More

    ಬಂಗಾಳದಲ್ಲಿ ವಿಜಯವಾಣಿ: ಮಮತಾಗೆ ಮುಸ್ಲಿಂ ಮತಬ್ಯಾಂಕ್ ವಿಭಜನೆಯ ಭೀತಿ!

    • ರಾಘವ ಶರ್ಮ ನಿಡ್ಲೆ, ಕೊಲ್ಕತ್ತ (ಪಶ್ಚಿಮ ಬಂಗಾಳ)

    ಪಶ್ಚಿಮ ಬಂಗಾಳದಲ್ಲಿ ಸದ್ಯ ಶೇಕಡ 32-33ರಷ್ಟು ಮುಸ್ಲಿಂ ಜನಸಂಖ್ಯೆಯಿದೆ. ರಾಜ್ಯದ 2011 ಮತ್ತು 2016ರ ವಿಧಾನಸಭೆ ಚುನಾವಣೆಗಳಲ್ಲಿ ಈ ವರ್ಗದ ಬಹುಪಾಲು ಮತಗಳು ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಬಿದ್ದ ಪರಿಣಾಮ ಮಮತಾ ಬ್ಯಾನರ್ಜಿಗೆ ಅಧಿಕಾರದ ಹಾದಿ ಸುಗಮಗೊಂಡಿತ್ತು. ಆದರೆ, ಈ ಬಾರಿ ಅಬ್ಬಾಸ್ ಸಿದ್ಧಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್​ಎಫ್) ಕದನ ಕಣಕ್ಕೆ ಧುಮುಕಿರುವುದರಿಂದ ಮುಸ್ಲಿಂ ಮತಗಳು ವಿಭಜನೆಗೊಳ್ಳುವ ಭೀತಿ ಮಮತಾ ಕ್ಯಾಂಪ್​ನಲ್ಲಿ ಕಂಡುಬಂದಿದೆ. ಹೀಗಾಗಿಯೇ, ಮುಸ್ಲಿಮರೆಲ್ಲರೂ ಒಗ್ಗೂಡಿ ತನಗೇ ಮತ ನೀಡಬೇಕು ಎಂದು ಮಮತಾ ಬಹಿರಂಗ ಕರೆ ಕೊಟ್ಟರು. ಇದು ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿ, ಒಂದು ದಿನ ಪ್ರಚಾರದಿಂದ ದೂರವಿರಬೇಕೆಂಬ ನಿಷೇಧವನ್ನೂ ಹೇರಲಾಯಿತು.

    1977ರಿಂದ 34 ವರ್ಷಗಳ ಕಾಲ ನಿರಂತರವಾಗಿ ಮುಸ್ಲಿಮರು ಕಮ್ಯುನಿಸ್ಟ್ ಪಕ್ಷಗಳ ಕಡೆ ತೋರಿದ್ದ ರಾಜಕೀಯ ನಿಷ್ಠೆ 2011ರಲ್ಲಿ ‘ದೀದಿ’ ಕಡೆ ತಿರುಗಿತ್ತು. 10 ವರ್ಷಗಳಿಂದ ಅವರ ಬೆನ್ನಿಗಿದ್ದ ಈ ಸುರಕ್ಷಿತ ಮತಬ್ಯಾಂಕ್​ನಲ್ಲಿ ಮೊದಲ ಬಾರಿಗೆ ಬಿರುಕು ಕಾಣಿಸಿಕೊಂಡಿದೆ. ಕೆಲ ಮುಸ್ಲಿಮರು ಸಿದ್ಧಿಕಿಯನ್ನೂ ನೆಚ್ಚಿಕೊಂಡಿರುವುದು ಇದಕ್ಕೆ ಕಾರಣ.

    ಬಂಗಾಳದ ಮುಸ್ಲಿಮರಿಗೆ ಈಗ ಭಾಯ್ಜಾನ್ ಎಂದರೆ ಧರ್ಮಗುರು ಅಬ್ಬಾಸ್ ಸಿದ್ಧಿಕಿ. ಅಮ್ಡಂಗ ಕ್ಷೇತ್ರದ ಟಿಎಂಸಿ ಶಾಸಕ ರಫಿಕುರ್ ರೆಹಮಾನ್​ಗೆ ಮಹಾಜೋತ್​ನ (ಮಹಾಮೈತ್ರಿ) ಐಎಸ್​ಎಫ್ ಅಭ್ಯರ್ಥಿ ಜಮಾಲುದ್ದೀನ್ ಸವಾಲೊಡ್ಡಿದ್ದು, ಮುಸ್ಲಿಂ ಮತಗಳ ವಿಭಜನೆ ಚಿಂತೆಗೀಡುಮಾಡಿದೆ. ಶೇ.52ರಷ್ಟಿರುವ ಹಿಂದೂ ಮತಗಳನ್ನು ನಂಬಿಕೊಂಡಿರುವ ಬಿಜೆಪಿ ಅಭ್ಯರ್ಥಿ ಜೈದೀಪ್, ಮುಸ್ಲಿಮರ ಮತ ವಿಭಜನೆ ತನಗೆ ಲಾಭ ತರಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈ ವಿಭಜನೆಯ ಲಾಭವಾಗುವುದು ಟಿಎಂಸಿ ಮತ್ತು ಮಹಾಮೈತ್ರಿಯ ಹಿಂದೂ ಮತಗಳು ಸಂಪೂರ್ಣವಾಗಿ ಬಿಜೆಪಿ ಕಡೆ ವಾಲಿದರೆ ಮಾತ್ರ.

    ನಂದಿಗ್ರಾಮ ಮತ್ತು ಸಿಂಗೂರು ಜಮೀನು ಸ್ವಾಧೀನ ವಿರೋಧಿ ಸಂಘರ್ಷದ ವೇಳೆ ಭೂಮಿಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಗ್ರಾಮೀಣ ಭಾಗದ ಮುಸ್ಲಿಮರಿಗೆ ಮಮತಾ ಬ್ಯಾನರ್ಜಿ ಭರವಸೆಯ ಆಶಾಕಿರಣವಾಗಿ ಕಂಡುಬಂದಿದ್ದರು. ‘ಆದರೆ, ಕಳೆದ 10 ವರ್ಷಗಳಲ್ಲಿ ಗ್ರಾಮೀಣ ಭಾಗದ ಮುಸ್ಲಿಮರ ಜೀವನದಲ್ಲಿ ಏನು ಬದಲಾವಣೆಯಾಗಿದೆ? ಸ್ಥಳೀಯ ಟಿಎಂಸಿ ನಾಯಕರ ಭ್ರಷ್ಟಾಚಾರ ಜನರನ್ನು ಕಂಗೆಡಿಸಿದೆ. ಆರ್ಥಿಕ ಏಳಿಗೆ ಸಾಧ್ಯವಾಗದೆ ಹತಾಶರಾಗಿದ್ದಾರೆ. ಹಾಗಂತ ಅವರೆಲ್ಲರು ಬಿಜೆಪಿ ಬೆಂಬಲಿಸುತ್ತಾರೆಂದೇನಲ್ಲ. ಟಿಎಂಸಿ ಅಥವಾ ಮಹಾಮೈತ್ರಿ ಮಧ್ಯೆ ಮತ ವಿಭಜನೆಯಾಗಬಹುದು’ ಎನ್ನುತ್ತಾರೆ ಉತ್ತರ 24 ಪರಗಣ ಜಿಲ್ಲೆಯ ನಿವಾಸಿ ಕಬಿರುರ್ ರೆಹಮಾನ್.

    2016ರ ಚುನಾವಣೆಯಲ್ಲಿ ಟಿಎಂಸಿ 211 ಸೀಟುಗಳನ್ನು ಗೆದ್ದಿತ್ತು. ಇದರಲ್ಲಿ 98 ಸೀಟುಗಳನ್ನು ಮುಸ್ಲಿಂ ಮತಗಳ ವ್ಯಾಪಕ ಬೆಂಬಲದಿಂದಲೇ ತನ್ನದಾಗಿಸಿಕೊಂಡಿತ್ತು ಎನ್ನುವುದು ಗಮನಾರ್ಹ ಅಂಶ. 2019ರ ಲೋಕಸಭೆ ಚುನಾವಣೆಯಲ್ಲಿ ಶೇ.65ರಷ್ಟು ಮುಸ್ಲಿಂ ಮತಗಳು ಟಿಎಂಸಿಯನ್ನು ಆಯ್ಕೆ ಮಾಡಿದ್ದವು. ಮೋದಿಗೆ ಸವಾಲೊಡ್ಡಲು ದೀದಿಯೇ ಸೂಕ್ತ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿತ್ತು.

    ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್.ಆರ್.ಸಿ.) ಮತ್ತು ಪೌರತ್ವ ತಿದ್ದುಪಡಿ ಕಾನೂನು ಎರಡನ್ನೂ ಖಂಡತುಂಡವಾಗಿ ವಿರೋಧಿಸುತ್ತಿರುವ ಬಂಗಾಳಿ ಮುಸ್ಲಿಮರಿಗೆ ಅಬ್ಬಾಸ್ ಸಿದ್ಧಿಕಿ ತಮ್ಮನ್ನು ಎನ್.ಆರ್.ಸಿ.ಯಿಂದ ರಕ್ಷಣೆ ಮಾಡುತ್ತಾರೆ ಎಂದನ್ನಿಸಿದೆ. ಐಎಸ್​ಎಫ್​ನಿಂದ ಪರಿಶಿಷ್ಟ ಜಾತಿ/ಪಂಗಡ ಹಾಗೂ ಮೇಲ್ವರ್ಗದ ಹಿಂದೂಗಳಿಗೂ ಟಿಕೆಟ್ ನೀಡಲಾಗಿದೆ.

    ‘ಮೂಲ ಬಂಗಾಳಿ ಮುಸ್ಲಿಮರಿಗೆ ಬಿಜೆಪಿ ಬಗ್ಗೆ ಆಕೊ್ರೕಶವಿದ್ದಂತಿಲ್ಲ. ಆದರೆ, ಬಾಂಗ್ಲಾದಿಂದ ಬಂಗಾಳಕ್ಕೆ ವಲಸೆ ಬಂದು ನೆಲೆಸಿರುವ ಮುಸ್ಲಿಮರು ಟಿಎಂಸಿ ಗೂಂಡಾಗಳ ಜತೆ ಸೇರಿ ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಜೆಪಿ ಅಧಿಕಾರಕ್ಕೆ ಬರಲೇಬೇಕು’ ಎನ್ನುವುದು ದಕ್ಷಿಣ 24 ಪರಗಣದ ಬರುಯ್ಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಬೆಂಗಳೂರು ನಗರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕೃಷ್ಣಮೂರ್ತಿ ನಿಲುವು.

    ಮಹಾಮೈತ್ರಿ ಪಾಲುದಾರ ಐಎಸ್​ಎಫ್​ಗೆ 294 ವಿಧಾನಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಉಳಿದ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಹಂಚಿಕೊಂಡಿವೆ. ಏತನ್ಮಧ್ಯೆ, ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಕೂಡ 9 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.ಐಎಸ್​ಎಫ್ ಬಗ್ಗೆ ಆಕ್ರೋಶಗೊಂಡಿರುವ ಮಮತಾ, ಐಎಸ್​ಎಫ್ ಬಿಜೆಪಿಯಿಂದ ಹಣ ಪಡೆದುಕೊಂಡಿದೆ ಎಂದೂ ಆರೋಪಿಸಿದ್ದಾರೆ.

    ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಚುನಾವಣಾ ಪ್ರಚಾರಕ್ಕೆ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts