ತಮಿಳುನಾಡು: ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಆಟ ಆಡುತ್ತಲೇ ಹೃದಯಾಘಾತದಿಂದ ಆಟಗಾರನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಸಾವಿನ ಕೊನೇ ಕ್ಷಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆಟಗಾರರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಕಡಲೂರು ಜಿಲ್ಲೆಯ ಪಂರುತಿ ಸಮೀಪದ ಕಾಟಂಪಲಿಯೂರಿನ ಪೆರಿಯಪುರಾಂಗಣಿ ನಿವಾಸಿ ವಿಮಲರಾಜ್ ಮೃತ ಆಟಗಾರ. ತಮಿಳುನಾಡಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಪರುಂತಿ ಸಮೀಪದ ಮಂಡಿಕುಪ್ಪಂನಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ವಿಮಲರಾಜ್ಗೆ ಕಬ್ಬಡಿ ಆಟವೆಂದರೆ ಪಂಚಪ್ರಾಣ. ಚಿಕ್ಕಂದಿನಿಂದಲೂ ಕಬ್ಬಡಿ ಆಟದತ್ತ ಆಸಕ್ತಿ ಬೆಳೆಸಿಕೊಂಡಿದ್ದ ವಿಮಲರಾಜ್, ಆಟ ಆಡುತ್ತಲೇ ಕಬ್ಬಡಿ ಕೋರ್ಟ್ನಲ್ಲೇ ಪ್ರಾಣ ಬಿಟ್ಟಿದ್ದಾರೆ.
ಎದುರಾಳಿ ಆಟಗಾರನೊಬ್ಬ ವಿಮಲರಾಜ್ರನ್ನು ಹಿಡಿದಿಟ್ಟುಕೊಳ್ಳುವ ವೇಳೆ ಎದೆ ಭಾಗದ ಮೇಲೆ ಬಿದ್ದಿದ್ದ. ಈ ವೇಳೆ ಕೆಳಗೆ ಬಿದ್ದ ವಿಮಲರಾಜ್, ಮೇಲೇಳಲು ಯತ್ನಿಸಿದ್ದರಾದರೂ ಕ್ಷಣ ಮಾತ್ರದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಏನಾಗಿದೆ ಎಂದು ಅರಿಯದ ಸಹ ಆಟಗಾರರು ಕೂಡಲೇ ವಿಮಲರಾಜ್ರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರಾದರೂ ಪ್ರಾಣ ಹೋಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಮಲರಾಜ್ರ ಅಂತ್ಯಕ್ರಿಯೆ ವೇಳೆ ಮೃತದೇಹದ ಪಕ್ಕ ಟ್ರೋಫಿಯನ್ನ ಇಟ್ಟು ಸ್ನೇಹಿತರು ಕಂಬನಿ ಮಿಡಿದ ದೃಶ್ಯ ಮನಕಲಕುವಂತಿತ್ತು. ಪ್ರತಿಭಾವಂತ ಯುವಕನ ಪ್ರಾಣ ಹೊತ್ತೊಯ್ದ ವಿಧಿಯನ್ನೊಮ್ಮೆ ಮನದಲ್ಲೇ ಶಪಿಸುತ್ತಿದ್ದ ದೃಶ್ಯ ಕಂಡು ಬಂತು.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ