More

    ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಮೇಲಾಟ

    • ರಾಘವ ಶರ್ಮ ನಿಡ್ಲೆ, ದಕ್ಷಿಣ 24 ಪರಗಣ (ಪ.ಬಂಗಾಳ)

    ರಾಜಕೀಯ ಹಿಂಸಾಚಾರ ಪಶ್ಚಿಮ ಬಂಗಾಳಕ್ಕೆ ಹೊಸದೇನಲ್ಲ. ರಾಜ್ಯದ ನಕ್ಸಲ್​ಬಾರಿಯಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಲ್ಲಿಂದ ಹಿಡಿದು ಇಲ್ಲಿಯವರೆಗೆ ಹಿಂಸಾಚಾರ, ಗಲಭೆಗಳಿಗೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ನೂರಾರು ಮಂದಿ ಅಮಾಯಕರು, ಕಾರ್ಯಕರ್ತರು ದುಷ್ಕೃತ್ಯಗಳಿಗೆ ಬಲಿಯಾಗಿದ್ದಾರೆ. ಹಿಂದೆ ಕಾಂಗ್ರೆಸ್-ಎಡಪಕ್ಷಗಳ ಮಧ್ಯೆ, ನಂತರದಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ಮಧ್ಯೆ ವ್ಯಾಪಕ ಗಲಾಟೆ, ಗದ್ದಲಗಳು ಸಂಭವಿಸಿದವು. ನಂದಿಗ್ರಾಮ ಮತ್ತು ಸಿಂಗೂರು ಜಮೀನು ಸಂಘರ್ಷದ ಪರಿಣಾಮ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರು. ಆದರೆ, ಹಿಂಸಾಚಾರ ಕಡಿಮೆಯಾಯಿತೇ?

    ರಾಜ್ಯದಲ್ಲಿ ಬಿಜೆಪಿಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಕಳೆದ 2-3 ಮೂರು ವರ್ಷಗಳಿಂದ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. 2018ರ ಸ್ಥಳೀಯ ಪಂಚಾಯತ್ ಚುನಾವಣೆ ವೇಳೆ ಆಡಳಿತಾರೂಢ ಟಿಎಂಸಿ ಪಕ್ಷದ ಕಾರ್ಯಕರ್ತರು, ಮುಖಂಡರ ಬೆದರಿಕೆಯಿಂದ ನಲುಗಿದ್ದ ಮಂದಿ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದಲೇ ಹಿಂದೇಟು ಹಾಕಿದ್ದರು. ಪರಿಣಾಮ ಎಷ್ಟೋ ಪಂಚಾಯತ್​ಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಪರ ಧೋರಣೆ ಹೊಂದಿರುವ ಮತದಾರರಿಗೆ ‘ವೋಟ್ ಮಾಡಲು ಹೇಗೆ ಬರುತ್ತೀರಿ’ ಎಂದು ಧಮಕಿ ಹಾಕುತ್ತಿರುವುದೂ ವರದಿಯಾಗುತ್ತಿದೆ. ‘ಬಿಜೆಪಿ ಮುಖಂಡರು ಬಿಹಾರ, ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಕರೆಸಿ ದಾಳಿ ನಡೆಸುತ್ತಿದ್ದಾರೆ. ನಾವು ಗಲಭೆಗಳಲ್ಲಿ ತೊಡಗಿಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ.

    ಈ ಮಧ್ಯೆ, ಟಿಎಂಸಿ ದಾಳಿಗಳಿಂದ ಹಲ್ಲೆಗೊಳಗಾದವರ ದೂರಿನ ಮೇಲೆ ಸರ್ಕಾರ ಸಮರ್ಪಕ ತನಿಖೆ ನಡೆಸುತ್ತಿಲ್ಲ. ಪೊಲೀಸರು ಕೂಡ ಅನೇಕ ಕಡೆಗಳಲ್ಲಿ ಸರ್ಕಾರದ ಪರವಾಗಿಯೇ ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರ ದೂರಿಗೆ ಮಾನ್ಯತೆ ಸಿಗುತ್ತಿಲ್ಲ. ‘ವಿಜಯವಾಣಿ’ ಭೇಟಿ ನೀಡಿದ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಜನರು, ಬೇರೆ ಪಕ್ಷಗಳ ಕಾರ್ಯಕರ್ತರು ಇದೇ ವಿಷಯ ಮಾತನಾಡುತ್ತಿದ್ದ ದೃಶ್ಯಗಳು ಕಂಡುಬಂದವು.

    ಕೋಲ್ಕತಾದಿಂದ 60 ಕಿಮೀ ದೂರದಲ್ಲಿರುವ ಕೇನಿಂಗ್ ವೆಸ್ಟ್ ವಿಧಾನಸಭೆಯ ಕುಲ್ತುಲಿ ಎಂಬ ಹಳ್ಳಿಯಲ್ಲಿನ ಕುಟುಂಬವೊಂದರ ಮೇಲೆ ಫೆಬ್ರವರಿ ತಿಂಗಳಲ್ಲಿ ನಡೆದ ದಾಳಿ ಇದಕ್ಕೊಂದು ಸಣ್ಣ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ ಕೋಲ್ಕತಾದಲ್ಲಿ ನಡೆಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೋಲಿ ಹವಲಾದಾರ್, ಲೀಲಾ ಹವಲಾದಾರ್, ನೀಲಿಮಾ, ಸೀಮಾ ಎಂಬ ನಾಲ್ವರು ಮಹಿಳೆಯರು ಕುಟುಂಬಸ್ಥರ ಜತೆಗೆ ವಾಪಸಾಗುತ್ತಿದ್ದರು. ನಾರಾಯಣಪುರ ದಾಟುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ಇವರು ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ್ದಲ್ಲದೆ, ನಾಲ್ವರು ಮಹಿಳೆಯರನ್ನು ಎಳೆದು ಹಾಕಿ ಅವರ ಬಟ್ಟೆಗಳನ್ನೆಲ್ಲ ಹರಿದಿದ್ದಾರೆ. ‘ಬಿಜೆಪಿಗೆ ಸಪೋರ್ಟ್ ಮಾಡುತ್ತೀರಾ? ಎಂದು ಪ್ರಶ್ನಿಸಿ ಟಿಎಂಸಿ ಗೂಂಡಾಗಳು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನೀಲಿಮಾಗೆ ಕಬ್ಬಿಣದ ರಾಡ್​ನಲ್ಲಿ ಹೊಡೆದ ಪರಿಣಾಮ ಆಕೆಗೆ ಈಗ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ. ನಮ್ಮ ಕೈ, ಕಾಲುಗಳನ್ನು ಬಿಗಿಯಾಗಿ ಹಿಡಿದು ಹಲ್ಲೆ ಮಾಡಿದರು. ಬಿಜೆಪಿ ಬೆಂಬಲಿಸುತ್ತೇವೆ ಎನ್ನುವುದೇ ಅಪರಾಧ. ಇದೇ ಕಾರಣಕ್ಕೆ 3 ವರ್ಷಗಳ ಹಿಂದೆ ನಮ್ಮ ಕುಟುಂಬದ 80 ವರ್ಷದ ವೃದ್ಧೆ ಮೇಲೂ ಹಲ್ಲೆ ಮಾಡಿದ್ದರು’ ಎಂದು ಬೇಸರ ಹೊರಹಾಕಿದರು. ಟಿಎಂಸಿ ಅಟ್ಟಹಾಸದಿಂದ ರೋಸಿ ಹೋಗಿರುವ ಗ್ರಾಮಸ್ಥರು ಬದಲಾವಣೆ ಬೇಕಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ಬಾವುಟ ಅಥವಾ ಪರ ಘೋಷಣೆಗೆ ಮುಂದಾಗುತ್ತಿಲ್ಲ. ಹಾಗೆ ಮಾಡಿದರೆ, ದಾಳಿ ಆಗಬಹುದು ಎನ್ನುವುದು ಅವರ ಆತಂಕ.

    ಪಕ್ಷದ ಕಚೇರಿ ನಾಶ: 2019ರ ಲೋಕಸಭೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬಂಗಾಳದ ಜಯನಗರ ಕ್ಷೇತ್ರದ ಕೇನಿಂಗ್ ಪಶ್ಚಿಮದ ವ್ಯಾಪ್ತಿಯ ತಲ್ದಿ ಎಂಬಲ್ಲಿ ಬಿಜೆಪಿ ಸಣ್ಣ ಕಚೇರಿ ನಿರ್ಮಾಣ ಮಾಡಿಕೊಂಡಿತ್ತು. ಇಲ್ಲಿ ನಾಲ್ಕೈದು ಬಿಜೆಪಿ ಕಾರ್ಯಕರ್ತರಿದ್ದ ವೇಳೆ ದಾಳಿ ಮಾಡಿದ್ದ ಟಿಎಂಸಿ ಕಾರ್ಯಕರ್ತರು ಇಡೀ ಕಚೇರಿ ಧ್ವಂಸಗೊಳಿಸಿದ್ದರು. ಪೊಲೀಸರಿಗೆ ದೂರು ನೀಡಲು ಹೋದರೂ ಪ್ರಯೋಜನವಾಗಿರಲಿಲ್ಲ ಎನ್ನುತ್ತಾರೆ ತಲ್ದಿ ಬಿಜೆಪಿ ಮಂಡಲದ ಅಧ್ಯಕ್ಷ ಅಭಿಜಿತ್. ‘ಟಿಎಂಸಿಯವರು ಎಷ್ಟೇ ದಾಳಿ ಮಾಡಲಿ. ನಾವು ಹೆದರುವುದಿಲ್ಲ’ ಎಂದರು.

    ಬಂಗಾಳದ ದಕ್ಷಿಣ 24 ಮತ್ತು ಉತ್ತರ 24 ಪರಗಣ ಜಿಲ್ಲೆಗಳು ಈಚಿನ ದಿನಗಳಲ್ಲಿ ವ್ಯಾಪಕ ಹಿಂಸಾಚಾರ ಕಾಣುತ್ತಿವೆ. ‘2019ರ ಲೋಕಸಭೆ ಫಲಿತಾಂಶ ಬಳಿಕ ಬಿಜೆಪಿ ರಾಜಕೀಯ ಏರುಗತಿ ಟಿಎಂಸಿಯನ್ನು ಚಿಂತೆಗೀಡು ಮಾಡಿರುವುದೇ ಇದಕ್ಕೆಲ್ಲ ಕಾರಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೂಂಡಾಗಿರಿ ಕಡಿಮೆಯಾಗುವುದೇ ಎಂಬುದು ನನಗೆ ಗೊತ್ತಿಲ್ಲ. ಅಭಿವೃದ್ಧಿ ಆಮೇಲೆ ನೋಡೋಣ. ಮೊದಲು ಈ ಹಿಂಸಾಚಾರ ನಿಲ್ಲಬೇಕು. ಹಿಂದೂ-ಮುಸ್ಲಿಂ ವಿಭಜನೆಯೂ ನಿಲ್ಲಬೇಕು’ ಎನ್ನುತ್ತಾರೆ ದಕ್ಷಿಣ 24 ಪರಗಣದ ಬರುಯ್ಪುರದ ಟೀ ಅಂಗಡಿಯಲ್ಲಿ ಸಿಕ್ಕ ಯುವಕ ಪ್ರದೀಪ್ ಚಟರ್ಜಿ. ಕೊಲ್ಕತಾದಲ್ಲಿ ಮೊಬೈಲ್ ಸರ್ವಿಸ್ ಅಂಗಡಿ ಇಟ್ಟುಕೊಂಡಿರುವ ಯುವಕ ಮನೋಜ್, ‘ಕಮ್ಯುನಿಸ್ಟರ ಅಟ್ಟಹಾಸ ಬೇಡ ಎಂದು ಟಿಎಂಸಿ ಆಯ್ಕೆ ಮಾಡಿದೆವು. ಆದರೆ, ಮತದಾನ ನಡೆಯುತ್ತಿರುವ ನಂದಿಗ್ರಾಮದಲ್ಲಿ ಏನಾಗುತ್ತಿದೆ ನೋಡಿ. ಟಿವಿ ಚಾನೆಲ್ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಇದೊಂದು ನಿದರ್ಶನ ಅಷ್ಟೇ’ ಎಂದರು.

    ದೌರ್ಜನ್ಯದ ಪರಮಾವಧಿ: ಕೇನಿಂಗ್ ಪೂರ್ವ ವಿಧಾನಸಭೆಯ ಸಾಂತೊಮಾರಾ ಮಾಥೆರ್ ದಿಗಿ ಎಂಬ ಹಳ್ಳಿಯ ಮಾಮೋನಿ ದಾಸ್ ಎಂಬಾಕೆಯ ಕಥೆ ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು. ‘ನಾನು ಕ್ಷೇತ್ರದಲ್ಲಿ ಬಲಪಂಥೀಯ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದೇನೆ ಎಂಬ ಕಾರಣಕ್ಕಾಗಿ 2015ರಲ್ಲಿ ಟಿಎಂಸಿ ಮುಖಂಡ ಶೌಕತ್ ಅಲಿ ಮತ್ತವರ ಬೆಂಬಲಿಗರು ನನ್ನ ಮನೆ ಮೇಲೆ ದಾಳಿ ಮಾಡಿದ್ದರು. ಮೂರು ದಿನ ನನ್ನನ್ನು ಅವರ ವಶದಲ್ಲಿಟ್ಟುಕೊಂಡಿದ್ದರು. ಅವರ ಪ್ರಾಬಲ್ಯ ಎಷ್ಟಿತ್ತು ಎಂದರೆ ನಮ್ಮ ಕಾರ್ಯಕರ್ತರಿಗೆ ಕ್ಷೇತ್ರಕ್ಕೆ ಪ್ರವೇಶಿಸಲೂ ಸಾಧ್ಯವಾಗಲಿಲ್ಲ. ಮೂರು ದಿನ ಎಲ್ಲ ಮಾದರಿಯ ದೌರ್ಜನ್ಯಕ್ಕೆ ನಾನು ಒಳಗಾದೆ. ವಸ್ತ್ರಾಪಹರಣ ಮಾಡಿದರು. ನಂತರ ಲಾಕೆಟ್ ಚಟರ್ಜಿ (ಬಿಜೆಪಿಯ ಹಾಲಿ ಸಂಸದೆ) ಬಂದು ಆಸ್ಪತ್ರೆಗೆ ಸೇರಿಸಿದರು. ಪೊಲೀಸರಿಗೆ ದೂರು ನೀಡಿದೆ. ಆದರೆ ಕ್ರಮ ಕೈಗೊಳ್ಳಲು ಸಿದ್ಧರಿರಲಿಲ್ಲ’ ಎನ್ನುತ್ತಲೇ ಕಣ್ಣೀರು ಹಾಕಿದರು. ಈ ಘಟನೆ ಬಳಿಕ ತಮ್ಮ 2 ಎಕರೆ ಜಮೀನು ಮತ್ತು ಮನೆಯನ್ನು ಬಿಟ್ಟು ಕೇನಿಂಗ್ ಪೂರ್ವದಲ್ಲಿ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.

    ‘ಶೌಕತ್ ಮೊಲ್ಲಾ ಕೇನಿಂಗ್ ಪೂರ್ವ ವಿಧಾನಸಭೆಯ ಮಾಫಿಯಾ ಡಾನ್. ಹಿಂದೆ ಕಮ್ಯುನಿಸ್ಟ್ ಪಕ್ಷದಲ್ಲಿದ್ದಾಗ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಿದ್ದ ಎಂದು ಇಲ್ಲಿನ ಸ್ಥಳೀಯರೇ ಹೇಳುತ್ತಾರೆ. ಈಗ ಟಿಎಂಸಿ ಶಾಸಕರಾಗಿದ್ದಾರೆ. ಮಾಮೋನಿ ದಾಸ್ ಕುಟುಂಬ ಕೇನಿಂಗ್ ಪಶ್ಚಿಮಕ್ಕೆ ಬಂದಿದ್ದರೂ, ಇಲ್ಲಿಗೆ ಬಂದು ಆಗಾಗ ಬೆದರಿಕೆ ಹಾಕುತ್ತಾರೆ. ಬಿಜೆಪಿ ಗೆದ್ದರೆ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಇರಬಲ್ಲರು. ಇಲ್ಲದಿದ್ದಲ್ಲಿ ಇವರೆಲ್ಲರ ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ’ ಎಂದು ಕೇನಿಂಗ್ ಪೂರ್ವ ಮತ್ತು ಪಶ್ಚಿಮದಲ್ಲಿ ಪ್ರಚಾರ ನಡೆಸುತ್ತಿದ್ದ ಕರ್ನಾಟಕದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವಿಜಯವಾಣಿಗೆ ವಿವರಿಸಿದರು.

    ಚುನಾವಣೆಯಲ್ಲಿ ‘ಖೇಲೋ ಹಬೆ’ (ಆಟ ಶುರುವಾಗಿದೆ) ಎಂಬ ಘೋಷವಾಕ್ಯ ದೊಂದಿಗೆ ಟಿಎಂಸಿ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ‘ಜೈ ಶ್ರೀರಾಮ್, ‘ವಂದೇ ಮಾತರಂ’ ಘೋಷವಾಕ್ಯಗಳ ಮೂಲಕ ಟಿಎಂಸಿಗೆ ಟಕ್ಕರ್ ನೀಡುತ್ತಿದೆ. ವಿಪರ್ಯಾಸ ಎಂದರೆ, ಎಲ್ಲೆಲ್ಲಿ ಈ ಘೋಷಣೆಗಳು ಜೋರಾಗಿ ಕೇಳುತ್ತಿವೆಯೋ ಅಲ್ಲಿ ಗಲಭೆ, ಹಿಂಸಾಚಾರ, ಹಲ್ಲೆಗಳು ಹೆಚ್ಚುತ್ತಿವೆ.

    ಮೊನ್ನೆ ಹೋಳಿ ಹಬ್ಬ ಆಚರಣೆ ಬಳಿಕ ಮಾಲ್ತಾ ಗ್ರಾಮದ ಕೆರೆಯೊಂದರಲ್ಲಿ ಸ್ನಾನ ಮುಗಿಸಿದ ಸಮೀರ್ ಮಂಡಲ್, ‘ಜೈ ಶ್ರೀರಾಮ್ ಎಂದು ಕೂಗಿದ. ಇದನ್ನು ಕೇಳುತ್ತಿದ್ದಂತೆಯೇ ಕೆಲ ಯುವಕರು ಬಂದು ಸಮೀರ್​ಗೆ ಹಿಗ್ಗಾಮುಗ್ಗಾ ಥಳಿಸಿದರು. ಕೆರೆಯ ಬಳಿ ನರಳಾಡುತ್ತಿದ್ದ ಸಮೀರ್​ನನ್ನು ಕಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಮೀರ್, ‘ನಾನು ಹಿಂದೂ. ಜೈ ಶ್ರೀರಾಮ್ ಹೇಳುವುದೂ ತಪ್ಪೇ’ ಎಂದು ಪ್ರಶ್ನಿಸುತ್ತಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts