More

    ಕಾಲೆಳೆಯುವ ಜನರಿಂದ ಅಭಿವೃದ್ಧಿಗೆ ಹಿನ್ನೆಡೆ

    ಗೋಕರ್ಣ: ಒಂದು ಊರು ಅಥವಾ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಒಮ್ಮನಸ್ಸಿನಿಂದ ಸಹಕಾರ ಕೊಡುವಂತಾಗಬೇಕು. ಕಾಲೆಳೆಯುವ ಜನರಿಂದ ಯಾವ ಕೆಲಸವೂ ಆಗದೆ ಅಭಿವೃದ್ಧಿಗೆ ತೀವ್ರವಾದ ಹಿನ್ನೆಡೆ ಉಂಟಾಗುತ್ತದೆ. ಇದಕ್ಕೆ ಉತ್ತರ ಕನ್ನಡ ಉತ್ತಮ ಉದಾಹರಣೆಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

    ಸ್ಥಳೀಯ ಪಂಚಾಯಿತಿಯಲ್ಲಿ ಹೊಸದಾಗಿ ನಿರ್ವಿುಸಲಾದ ಸಭಾಂಗಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕೇವಲ ರಸ್ತೆ ಅಥವಾ ರಸ್ತೆ ದೀಪ ಏರ್ಪಾಟಿನಿಂದ ಮಾತ್ರ ಊರು ಅಭಿವೃದ್ಧಿ ಆದಂತಲ್ಲ. ಇದಕ್ಕೆ ಪ್ರವಾಸಿ ತಾಣ ಗೋಕರ್ಣ ಸಾಕ್ಷಿ. ಇಲ್ಲಿಗೆ ಬರುವ ಯಾತ್ರಿಕರು ಮತ್ತು ಪ್ರವಾಸಿಗರ ಸಂಖ್ಯೆ ನೋಡಿದಾಗ ಅವರಿಗೆ ತಕ್ಕುದಾಗಿ ಗೋಕರ್ಣ ಅಭಿವೃದ್ಧಿಯಾಗಿಲ್ಲ ಎನ್ನುವುದು ಬೇಸರದ ಸಂಗತಿ. ಸಾರ್ವಜನಿಕ ಸೌಲಭ್ಯಗಳ ದೃಷ್ಟಿಯಿಂದ ಇಲ್ಲಿ ಮೂಲಭೂತವಾಗಿ ಆಗಲೇಬೇಕಾದ ಹಲವಾರು ಕೆಲಸಗಳು ಇನ್ನೂ ಬಾಕಿ ಇವೆ. ವರ್ಷಂಪ್ರತಿ ಲಕ್ಷಾಂತರ ಜನರು ಭೇಟಿ ಕೊಡುವ ಗೋಕರ್ಣದಲ್ಲಿ ಸ್ವಚ್ಛತೆ ಕಾಪಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವರೆಗೆ ಇಲ್ಲಿನ ಗ್ರಾಪಂ ಈ ಬಗ್ಗೆ ತನ್ನದೇ ಆದ ಪ್ರಯತ್ನ ಮಾಡಿದೆ ಎಂದರು.

    ಜಿಲ್ಲೆಯಲ್ಲಿ ಮೊದಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಿುಸಿದ ಹೆಮ್ಮೆ ಗೋಕರ್ಣದ್ದಾಗಿದೆ. ನಮ್ಮ ಕ್ಷೇತ್ರದಲ್ಲಿ ಯಾವುದೇ ಗ್ರಾಪಂ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪ್ರಯತ್ನ ನಡೆಸಿದಾಗ ನಾನು ಗೋಕರ್ಣವನ್ನು ಮಾದರಿಯಾಗಿ ನೀಡಿ ಅದನ್ನು ಅನುಸರಿಸಲು ಸೂಚಿಸುತ್ತಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಸ್ವಚ್ಛತೆ ನಿರ್ವಹಣೆಯಲ್ಲಿ ಆರಂಭದ ವೇಗ ಮತ್ತು ಕಾರ್ಯಕ್ಷಮತೆ ಕ್ಷೀಣಿಸುತ್ತಿರುವ ಆತಂಕ ಕಾಣುತ್ತಿದೆ. ಕಾರಣ ಕೇವಲ ಪಂಚಾಯಿತಿ ಸದಸ್ಯರು ಮಾತ್ರವಲ್ಲದೆ, ಇಲ್ಲಿನ ಸಮಸ್ತರು ಏಕ ಮನಸ್ಸಿನಿಂದ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಡುವಂತಾಗಬೇಕು. ಇದರಿಂದ ಮಾತ್ರ ಈ ಪುರಾತನ ಪುಣ್ಯ ಕ್ಷೇತ್ರವನ್ನು ಒಂದು ಮಾದರಿ ಯಾತ್ರಾ ಮತ್ತು ಪ್ರವಾಸಿ ಕೇಂದ್ರವಾಗಿ ಉತ್ತಮಗೊಳಿಸಲು ಸಾಧ್ಯ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು ಮಾತನಾಡಿ, ಪಂಚಾಯಿತಿಯಿಂದ ಕೋಟ್ಯಂತರ ರೂ. ಜಿಲ್ಲಾ ಪಂಚಾಯಿತಿ ಸಹಾಯದಲ್ಲಿ ನಿರ್ವಣವಾಗುತ್ತಿರುವ ಎರಡು ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಈ ವರೆಗೆ ನಡೆದ ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದರು.

    ಉಪಾಧ್ಯಕ್ಷೆ ಶಾರದಾ ಮೂಡಂಗಿ, ಪೊಲೀಸ್ ಇನ್​ಸ್ಪೆಕ್ಟರ್ ವಸಂತ ಆಚಾರ್ಯ ಇದ್ದರು. ಪಂಚಾಯಿತಿ ಕಾರ್ಯದರ್ಶಿ ವಿನಾಯಕ ಸಿದ್ದಾಪುರ, ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. ಪಂಚಾಯಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts