More

    ಅರಣ್ಯದಲ್ಲಿ ಸತ್ತ ಹುಲಿ ಜಿಲ್ಲೆಯದೇ ! ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಸಲಹೆಗಾರ ಅಭಿಮತ

    ತುಮಕೂರು: ಗುಬ್ಬಿ ತಾಲೂಕಿನ ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ಸಿಕ್ಕ ಹುಲಿ ಕಳೇಬರ, ಜಿಲ್ಲೆಯ ಹುಲಿಯ ಸ್ಥಿತಿಗತಿ ಹಾಗೂ ಇತಿಹಾಸದ ಬಗ್ಗೆ ಹೊಸ ದಿಕ್ಕು ನೀಡಿದೆ.

    ಈ ಆರೋಗ್ಯಕರ, ದೃಢಕಾಯ ಗಂಡು ಹುಲಿ ನಮ್ಮ ಜಿಲ್ಲೆಯದ್ದೇ ಎಂಬ ಕುತೂಹಲಕರ ಅಂಶವನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಸಲಹೆಗಾರ ಟಿ.ವಿ.ಎನ್.ಮೂರ್ತಿ ಬಿಚ್ಚಿಟ್ಟಿರುವುದು ತೀವ್ರತರ ಚರ್ಚೆಗೆ ಗ್ರಾಸ ಒದಗಿಸಿದೆ.

    ಭಾರತದಲ್ಲಿನ ಹುಲಿ ಪ್ರಭೇದ ರಾಯಲ್ ಬೆಂಗಾಲ್ ಟೈಗರ್ ಎಂದು ಕರೆಯಲಾಗುತ್ತದೆ. ಇವು ಭಾರತವಲ್ಲದೆ, ಚೀನಾ, ಭೂತಾನ್, ಬಾಂಗ್ಲಾದೇಶ, ಹಾಗೂ ಬರ್ಮಾದಲ್ಲಿ ಕಾಣಸಿಗುತ್ತವೆ. ಎರಡು ಬೆಂಗಾಲ್ ಟೈಗರ್‌ಗಳು ಒಂದರಂತೆ ಮತ್ತೊಂದು ಇರುವುದಿಲ್ಲ. ಹಾಗಾಗಿ, ಅದರ ಮೈ ಮೇಲಿರುವ ಪಟ್ಟೆಗಳು (ಸ್ಟ್ರೈಪ್ಸ್) ಒಂದರಂತೆ ಇನ್ನೊಂದಕ್ಕೆ ಇರುವುದಿಲ್ಲ. ಹೇಗೆ ಮನುಷ್ಯನ ಬೆರಳಿನ ಗುರುತುಗಳು ಒಬ್ಬರಿಂದ ಒಬ್ಬರಿಗೆ ಹೋಲುವುದಿಲ್ಲವೋ ಅದೇ ರೀತಿಯಲ್ಲಿ ಇವುಗಳ ಮೈಮೇಲಿನ ಪಟ್ಟೆಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರಲಿವೆ. ಇದರಿಂದಾಗಿ ರಾಜ್ಯದ ಹುಲಿ ಸಂರಕ್ಷಿತ ತಾಣದ ದಾಖಲೆ ವಿಭಾಗಕ್ಕೆ ಕಳುಹಿಸಿರುವ ಗುಬ್ಬಿ ಬಳಿ ಸಿಕ್ಕ ಗಂಡು ಹುಲಿಯ ಪಟ್ಟೆ ಹೋಲಿಕೆ ಆಗಿಲ್ಲ. ಹಾಗೆಂದ ಮಾತ್ರಕ್ಕೆ ಇದು ಹೊರರಾಜ್ಯದಿಂದ ಬಂದಿದೆ ಎಂಬ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂಬುದು ಮೂರ್ತಿ ಅವರ ವಾದವಾಗಿದೆ.

    ನಮ್ಮ ಜಿಲ್ಲೆಯಲ್ಲಿ ಈವರೆಗೆ ಹುಲಿ ಗಣತಿ ಆಗಿಲ್ಲ. ಒಂದು ವೇಳೆ ಈ ಹುಲಿ ಮತ್ತೊಂದು ಕಡೆಯಿಂದ ಬಂದಿದ್ದರೆ ಬಲಿ ಪ್ರಾಣಿಗಳ ಅಲಭ್ಯತೆಯಿಂದ ನಿತ್ರಾಣವಾಗಿರಬೇಕಿತ್ತು. ಆದರೆ, ಸುಮಾರು 5-6 ವರ್ಷದ ಮಧ್ಯ ವಯಸ್ಸಿನ ಗಂಡು ಹುಲಿ ಸಂಪೂರ್ಣ ಆರೋಗ್ಯವಾಗಿದ್ದು 165 ಕೆ.ಜಿ ಭಾರವಿತ್ತು. ದೇಹದ ಮೇಲೆ ಯಾವುದೇ ಗಾಯವಾಗಲಿ ಅಥವಾ ಗುಂಡೇಟಾಗಲಿ ಇರಲಿಲ್ಲ. ಗಂಡು ಹುಲಿಯಾದ್ದರಿಂದ ಹೊಸ ಪ್ರದೇಶ (ಟೆರಿಟರಿ) ಹುಡುಕುತ್ತಾ ಬಂದಿರಬಹುದು. ಇನ್ನೂ ಅನೇಕ ಹುಲಿಗಳು ಈ ಪ್ರದೇಶದಲ್ಲಿ ವಾಸವಾಗಿರಬೇಕು. ಸತತ ಹುಲಿಯ ಕುರುಹುಗಳು ಹಿಂದಿನಿಂದ ದಾಖಲಾಗಿರುವುದರಿಂದ ಇಲ್ಲಿಯೇ ವಾಸವಿರಲಿಲ್ಲ ಎನ್ನಲು ಸಾಧ್ಯವಿಲ್ಲ. ಈ ಎಲ್ಲ ಜಟಿಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು ಎನ್ನುತ್ತಾರೆ ಟಿವಿಎನ್ ಮೂರ್ತಿ.

    1950ರಲ್ಲೇ ನರಭಕ್ಷಕ ಹುಲಿ ಕಂಡುಬಂದಿತ್ತು ! ತುಮಕೂರಿಗೆ ತನ್ನದೇ ಆದ ಹುಲಿಯ ಇತಿಹಾಸವಿದೆ. ಸ್ಕಾಟ್ ಲ್ಯಾಂಡ್ ಮೂಲದ ಖ್ಯಾತ ಬೇಟೆಗಾರ ಹಾಗೂ ಬರಹಗಾರ ಕೆನೆನ್‌ಹೆಡರ್ಸನ್ 1950ರಲ್ಲಿ ಬರೆದಿರುವ ಪುಸ್ತಕದಲ್ಲಿ ದೇವರಾಯನ ದುರ್ಗ ಅರಣ್ಯದಲ್ಲಿ ನರಭಕ್ಷಕ ಹುಲಿಯ ಬಗ್ಗೆ ದಿ ಹಿರಿಮಿಟ್ ಆಫ್ ದೇವರಾಯನ ದುರ್ಗ ಎಂಬ ಶೀರ್ಷಿಕೆಯಲ್ಲಿ ದಾಖಲಿಸಿದ್ದು ಇದೊಂದು ಅಧಿಕೃತ ದಾಖಲೆಯಾಗಿದೆ ಎನ್ನುತ್ತಾರೆ ಟಿವಿಎನ್ ಮೂರ್ತಿ.
    ಆ ನಂತರ ಜಿಲ್ಲೆಯಲ್ಲಿ ಹುಲಿ ಸಂತತಿ ಇರುವ ಬಗ್ಗೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ 2007ರಲ್ಲಿ ಪಂಡಿತನಹಳ್ಳಿ ನಡುತೋಪಿನಲ್ಲಿ ಹುಲಿಯ ಹೆಜ್ಜೆ ಗುರುತಿಸಿ ವರದಿ ಮಾಡಿತ್ತು. ಅದಕ್ಕೂ ಮೊದಲು 1996ರಲ್ಲಿ ಅಂದಿನ ಡಿಸಿಎಫ್ ಡಾ. ಉದಯ ವೀರ್ ಸಿಂಗ್ ಹುಲಿ ಕಂಡಿದ್ದಾಗಿ ವರದಿ ಮಾಡಿದ್ದರು. 2001ರಲ್ಲಿ ಅನುಮಪನಹಳ್ಳಿಯ ದನಕಾಯುವ ಹುಡುಗ ಹುಲಿಯೊಂದು ತನ್ನ ಹಸುವನ್ನು ಕೊಲ್ಲುತ್ತಿದ್ದ ಘಟನೆ ಕಣ್ಣಾರೆ ಕಂಡಿದ್ದನ್ನೂ ದಾಖಲಿಸಲಾಗಿತ್ತು. 2009ರಲ್ಲಿ ಎಸಿಎಫ್ ಶ್ರೀನಿವಾಸ್, ಆರ್‌ಎಫ್‌ಒ ಎಂ.ಎನ್.ನಾಯಕ್ ಒಂದು ಹೆಣ್ಣು ಹಾಗೂ ಎರಡು ಹುಲಿ ಮರಿಗಳನ್ನು ನೋಡಿದ್ದ ದಾಖಲೆ ಸಹ ಇದೆ.

    ಅರಣ್ಯದಲ್ಲಿ ಸತ್ತ ಹುಲಿ ಜಿಲ್ಲೆಯದೇ ! ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಸಲಹೆಗಾರ ಅಭಿಮತ

    ರಾಜ್ಯದ ಡೇಟಾದಲ್ಲಿರುವ ಹುಲಿ ಚಿತ್ರಗಳಲ್ಲಿ ಮೃತ ಹುಲಿ ಇಲ್ಲ. ಅಂದರೆ ಇದು ಇದೇ ಪ್ರದೇಶದಲ್ಲಿ ವಾಸವಾಗಿರಬಹುದು. ಜಿಲ್ಲೆಯಲ್ಲಿ ಚಿರತೆ ಕಾಟದ ನಡುವೆ ಈ ಹುಲಿಯ ಸದ್ದು ಕೇಳಿಸದೇ ಇರುವ ಸಾಧ್ಯತೆಗಳಿವೆ. ಯಾರಾದರೂ ಕೊಂದು ಹುಲಿಯನ್ನು ತಂದು ಹಾಕಿರಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಮೃತ ಹುಲಿಯನ್ನು ಎತ್ತಲು ಕನಿಷ್ಠ 8 ಜನ ಬೇಕು. ಅದರ ದೇಹ ದೊರೆತ ಸ್ಥಳದಲ್ಲಿ ಮನುಷ್ಯರ ಚಲನವಲನದ ಯಾವುದೇ ಕುರುಹು ಪತ್ತೆಯಾಗಿಲ್ಲ.
    ಟಿವಿಎನ್ ಮೂರ್ತಿ, ಸಲಹೆಗಾರರು, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts