More

    ಕಬ್ಬಿಗೆ ಬೆಂಕಿ ಹಾಕಿ ತಾನೂ ಆತ್ಮಹತ್ಯೆಗೆ ಮುಂದಾದ ರೈತ

    ರಾಣೆಬೆನ್ನೂರ: ತಾನು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಯವರು ಕಟಾವು ಮಾಡಲು ಬರಲಿಲ್ಲವೆಂದು ಮನನೊಂದ ರೈತನೊಬ್ಬ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದಲ್ಲದೆ ತಾನೂ ಸಜೀವ ದಹನವಾಗಲು ಯತ್ನಿಸಿದ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

    ಹೊನ್ನಪ್ಪ ಪುಟ್ಟಕ್ಕನವರ ಆತ್ಮಹತ್ಯೆಗೆ ಯತ್ನಿಸಿದ ರೈತ. ಕೃಷಿ ಸಚಿವ ಬಿ.ಸಿ. ಪಾಟೀಲ ತವರು ಜಿಲ್ಲೆಯಲ್ಲೇ ಇಂಥದೊಂದು ಘಟನೆ ನಡೆದಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಇವರು ತಮ್ಮ 2 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಒಂದನೇ ಬೆಳೆಯನ್ನು ಮೈಲಾರ ಶುಗರ್ಸ್ ಕಾರ್ಖಾನೆಯವರು ಕಟಾವು ಮಾಡಿಕೊಂಡು ಹೋಗಿದ್ದರು. ನಿಯಮದಂತೆ 2ನೇ ಬಾರಿಯ ಬೆಳೆಯನ್ನು ಅದೇ ಕಾರ್ಖಾನೆಯವರು ಕಟಾವು ಮಾಡಿಕೊಂಡು ಹೋಗಬೇಕು. ಆದರೆ, ಮೂರು ತಿಂಗಳು ಕಳೆದರೂ ಕಾರ್ಖಾನೆಯವರು ಕಬ್ಬು ಕಟಾವಿಗೆ ಬಂದಿರಲಿಲ್ಲ. ಕಬ್ಬು ಸಂಪೂರ್ಣ ಒಣಗತೊಡಗಿತ್ತು. ಇದರಿಂದ ರೈತ ಹೊನ್ನಪ್ಪನಿಗೆ ಮೂರ್ನಾಲ್ಕು ಲಕ್ಷ ರೂ. ನಷ್ಟವಾಗಿದೆ. ಇದರಿಂದ ಮನನೊಂದ ಹೊನ್ನಪ್ಪ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದಾನೆ. ನಂತರ ತಾನೂ ಅದರಲ್ಲಿ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದನು. ಗದ್ದೆಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ಅಕ್ಕಪಕ್ಕದ ರೈತರು ಧಾವಿಸಿ ಹೊನ್ನಪ್ಪನನ್ನು ರಕ್ಷಿಸಿದ್ದಾರೆ.

    ಪ್ರತಿಭಟನೆಗೂ ಸ್ಪಂದಿಸದ ಅಧಿಕಾರಿಗಳು: ಹೊನ್ನಪ್ಪ ಬೆಳೆದ ಕಬ್ಬನ್ನು ಕಳೆದ ನವೆಂಬರ್ ತಿಂಗಳಲ್ಲೇ ಕಟಾವು ಮಾಡಬೇಕಿತ್ತು. ಜನವರಿ ಬಂದರೂ ಕಟಾವು ಮಾಡದ ಕಾರಣ ಜ. 4ರಂದು ಹೂವಿನ ಹಡಗಲಿ ತಾಲೂಕಿನ ಮೈಲಾರ ಶುಗರ್ಸ್ ಕಾರ್ಖಾನೆ ಎದುರು ಧರಣಿ ನಡೆಸಿದ್ದರು. ಆದರೂ ಕಾರ್ಖಾನೆಯವರು ಕ್ಯಾರೇ ಎಂದಿರಲಿಲ್ಲ. ನಂತರ ಬಳ್ಳಾರಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ನಮಗೆ ನ್ಯಾಯ ಒದಗಿಸಿಕೊಡುವಂತೆ ಹಾವೇರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ, ಯಾರಿಂದಲೂ ಸ್ಪಂದನೆ ದೊರೆತಿರಲಿಲ್ಲ.

    ಗಳಗಳನೇ ಕಣ್ಣೀರಿಟ್ಟ ರೈತ: ಕಳೆದ ಬಾರಿ 160 ಟನ್ ಕಬ್ಬನ್ನು ಬೆಳೆದು ಕಂಪನಿಗೆ ನೀಡಿದ್ದೇನೆ. ಈ ಬಾರಿಯೂ ಉತ್ತಮವಾಗಿ ನೀರು ಹಾಯಿಸಿ ಚೆನ್ನಾಗಿ ಕಬ್ಬು ಬೆಳೆದಿದ್ದೆ. 160 ಟನ್​ಗೂ ಅಧಿಕ ಕಬ್ಬು ಬರುವ ನಿರೀಕ್ಷೆಯಿತ್ತು. ಆದರೆ, ಕಂಪನಿಯವರು ಹಾಗೂ ಅವರ ಏಜೆಂಟರು ವಿನಾಕಾರಣ ಕಾಲಹರಣ ಮಾಡಿ, ಕಬ್ಬು ಕಟಾವು ಮಾಡಿಕೊಳ್ಳಲಿಲ್ಲ. ಈಗ ಕೇಳೋಕೆ ಹೋದರೆ ಕಬ್ಬು ಅರಿಯುವುದನ್ನು ನಿಲ್ಲಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಸೇರಿ ಯಾರ ಬಳಿ ಕೇಳಿಕೊಂಡರೂ ನನಗೆ ನ್ಯಾಯ ದೊರಕಿಸಿ ಕೊಡಲಿಲ್ಲ ಎಂದು ಹೊನ್ನಪ್ಪ ‘ವಿಜಯವಾಣಿ’ ಎದುರು ಗಳಗಳನೇ ಕಣ್ಣೀರು ಹಾಕಿದರು.

    ಏಜೆಂಟರು ಮಾಡಿದ ಕಿತಾಪತಿ…! : ಕಾರ್ಖಾನೆಯವರು ಕಬ್ಬು ಕಟಾವು ಮಾಡುವ ಯಂತ್ರವನ್ನು ಕಳುಹಿಸಿದ್ದರೂ ಕಾರ್ಖಾನೆಯ ಏಜೆಂಟ್​ರಾದ ಈಶ್ವರಪ್ಪ, ಸಂಜಯ, ಹರೀಶ ಎಂಬುವರು ರಾಜಕೀಯ ಹಾಗೂ ಹಣದ ಆಸೆಗೆ ನನ್ನ ಜಮೀನಿಗೆ ಬರಬೇಕಿದ್ದ ಯಂತ್ರವನ್ನು ಬೇರೆ ರೈತರ ಜಮೀನಿಗೆ ಕಳುಹಿಸಿದ್ದಾರೆ. ಈ ಭಾಗದಲ್ಲಿ ಏಜೆಂಟರು 1 ಎಕರೆಗೆ 10 ಸಾವಿರ ರೂ. ಕೊಟ್ಟರೆ ಮಾತ್ರ ಅಂಥ ರೈತನ ಕಬ್ಬು ಕಟಾವು ಮಾಡಲು ಯಂತ್ರ ಕಳುಹಿಸುತ್ತಿದ್ದಾರೆ. ಸಣ್ಣ ಸಣ್ಣ ರೈತರಿಗೆ ಎಕರೆಗೆ 10 ಸಾವಿರ ರೂ. ಕೊಡಲು ಸಾಧ್ಯವೇ. ಈ ಕುರಿತು ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ಸಹ ನೀಡಿದ್ದೇವೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆರೋಪಿಸಿದರು.

    ಸತತ ಬರಗಾಲ ಹಾಗೂ ಈ ಬಾರಿಯ ಅತಿವೃಷ್ಟಿಯಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ರೈತರು ಬೆಳೆದ ಕಬ್ಬನ್ನು ಕಟಾವು ಮಾಡಲು ಸಕ್ಕರೆ ಕಾರ್ಖಾನೆಯವರು ಹಿಂದೇಟು ಹಾಕಿದ್ದರಿಂದ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಕೃಷಿ ಸಚಿವರ ತವರು ಜಿಲ್ಲೆಯಲ್ಲೇ ಹೀಗಾದರೆ, ರಾಜ್ಯದ ರೈತರ ಗತಿ ಏನು. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು.

    | ರವೀಂದ್ರಗೌಡ ಪಾಟೀಲ, ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts