More

    ರೋಗಿಯಂತೆ ಹೋಗಿ ನಕಲಿ ವೈದ್ಯನ ಬಂಡವಾಳ ಬಯಲು ಮಾಡಿದ ಮಹಿಳಾ ಅಧಿಕಾರಿ!

    ಗದಗ: ಬಿಎಎಂಎಸ್ ಕೋರ್ಸಿನ ಮೊದಲ ವರ್ಷದಲ್ಲೇ ಮೂರು ವಿಷಯಗಳಲ್ಲಿ ಫೇಲ್ ಆಗಿ ಓದುವುದನ್ನೇ ನಿಲ್ಲಿಸಿದ್ದ ಆಸಾಮಿಯೊಬ್ಬ ಕಳೆದ ಎರಡು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ಸಂಗತಿ ಬಯಲಾಗಿದೆ. ಆಯುಷ್ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ರೋಗಿಯಂತೆ ನಟಿಸಿ ಆತನ ಬಂಡವಾಳ ಬಯಲು ಮಾಡಿರುವುದು ವಿಶೇಷ.

    ಮೂಲತಃ ಕೊಪ್ಪಳ ಜಿಲ್ಲೆಯ ಕೆಸಲಾಪುರ ಗ್ರಾಮದ ಮಲ್ಲಿಕಾರ್ಜುನ ಹಿರೇಮಠ ಎಂಬಾತ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿರುವ ತನ್ನ ಮನೆಯಲ್ಲೇ ಕ್ಲಿನಿಕ್ ನಡೆಸುತ್ತಿದ್ದ. ಯಾವುದೇ ಪದವಿ ಇಲ್ಲದಿದ್ದರೂ ಕಳೆದ ಎರಡು ವರ್ಷಗಳಿಂದ ಈತನ ಕ್ಲಿನಿಕ್ ನಿರಾತಂಕವಾಗಿ ನಡೆದುಕೊಂಡು ಹೋಗುತ್ತಿತ್ತು.

    ಈ ನಕಲಿ ವೈದ್ಯನ ವಿಷಯ ಅರಿತ ಆಯುಷ್ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ ಮಂಗಳವಾರ ರಾತ್ರಿ 7 ಗಂಟೆ ಸಮಯಕ್ಕೆ ಪೇಷಂಟ್ ರೀತಿಯಲ್ಲಿ ನಟಿಸುತ್ತ ಆತನ ಬಳಿಗೆ ಹೋದರು. ‘ತಲಿಗೆ ಚಕ್ರ ಬರಾಕತ್ತೇತಿ ಡಾಕ್ಟ್ರೇ ಸ್ವಲ್ಪ ನೋಡ್ರಿ’ ಎಂದರು. ಇದಕ್ಕೆ ನಕಲಿ ವೈದ್ಯ ಮಲ್ಲಿಕಾರ್ಜುನ, ‘ತಡ್ರಿ ತಡ್ರಿ ಚೆಕ್ ಮಾಡ್ತೀನಿ’ ಎಂದಿದ್ದಾನೆ. ‘ಬಿಪಿ ಚೆಕ್ ಮಾಡಿ ನೋಡ್ರಿ’ ಎಂದು ಮಹಿಳೆ ಹೇಳಿದ್ದಾರೆ. ಅಷ್ಟೊತ್ತಿಗೆ ಆ ಮಹಿಳೆ ಪೇಷಂಟ್ ಅಲ್ಲ, ಆಯುಷ್ ಇಲಾಖೆ ಅಧಿಕಾರಿ ಎಂದು ಆತನಿಗೆ ಸಂಶಯ ಬಂದಿದೆ. ‘ತಡ್ರಿ ಒಳಗ ಹೋಗಿ ಬಿಪಿ ಕಿಟ್ ತರ‌್ತೀನಿ’ ಎಂದು ಹೋದವನು ಅಲ್ಲಿಂದಲೇ ನಾಪತ್ತೆಯಾಗಿದ್ದಾನೆ.

    ಇತ್ತ ಸ್ವಲ್ಪ ಹೊತ್ತು ಕಾಯ್ದ ಡಾ. ಸುಜಾತಾ ಪಾಟೀಲ, ‘ಡಾಕ್ಟರ್‌ನ ಕರೀರಿ’ ಎಂದು ಆತನ ಸಂಬಂಧಿಕರಿಗೆ ಹೇಳಿದಾಗ, ‘ಬಿಪಿ ಕಿಟ್ ಬ್ಯಾರೆ ಕಡೆ ಬಿಟ್ ಬಂದಾನ. ತರಾಕ ಹೋಗ್ಯಾನ’ ಎಂಬ ಉತ್ತರ ಬಂದಿದೆ. ಅರ್ಧ ಗಂಟೆಯಾದರೂ ಡಾಕ್ಟರ್ ವಾಪಸ್ ಬರದಿದ್ದಾಗ, ‘ಹಿಂಗ್ ಅರ್ಧ ಮರ್ಧ ನೋಡಿ ಹೋದ್ರ ಹ್ಯಾಂಗ್ರಿ’ ಎಂದು ಡಾ. ಸುಜಾತಾ ಕೇಳಿದ್ದಾರೆ. ಅಷ್ಟೊತ್ತಿಗೆ ನಕಲಿ ವೈದ್ಯನ ಮನೆಯವರು, ‘ನಮ್ ಹುಡುಗ ನಿಮಗ ನೋಡಂಗಿಲ್ಲರಿ. ಅಂವಾ ಸಣ್ಣಪುಟ್ಟ ಜ್ವರ, ನೆಗಡಿ ಅಷ್ಟ ನೋಡತಾನ. ನೀವು ಹೋಗ್ರ್ರಿ’ ಎಂದಿದ್ದಾರೆ. ಆಗ ಡಾ. ಸುಜಾತಾ ಪಾಟೀಲ ವಾಪಸಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈಗ ನಕಲಿ ವೈದ್ಯನ ಶೋಧದಲ್ಲಿ ತೊಡಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೊಂದು ಎಚ್ಚರಿಕೆ…! ‘ಯಾವ ಕಾರಣಕ್ಕೂ ರಾಜಿ ಇಲ್ಲ’ ಎಂದು ಅವರು ಹೇಳಿದ್ದೇಕೆ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts