More

    ವಿಕೃತಕಾಮಿ ಉಮೇಶ್​ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: 22 ವರ್ಷ ಹಿಂದಿನ ಕೇಸ್​ ಹಿಸ್ಟರಿ ಇಲ್ಲಿದೆ

    ಬೆಂಗಳೂರು: ಸರಣಿ ಹಂತಕ, ಅತ್ಯಾಚಾರಿ, ವಿಕೃತಕಾಮಿ ಉಮೇಶ್​ ರೆಡ್ಡಿ ಅಲಿಯಾಸ್ ಬಿ.ಎ. ಉಮೇಶಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಹೈಕೋರ್ಟ್​ ಮಹತ್ವದ ಆದೇಶ ಪ್ರಕಟಿಸಿದೆ. ಉಮೇಶ್ ರೆಡ್ಡಿ ಪರ ವಕೀಲ ಬಿ.ಎನ್ ಜಗದೀಶ್, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡಿದ ಹೈಕೋರ್ಟ್, ಅಲ್ಲಿಯವರೆಗೆ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಪ್ರಸ್ತುತ ಅಪರಾಧಿ ಉಮೇಶ್ ರೆಡ್ಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

    ಪ್ರಕರಣವೇನು?: ಬೆಂಗಳೂರಿ‌ನ ಪೀಣ್ಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಿಧವೆಯೊಬ್ಬರ ಮೇಲೆ 1998ರಲ್ಲಿ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ನಗರದ ಸೆಷನ್ಸ್ ಕೋರ್ಟ್ 2006 ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಮರಣದಂಡನೆ ಖಾಯಂಗೊಳಿಸಿತ್ತು. ಇದನ್ನು ಪ್ರಶ್ನಿಸಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು 2011ರಲ್ಲಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳೂ ಉಮೇಶ್ ರೆಡ್ಡಿ ಹಾಗೂ ಆತನ ತಾಯಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳನ್ನು ವಜಾಗೊಳಿಸಿದ್ದರು. ಅದಾದ ಬಳಿಕ, ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದನಾದರೂ ಅದೂ ಸಹ ವಜಾಗೊಂಡಿತ್ತು.

    ಇನ್ನೇನು ನೇಣು ಕುಣಿಕೆಗೆ ತಲೆ ಒಡ್ಡುವುದು ಅನಿವಾರ್ಯ ಎಂದುಕೊಳ್ಳುತ್ತಿರುವಾಗಲೇ ಅಂತಿಮ ಪ್ರಯತ್ನವಾಗಿ ಉಮೇಶ್ ರೆಡ್ಡಿ, ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬ ಮಾಡಿದ್ದ ರಾಷ್ಟ್ರಪತಿಗಳ ಕ್ರಮ ಪ್ರಶ್ನಿಸಿ 2016ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅದೇ ವರ್ಷ ಅ.20ರಂದು ಹೈಕೋರ್ಟ್ ವಿಭಾಗೀಯ ಪೀಠ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಜಾರಿ ಮಾಡುವುದಕ್ಕೆ ತಡೆ ನೀಡಿತ್ತು.

    ಉಮೇಶ್ ರೆಡ್ಡಿ ಪರ ವಕೀಲರು ವಾದ: ಇದಕ್ಕೂ ಮುನ್ನ ಉಮೇಶ್ ರೆಡ್ಡಿ ಪರ ವಕೀಲರು ವಾದ ಮಂಡಿಸಿ, ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಅರ್ಜಿದಾರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆದ್ದರಿಂದ, ಆತನ ತಾಯಿ ಕ್ಷಮಾದಾನ ನೀಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಇತ್ಯರ್ಥಪಡಿಸಲು ಎರಡು ವರ್ಷ ಮೂರು ತಿಂಗಳು ವಿಳಂಬ ಮಾಡಿರುವ ರಾಷ್ಟ್ರಪತಿಗಳು, ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದಕ್ಕೆ ಸಕಾರಣ ನೀಡಿಲ್ಲ ಹಾಗೂ ಅರ್ಜಿದಾರನ ಮಾನಸಿಕ ಸ್ಥಿತಿಗತಿಯನ್ನೇ ಪರಿಶೀಲಿಸಿಲ್ಲ. ಇದು ಗಲ್ಲು ಶಿಕ್ಷೆ ಜಾರಿಗೆ ಇರುವ ತಾಂತ್ರಿಕ ಅಡ್ಡಿ ಹಾಗೂ ಸಂವಿಧಾನದ ಪರಿಚ್ಛೇಧನ 21ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಅಲ್ಲದೆ, 10 ವರ್ಷ ಏಕಾಂತ ಸೆರೆಮನೆವಾಸ ಅನುಭವಿಸಿರುವ ಉಮೇಶ್ ರೆಡ್ಡಿ, ಮಾನಸಿಕ ಖಿನ್ನತೆಗೊಳಗಾಗಿದ್ದು, ಈಗಾಗಲೇ ಆತ ಸಾವಿಗೆ ಸಮನಾದ ಶಿಕ್ಷೆ ಪಡೆದಿದ್ದಾನೆ. ಆದ್ದರಿಂದ, ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಹಾಗೂ ಈ ಅರ್ಜಿ ಇತ್ಯರ್ಥದವರೆಗೆ ಗಲ್ಲುಶಿಕ್ಷೆ ಜಾರಿ ತಡೆಹಿಡಿಯುವಂತೆ ಕೋರಿದ್ದರು.

    ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ನಿಯಮದ ಪ್ರಕಾರವೇ ರಾಷ್ಟ್ರಪತಿಗಳು ಕ್ಷಮಾದಾನದ ಅರ್ಜಿ ಇತ್ಯರ್ಥಪಡಿಸಿದ್ದು, ಅರ್ಜಿ ತಿರಸ್ಕಾರಕ್ಕೆ ಕಾರಣಗಳನ್ನೂ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

    2006ರಲ್ಲಿ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಪೀಠ ಇಂದು (ಸೆ.29) ಪ್ರಕಟಿಸಿದ್ದು, ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ಇತ್ಯರ್ಥಪಡಿಸಲು ವಿಳಂಬ ಮಾಡಿಲ್ಲ. ಆದ್ದರಿಂದ, ಅರ್ಜಿದಾರನ ಮನವಿಯನ್ನು ಪರಿಗಣಿಸಲಾಗದು ಎಂದು ತಿಳಿಸಿ, ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.

    ಉಮೇಶ್ ರೆಡ್ಡಿ ಪರ ವಕೀಲ ಬಿ.ಎನ್ ಜಗದೀಶ್, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ಮೇಲ್ಮನವಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡಿದ ಹೈಕೋರ್ಟ್, ಅಲ್ಲಿಯವರೆಗೆ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿತು.

    ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು

    ರಾಯಚೂರಲ್ಲಿ ನವವಿವಾಹಿತೆ ಸೇರಿ ಮೂವರ ಕೊಲೆ! ನಿನ್ನೆ ರಾತ್ರಿ ಮನೆಗೆ ಬಂದ ಆತನಿಂದಲೇ ನಡೆಯಿತು ಘೋರ ಕೃತ್ಯ

    ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts