್ದು ಮಾಡಲಾರಂಭಿಸಿರುವ ಸುಧಾಕರ್, ಸಿಎಂ ಮನವೊಲಿಸಲು ಯಾವ ಅಸ್ತ್ರ ಪ್ರಯೋಗ ಮಾಡುವರೋ ನೋಡಬೇಕಿದೆ.

    ಕೋಚಿಮುಲ್ ವಿಭಜನೆ ಮಾಡುವುದಿಲ್ಲ ಎಂದು ಸಿಎಂ ವಾಗ್ದಾನ ನೀಡಿದ್ದರು. ತನ್ನ ಜಿಲ್ಲೆ ಹಾವೇರಿಯಲ್ಲೇ ಹಾಲು ಒಕ್ಕೂಟ ವಿಭಜನೆಗೆ ಅವಕಾಶ ನೀಡಿಲ್ಲ ಎಂದು ಭರವಸೆಯ ಮಾತು ಆಡಿದ್ದರು. ಅಧಿಕಾರ ಅವರ ಕೈಯಲ್ಲಿ ಇದೆ, ತಮಗಿಷ್ಟ ಬಂದಂತೆ ತೀರ್ಮಾನ ಕೈಗೊಂಡಿದ್ದಾರೆ. ಕೋಚಿಮುಲ್ ವಿಭಜನೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ಮುಂದೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಮುಂದಿನ ಹೋರಾಟ ತಿಳಿಸುತ್ತೇನೆ. ರಾಜಕೀಯ ಕಾರಣಗಳಿಗಾಗಿ ನನ್ನ ನಾಲಿಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ, ಜಿಲ್ಲೆಯ ಹಾಲು ಉತ್ಪಾದಕರ ಹಿತ ಕಾಪಾಡಲು ಸದಾ ಸಿದ್ಧ.
    | ಕೆ.ಆರ್.ರಮೇಶ್ ಕುಮಾರ್ ಶಾಸಕ, ಶ್ರೀನಿವಾಸಪುರ

    ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಭಜನೆಗೆ ಆತುರ ಬೇಡವೆಂದು ಮನವಿ ಮಾಡಿದ್ದೆವು. ಆದರೆ ಯಾವ ಒತ್ತಡಕ್ಕೆ ಮಣಿದರೋ ಗೊತ್ತಿಲ್ಲ. ಪೂರ್ಣ ವಿವರ ತರಿಸಿಕೊಂಡ ಬಳಿಕ ಜಿಲ್ಲೆಗೆ ಅನ್ಯಾಯವಾಗಿದ್ದರೆ ಹೋರಾಟ ಮಾಡುತ್ತೇವೆ. ಒಕ್ಕೂಟ ವಿಭಜನೆಗೆ ವಿರೋಧವಿಲ್ಲ, ಚಿಕ್ಕಬಳ್ಳಾಪುರದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ವಿುಸಲಾಗಿದೆ, ಕೋಲಾರದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ವಿುಸಲು ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾತಿ ಸಿಕ್ಕಿದೆ, ಬಿಜೆಪಿ ಸರ್ಕಾರ ಬಂದ ಮೇಲೆ ಯೋಜನೆಗೆ ತಡೆಯಾಜ್ಞೆ ನೀಡಲಾಗಿದೆ. ಜಿಲ್ಲೆಯ ಶಾಸಕರು ಸಭೆ ಸೇರಿ ಮುಂದಿನ ತೀರ್ಮಾನದ ಬಗ್ಗೆ ರ್ಚಚಿಸುತ್ತೇವೆ.
    | ಕೆ.ವೈ.ನಂಜೇಗೌಡ ಶಾಸಕ, ಕೋಚಿಮುಲ್ ಅಧ್ಯಕ್ಷ, ಕೋಲಾರ

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts