More

    ಅಂತ್ಯಸಂಸ್ಕಾರ ಸಹಾಯನಿಧಿಗೂ ಕೊಕ್ಕೆ; ಸಕಾಲಕ್ಕೆ ನೆರವು ಸಿಗದೆ ಬಡವರ ಪರದಾಟ

    | ಹರಿಪ್ರಸಾದ್ ನಂದಳಿಕೆ ಕಾರ್ಕಳ 
    ಬಡ ಕುಟುಂಬದ ಸದಸ್ಯ ಮರಣ ಹೊಂದಿದ ವೇಳೆ ಅಂತ್ಯಸಂಸ್ಕಾರ ನಡೆಸಲು ಸರ್ಕಾರದಿಂದ ಲಭಿಸುತ್ತಿದ್ದ 5 ಸಾವಿರ ರೂ. ಸಹಾಯನಿಧಿ ಸ್ಥಗಿತವಾಗಿದ್ದು, ದುಃಖದ ಕಾಲದ ಸಾಂತ್ವನ ಮೊತ್ತವೂ ಈಗ ಕೈ ಸೇರುತ್ತಿಲ್ಲ!

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದರೆ, ಕಷ್ಟ ಕಾಲದಲ್ಲಿ ನೆರವಾಗುತ್ತಿದ್ದ ಅಂತ್ಯಸಂಸ್ಕಾರ ಸಹಾಯನಿಧಿ ಸ್ಥಗಿತಗೊಂಡಿದ್ದು, ಬಡ ಕುಟುಂಬಗಳು ಪರದಾಡುವಂತಾಗಿದೆ. 2006ರಲ್ಲಿ ಆರಂಭವಾದ ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯರು ಮೃತಪಟ್ಟಾಗ ವಾರಸುದಾರರು ಅಥವಾ ಅಂತಿಮ ಕ್ರಿಯೆ ನೆರವೇರಿಸುವ ಜವಾಬ್ದಾರಿ ಹೊಂದಿರುವ ಸದಸ್ಯರಿಗೆ ಸಹಾಯಧನ ನೀಡಲಾಗುತ್ತಿತ್ತು. ಆರಂಭದಲ್ಲಿ ನೀಡುತ್ತಿದ್ದ 1 ಸಾವಿರ ರೂ.ಗಳನ್ನು 2015 ಏಪ್ರಿಲ್​ನಿಂದ ಪೂರ್ವಾನ್ವಯವಾಗುವಂತೆ 5 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ನಿಗದಿತ ಸಮಯಕ್ಕೆ ಫಲಾನುಭವಿಗಳ ಕೈಗೆ ಹಣ ಸೇರದೇ ಇದ್ದರೂ ಬಡಜನರಿಗೆ ಐದು ಸಾವಿರ ದೊಡ್ಡ ಮೊತ್ತವೇ ಆಗಿತ್ತು.

    ಬಿಜೆಪಿ ನೇತೃತ್ವದ ಸರ್ಕಾರ 2021-22ನೇ ಸಾಲಿನಲ್ಲಿ ಆಗಸ್ಟ್ 2021ರ ಅಂತ್ಯಕ್ಕೆ ಜಿಲ್ಲೆಗಳಿಂದ ಸ್ವೀಕೃತವಾಗಿರುವ ಅರ್ಜಿಗಳಿಗೆ ಮಾತ್ರ ಸಹಾಯಧನ ವಿತರಿಸಲು 17.92 ಕೋಟಿ ರೂ. ಬಿಡುಗಡೆ ಮಾಡಿತ್ತು. ಆ ಬಳಿಕ ಯೋಜನೆ ಸ್ಥಗಿತವಾಗಿದೆ. ತೀರಾ ಗ್ರಾಮೀಣ ಭಾಗದಲ್ಲಿ ಬಡವರ್ಗದ ಕುಟುಂಬಗಳು ಶವಸಂಸ್ಕಾರ, ನಂತರದ ತಿಥಿ ಕಾರ್ಯಗಳಿಗೆ ಸಾಲಗಾರರರಿಗೆ ಕೈಯೊಡ್ಡುವ ಅಸಹಾಯಕತೆ ಈಗಲೂ ರಾಜ್ಯದ ಹಲವು ಭಾಗಗಳಲ್ಲಿದೆ.

    ನಿಲ್ಲದ ಅರ್ಜಿ ಸಲ್ಲಿಕೆ: ಯೋಜನೆಯ ಹಣ ಸ್ಥಗಿತಗೊಂಡಿದ್ದರೂ ಬಡವರು ಮಾತ್ರ ಕಚೇರಿ ಬಾಗಿಲು ಬಡಿಯುವುದು ಇನ್ನೂ ನಿಂತಿಲ್ಲ. ಅಂತ್ಯಸಂಸ್ಕಾರ ನೆರವಿಗೆ ಸ್ಥಳೀಯ ಕಂದಾಯ ಕಚೇರಿ ಅಧಿಕಾರಿಗಳಿಂದ ಬರೆಸಿಕೊಂಡು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಅದು ತಹಸೀಲ್ದಾರ್​ರಿಂದ ಮಂಜೂರುಗೊಂಡು ಫಲಾನುಭವಿ ಖಾತೆಗೆ ಸಂದಾಯವಾಗುತ್ತದೆ. ಆದರೆ ಕಳೆದೊಂದು ವರ್ಷದಿಂದ ಸಹಾಯಧನ ಮಂಜೂರಾಗದೆ ಇರುವುದರಿಂದ ಅರ್ಜಿ, ಪ್ರಸ್ತಾವನೆಗಳನ್ನು ಕೆಲವೆಡೆ ಅಧಿಕಾರಿಗಳು ಸ್ವೀಕರಿಸುವುದನ್ನೇ ಸ್ಥಗಿತಗೊಳಿಸಿದ್ದಾರೆ. ಇನ್ನೂ ಹಲವೆಡೆ ಕಂದಾಯ ಅಧಿಕಾರಿಗಳು ಅರ್ಜಿದಾರರನ್ನು ವಾಪಸ್ ಕಳುಹಿಸಲು ಮನಸ್ಸಿಲ್ಲದೆ ‘ಅರ್ಜಿ ಸಲ್ಲಿಸಿ. ಹಣ ಸರ್ಕಾರದಿಂದ ಬಿಡುಗಡೆಗೊಂಡು ಬಂದರೂ ಬಂದೀತು’ ಎನ್ನುತ್ತಿದ್ದಾರೆ.

    ಹಿಂದೆ ಯಾವ ಇಲಾಖೆಯಡಿ ಸಹಾಯಧನ ನೀಡಲಾಗುತ್ತಿತ್ತು ಎಂಬ ಮಾಹಿತಿ ಪಡೆಯುತ್ತೇವೆ. ಯಾಕೆ ಸ್ಥಗಿತವಾಯಿತು ಎನ್ನುವುದನ್ನು ಪರಿಶೀಲಿಸಿ, ಕಾರಣಗಳನ್ನು ಕಂಡುಕೊಂಡು ಸರ್ಕಾರದ ಗಮನಕ್ಕೆ ತರುತ್ತೇವೆ.

    | ಡಾ.ರಶ್ಮಿ ವಿ.ಮಹೇಶ್ ಕಾರ್ಯದರ್ಶಿ, (ವಿಪತ್ತು ನಿರ್ವಹಣೆ ನೋಂದಣಿ ಮತ್ತು ಮುದ್ರಾಂಕ) ಕಂದಾಯ ಇಲಾಖೆ

     

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts