More

    ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

    ತುಮಕೂರು: ಯುವಜನರೇ, ಫೇಸ್​ಬುಕ್ ಜಾಹೀರಾತು ನೋಡಿ ಕೆಲಸ ಸಿಗುತ್ತೆ ಅಂತ ಇಲ್ಲಿಗೆ ಬರೋಕು ಮುನ್ನ ಜೋಕೆ! ತುಮಕೂರಿನಲ್ಲಿ ತಲೆ ಎತ್ತಿದೆ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳೇ ಇವರ ಮೈನ್ ಟಾರ್ಗೆಟ್. ಹದಿಹರೆಯದ ಯುವಕ-ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಗಾಳ ಹಾಕ್ತಾರೆ. ಎರಡ್ಮೂರು ದಿನ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡ್ತಾ ಮೋಸದ ಚೈನ್ ಲಿಂಕ್​ನ ಬಲೆಗೆ ಸಿಕ್ಕಿಸಿಬಿಡ್ತಾರೆ. ಯುವತಿಯರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಂಡು ಖಾಸಗಿ ವಿಡಿಯೋ ಸೆರೆ ಹಿಡಿದು ವರಸೆ ಬದಲಿಸ್ತಾರೆ…

    ಇದು ‘ಸಿಎಲ್​ವೈ(CLY)’ ಎಂಬ ಕಂಪನಿ ಹೆಸರಲ್ಲಿ ಜಾಹೀರಾತು ಹಾಕಿ ವಂಚಕರು ಅಮಾಯಾಕರ ಜೀವನದ ಜೊತೆ ಚೆಲ್ಲಾಟ ಆಡಿರುವ ಹೇಯ ಕೃತ್ಯ. ತುಮಕೂರಿನಲ್ಲಿ ಆಫೀಸ್ ತೆರೆಯದೇ ಅಪಾರ್ಟ್​ಮೆಂಟ್​ನಲ್ಲಿ ಮೂರ್ನಾಲ್ಕು ಫ್ಲ್ಯಾಟ್​ಗಳನ್ನು ಬಾಡಿಗೆ ಪಡೆದು ಫೇಸ್​ಬುಕ್​ನಲ್ಲೇ ಅಮಾಯಕರಿಗೆ ಗಾಳ‌ ಹಾಕಿದ್ದಾರೆ. ತುಮಕೂರಿನ ಊರುಕೆರೆ ಬಳಿಯ ಸ್ವರ್ಣ ಗೃಹ ಅಪಾರ್ಟ್​ಮೆಂಟ್​ನಲ್ಲಿ ವಂಚಕರು ಮನೆಗಳನ್ನ ಬಾಡಿಗೆ ಪಡೆದಿದ್ದಾರೆ.

    ಫೇಸ್​ಬುಕ್​ನಲ್ಲಿ ‘ಸಿಎಲ್​ವೈ’ ಕಂಪನಿ ಹೆಸರಲ್ಲಿ ವಂಚಕರು ಹಾಕಿದ್ದ ನಕಲಿ ಜಾಹೀರಾತನ್ನು ನೋಡಿ ಕೆಲಸ ಪಡೆಯುವ ಆಸೆಯಿಂದ ಶಿವಮೊಗ್ಗ, ಚಾಮರಾಜನಗರ, ಕೊಪ್ಪಳ, ಹುಬ್ಬಳ್ಳಿ, ದಾವಣಗೆರೆ ಸೇರಿ ಹಲವು ಜಿಲ್ಲೆಗಳ 30ಕ್ಕೂ ಹೆಚ್ಚು ಯುವಕ-ಯುವತಿಯರು ಸಂಪರ್ಕಿಸಿದ್ದಾರೆ. ಆರಂಭದಲ್ಲಿ ಇವರಿಂದ ನೋಂದಣಿಗೆಂದು 2,500 ರೂಪಾಯಿ ಪಡೆದ ವಂಚಕರು, ‘ಒಳ್ಳೆಯ ಕೆಲಸ, ನಿಮ್ಗೆ ಕೈ ತುಂಬಾ ‌ಹಣ ಬರುತ್ತೆ, ಕಾರು, ಬಂಗಲೆ ಸಿಗುತ್ತೆ. ನಿಮಗೆ ಒಳ್ಳೆಯ ಕೆಲಸ ಕೊಡಿಸಬೇಕು ಅಂದ್ರೆ ನಮಗೆ ತಲಾ 40ರಿಂದ 50 ಸಾವಿರ ರೂಪಾಯಿ ಕೊಡಬೇಕು’ ಎಂದು ಹಣ ವಸೂಲಿ ಮಾಡಿದ್ದಾರೆ. ಎರಡು ಮೂರು ದಿನ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡಿದ್ದಾರೆ. ಬಳಿಕ ‘ಇದೊಂಥರಾ ಚೈನ್ ಲಿಂಕ್. ನೀವು ಎಷ್ಟು ಮಂದಿಯನ್ನ ನಮ್ಮ ಕಂಪನಿಗೆ ಸೇರಿಸುತ್ತಿರೋ ಅಷ್ಟೇ ಲಾಭ ಇದೆ. ನಿಮಗೆ ಕಮಿಷನ್​ ಸಿಗುತ್ತೆ’ ಎಂದು ಬ್ರೈನ್​ ವಾಷ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಕೆಲಸ ಕೇಳಿಕೊಂಡು ಬಂದಿದ್ದ ಕೆಲ ಯುವತಿಯರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

    ತಾವು ಮೋಸ ಹೋಗಿರುವುದು ಗೊತ್ತಾಗಿ ‘ನಮಗೆ ಕೆಲಸ ಬೇಡ, ನಮ್ಮ ಹಣ ಕೊಡಿ’ ಎಂದವರ ಮೇಲೆ ಪುಡಿರೌಡಿಗಳನ್ನ ಕರೆಸಿ ಹಲ್ಲೆ ಮಾಡಿಸಿದ್ದಾರೆ. ‘ಹಣ ವಾಪಸ್ ಕೇಳಿದ್ರೆ ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುತ್ತೀವಿ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅತ್ತ ಯುವತಿಯರಿಗೆ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿ ನರಳಿದ ಹಲವರಲ್ಲಿ ಕೆಲವರು ಧೈರ್ಯ ಮಾಡಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಸಂಜೆ ಪೊಲೀಸರು ಅಪಾರ್ಟ್​ಮೆಂಟ್​ ಮೇಲೆ ದಾಳಿ ಮಾಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

    ಫೇಸ್​ಬುಕ್​ ಮೂಲಕ ಪರಿಚಯವಾಗಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ “ಚೇಂಜ್​ ಯುವರ್​ ಲೈಫ್​” ಎಂಬ ನಕಲಿ ಸಂಸ್ಥೆಯ ಬಗ್ಗೆ ಬಂದ ಹಣಕಾಸು ವಂಚನೆ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ. ಕೆಲವು ಯುವತಿಯರಿಗೂ ಶೋಷಣೆ ಮಾಡಿರುವ ಬಗ್ಗೆ ತಿಳಿದುಬಂದಿದೆ. ಮೋಸದ ಜಾಲದ ಬಗ್ಗೆ ತನಿಖೆ ತೀವ್ರಗೊಳಿಸಿದ್ದು ಆರೋಪಿಗಳನ್ನು ಶ್ರೀ ಬಂಧಿಸಲಾಗುವುದು.
    |ರಾಹುಲ್​ಕುಮಾರ್​ ಷಹಪುರವಾಡ್​ ಜಿಲ್ಲಾ ಪೊಲೀಸ್​ ಅಧೀಕ್ಷಕ

    ಕೆಲಸ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ಕಿತ್ತುಕೊಂಡಿದ್ದಾರೆ, ಹಣ ವಾಪಸ್​ ಕೇಳಿದಾಗ ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕಿದರು. ಕೆಲವು ಅಸಹಾಯಕ ಯುವತಿಯರನ್ನು ನಂಬಿಸಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದು ವೀಡಿಯೋ ತೋರಿಸಿ ಬೆದರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ.
    |ಮೋಸಕ್ಕೊಳಗಾದ ಯುವಕ ತುಮಕೂರು

    ನಂಜನಗೂಡಲ್ಲಿ ಜಮೀನಿಗೆ ಹೋಗಿದ್ದ ತಾಯಿ-ಮಗಳು ಶವವಾಗಿ ಪತ್ತೆ: ಅಂತ್ಯಕ್ರಿಯೆ ಬಳಿಕ ಪ್ರಕರಣಕ್ಕೆ ಸ್ಫೋಟಕ ತಿರುವು

    ತುಮಕೂರಲ್ಲಿ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕನಿಗೆ ಆಯ್ತು ತಕ್ಕ ಶಾಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts