More

    ಜೀವನದ ಉದ್ದೇಶ ಸಮಕಾಲೀನ ದೃಷ್ಟಿಕೋನ

    ಜೀವನದ ಉದ್ದೇಶ ಸಮಕಾಲೀನ ದೃಷ್ಟಿಕೋನಜೀವನ ಒಂದು ಪಯಣವಿದ್ದಂತೆ. ಗಮ್ಯ ಮುಟ್ಟುವ ಮೊದಲು ಮಧ್ಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ದಾಟುವ ರೀತಿಯಲ್ಲಿಯೇ, ಪರಮೋದ್ದೇಶವಾದ ಮೋಕ್ಷವನ್ನು ತಲುಪಲು ಹಲವು ಮಧ್ಯಂತರ ಉದ್ದೇಶಗಳು ಸಾಧಕನಿಗೆ ಸಹಾಯ ಮಾಡುತ್ತವೆ.

    ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ- ಈ ಚತುರ್ವಿಧ ಪುರುಷಾರ್ಥಗಳು ಜೀವನದ ಉದ್ದೇಶಗಳೆಂದು ಸನಾತನ ಧರ್ಮವು ಸಾರಿದೆ. ಎಂದರೆ, ಧರ್ಮದ ಆಧಾರದಲ್ಲಿ ಜೀವನ, ಧರ್ಮದ ಚೌಕಟ್ಟಿನಲ್ಲಿ ಧನ ಸಂಪಾದನೆ, ಧರ್ಮಬದ್ಧವಾದ ಕಾಮನೆಗಳ ಪೂರೈಕೆ ಹಾಗೂ ಕೊನೆಗೆ ಎಲ್ಲಾ ಮೋಹಗಳಿಂದ ವಿಮುಕ್ತಿ- ಇವು ಮಾನವ ಜೀವನದ ಉದ್ದೇಶಗಳು. ಭಾರತ ದೇಶದಲ್ಲಿ ಜನಸಾಮಾನ್ಯನೂ, ‘ಮಾಯೆ’ ಮತ್ತು ‘ಮೋಕ್ಷ’- ಈ ಸಿದ್ಧಾಂತಗಳ ತಿಳಿವಳಿಕೆ ಹೊಂದಿದ್ದು, ಲೌಕಿಕ ಜೀವನದಲ್ಲಿ ಯಾವುದೋ ಸಂಕಷ್ಟವು ಎದುರಾಗಿ ಭ್ರಮನಿರಸನಗೊಂಡಾಗ ಈ ಸಿದ್ಧಾಂತಗಳನ್ನು ಉಚ್ಚರಿಸುವುದನ್ನು ನಾವು ಕಾಣಬಹುದು! ಇದು ಕೆಲವೊಮ್ಮೆ ಹಾಸ್ಯಾಸ್ಪದವಾಗಿ ಕಂಡರೂ, ಈ ಸಿದ್ಧಾಂತಗಳು ಅವನ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಅವನಿಗೆ ಅರಿವಿಲ್ಲದಂತೆಯೇ ಪ್ರಭಾವ ಬೀರುತ್ತವೆ.

    ಇತ್ತೀಚಿಗೆ ಉದ್ಯಮರಂಗದ ಒಬ್ಬ ನಾಯಕರು ನನ್ನಲ್ಲಿ ಒಂದು ಪ್ರಶ್ನೆ ಕೇಳಿದರು. ಅದು ಅವರು ಆ ಮೊದಲೇ ಹಲವು ಆಧ್ಯಾತ್ಮಿಕವಾದಿಗಳನ್ನು ಕೇಳಿದ್ದ ಪ್ರಶ್ನೆ: ‘ಜೀವನದ ಉದ್ದೇಶವೇನು? ಈಗ ನಾನು ಆ ಉದ್ದೇಶಕ್ಕೆ ಅನುಗುಣವಾಗಿ ಜೀವನ ನಡೆಸುತ್ತಿದ್ದೇನೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು?’. ಎಲ್ಲರಿಗೂ ಅನ್ವಯವಾಗುವ ಅವರ ಪ್ರಶ್ನೆಯ ಮೊದಲ ಭಾಗಕ್ಕೆ ನಮ್ಮ ಧರ್ಮಗ್ರಂಥಗಳ ಆಧಾರದಲ್ಲಿ ಉತ್ತರ ನೀಡಿ, ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ ಪ್ರಶ್ನೆಯ ಎರಡನೆಯ ಭಾಗಕ್ಕೆ ನನ್ನ ಅನುಭವವನ್ನೇ ಆಶ್ರಯಿಸಿದೆ. ಧರ್ಮಗ್ರಂಥಗಳ ಪ್ರಕಾರ, ಎಲ್ಲರ ಜೀವನದ ಪರಮೋದ್ದೇಶ ಮೋಕ್ಷ. ಎಂದರೆ, ಜೀವನದಲ್ಲಿ ಎಲ್ಲಾ ಮೋಹಗಳಿಂದ ವಿಮುಕ್ತನಾಗಿ ಅನಾಸಕ್ತಿಯಿಂದ ಫಲಾಪೇಕ್ಷೆಯಿಲ್ಲದೆ ಕರ್ತವ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಸಾಧನೆ. ಉತ್ತರವು ಸ್ಪಷ್ಟವಾಗಿದ್ದರೂ, ಬಹುತೇಕ ಮಂದಿಗೆ ಅದರ ಆಚರಣೆ ಕಷ್ಟಸಾಧ್ಯವೇ ಸರಿ!

    ಇನ್ನು ಪ್ರಶ್ನೆಯ ಎರಡನೆಯ ಭಾಗಕ್ಕೆ ಬರೋಣ. ಒಬ್ಬ ವ್ಯಕ್ತಿ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ, ತಾನು ಜೀವನದ ಪರಮೋದ್ದೇಶವನ್ನು ಸಾಧಿಸುವ ಪಥದಲ್ಲಿ ಮುಂದುವರಿಯುತ್ತಿದ್ದೇನೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ? ನನ್ನ ಪ್ರಕಾರ, ವ್ಯಕ್ತಿ ಪ್ರತಿ ಮುಂಜಾನೆ ಎದ್ದೇಳುವಾಗ ಅವನಲ್ಲಿ ತುಂಬು ಸ್ಪೂರ್ತಿ-ಉತ್ಸಾಹಗಳೊಂದಿಗೆ ಆ ದಿನ ತಾನು ಮಾಡಬೇಕಾದ ಕಾರ್ಯಗಳನ್ನು ಎದುರುನೋಡುವಂತಹ ಮನಃಸ್ಥಿತಿಯಿದ್ದು, ಬೇಸರ-ಆಯಾಸಗಳಿಲ್ಲದೆ ಸಂತೋಷವಾಗಿ ಆ ಕಾರ್ಯಗಳನ್ನು ದಿನಗಳಗಟ್ಟಲೆ ಮಾಡುತ್ತಿದ್ದಾನೆಂದರೆ, ಅವನು ಜೀವನೋದ್ದೇಶ ಸಾಧಿಸುವ ಸರಿಯಾದ ಮಾರ್ಗದಲ್ಲಿದ್ದಾನೆ! ಕಾಲ ಕಳೆದಂತೆ, ಅವನಿಗೆ ಸ್ಪೂರ್ತಿ ನೀಡುವ ಕಾರ್ಯಗಳಲ್ಲಿ ಬದಲಾವಣೆಯಾಗಬಹುದು. ಆದರೆ, ಆ ಬದಲಾವಣೆ ವಿಕಸನದ ಒಂದು ಸಹಜ ಪ್ರಕ್ರಿಯೆಯೇ ಹೊರತು, ಬೇಸರ-ಹತಾಶೆಗಳಿಂದುಂಟಾದ ಭಿನ್ನ ಆಶೆಗಳ ಪರಿಣಾಮವಲ್ಲ.

    ಹಾಗಾದರೆ, ಮೋಕ್ಷಸಾಧನೆಗೆ ವಿರೋಧವಾದ ಲೋಭ ಮತ್ತು ಕ್ರೌರ್ಯಗಳಿಂದ ಪ್ರೇರೇಪಿತರಾದ ಸಮಾಜಘಾತುಕ ಅಪರಾಧಿಗಳು ದುಷ್ಟಕಾರ್ಯಗಳನ್ನು ಬಹು ಉತ್ಸಾಹದಿಂದ ಮಾಡುತ್ತಿದ್ದರೆ, ಅವರಿಗೂ ಮೇಲಿನ ಉತ್ತರವು ಅನ್ವಯವಾಗುತ್ತದೆಯೇ? ಎಂದು ಯಾರಾದರೂ ಪ್ರಶ್ನಿಸಬಹುದು. ಈ ಪ್ರಶ್ನೆಗೆ ಉತ್ತರವನ್ನು ಮಹರ್ಷಿ ವಾಲ್ಮೀಕಿಯ ಜೀವನದ ನಿದರ್ಶನದೊಂದಿಗೆ ನೀಡಬಯಸುತ್ತೇನೆ. ವಾಲ್ಮೀಕಿಯ ಮೊದಲಿನ ಹೆಸರು ರತ್ನಾಕರನಾಗಿದ್ದು, ಕ್ರೂರಿಯಾದ ದರೋಡೆಕೋರನಾಗಿದ್ದ. ದಾರಿಯಲ್ಲಿ ಬರುವ ಪ್ರಯಾಣಿಕರನ್ನು ಕೊಂದು ಅವರ ಸ್ವತ್ತುಗಳನ್ನು ಅಪಹರಿಸುವುದೇ ಅವನ ವೃತ್ತಿಯಾಗಿತ್ತು. ಒಂದು ದಿನ ಆ ದಾರಿಯಲ್ಲಿ ಹೋಗುತ್ತಿದ್ದ ನಾರದ ಮಹರ್ಷಿಗಳನ್ನು ದೋಚಲು ರತ್ನಾಕರನು ಮುಂದಾದಾಗ, ಅವರು ಒಂದು ಪ್ರಶ್ನೆ ಕೇಳಿದರು, ‘ನೀನು ಏಕೆ ಇಂತಹ ಪಾಪಪೂರ್ಣ ಜೀವನ ನಡೆಸುತ್ತಿದ್ದೀಯೇ?’ ಯಾವುದೇ ಅಳುಕಿಲ್ಲದೆ ಅವನು, ‘ನನ್ನ ಕುಟುಂಬದ ಪೋಷಣೆಗಾಗಿ ಈ ವೃತ್ತಿಯನ್ನು ಅವಲಂಬಿಸಿದ್ದೇನೆ’ ಎಂದು ಉತ್ತರಿಸಿದನು. ಅದಕ್ಕೆ ಪ್ರತಿಯಾಗಿ ನಾರದರು, ‘ನಿನ್ನ ಪತ್ನಿ-ಪುತ್ರರು ನೀನು ಮಾಡುತ್ತಿರುವ ಈ ಪಾಪಕಾರ್ಯಗಳ ಫಲವನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆಯೇ?’ ಎಂದು ಪ್ರಶ್ನಿಸಿದರು. ‘ಖಂಡಿತಾ ಹೌದು’ ಎಂದುತ್ತರಿಸಿದ ರತ್ನಾಕರನಿಗೆ, ‘ಹಾಗಾದರೆ, ನಿನ್ನ ಪತ್ನಿ-ಪುತ್ರರನ್ನು ಕೇಳಿ ಬಾ’ ಎಂದು ನಾರದರು ಹೇಳಿದರು. ಮನೆಗೆ ತೆರಳಿದ ರತ್ನಾಕರನಿಗೆ ಪತ್ನಿಯಿಂದ ಅನಿರೀಕ್ಷಿತವಾಗಿ ಆಘಾತಕಾರಿ ಉತ್ತರ ಲಭಿಸಿತು, ‘ನಿನ್ನ ಪಾಪಗಳನ್ನು ಹಂಚಿಕೊಳ್ಳಲು ನಾವು ಸಿದ್ಧರಿಲ್ಲ! ನೀನು ಕುಟುಂಬದ ಯಜಮಾನನಾಗಿದ್ದು ನಮ್ಮನ್ನು ಪೋಷಿಸುವುದು ನಿನ್ನ ಕರ್ತವ್ಯವಷ್ಟೆ. ನೀನು ಅದಕ್ಕಾಗಿ ಮಾಡುವ ಕರ್ಮಗಳ ಸಾಧಕ-ಬಾಧಕಗಳು ನಿನ್ನವೇ!’ ಇದರಿಂದ ರತ್ನಾಕರನಿಗೆ ಜ್ಞಾನೋದಯವಾಗಿ ಅವನು ಮಹರ್ಷಿ ವಾಲ್ಮೀಕಿಯಾಗಿ ಮಾರ್ಪಟ್ಟ. ಪವಿತ್ರ ರಾಮಾಯಣವನ್ನು ರಚಿಸಿದ್ದು ಮಾತ್ರವಲ್ಲದೆ, ಸೀತಾಮಾತೆಯ ಅವಳಿಮಕ್ಕಳನ್ನು ಪೋಷಿಸಿ ಬೆಳೆಸಿದ ಪುಣ್ಯವೂ ಅವನದಾಯಿತು! ಅವನು ಮಾಡುತ್ತಿದ್ದ ಪಾಪಕಾರ್ಯಗಳೇ ಅವನಲ್ಲಿ ಆಧ್ಯಾತ್ಮಿಕ ಪರಿವರ್ತನೆಯನ್ನುಂಟುಮಾಡಿ ಜೀವನೋದ್ದೇಶ ಸಾಧಿಸಲು ನೆರವಾದವಲ್ಲವೇ?

    ಮುಂಡಕೋಪನಿಷತ್ತಿನಲ್ಲಿ ಹೇಳಿರುವಂತೆ:

    ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವೆದಮಾಯಾನ್ನಾಸ್ಱಕೃತಃ ಕೃತೇನ!

    ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್

    ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್!

    ‘ಲೌಕಿಕ ಕರ್ಮಗಳಿಂದ ಗಳಿಸಿದ ಫಲವು ಅಶಾಶ್ವತವಾಗಿದ್ದು, ಅದರಿಂದ ಜೀವನದ ಪರಮೋದ್ದೇಶವಾದ ಶಾಶ್ವತ ಬ್ರಹ್ಮಾನಂದವನ್ನು ಪಡೆಯಲು ಅಸಾಧ್ಯವೆಂದು ಮನಗಂಡ ಬ್ರಹ್ಮಪಿಪಾಸುವು ಮಾರ್ಗದರ್ಶನಕ್ಕಾಗಿ ಬ್ರಹ್ಮಜ್ಞಾನಿಯಾದ ಗುರುವನ್ನು ಆಶ್ರಯಿಸುತ್ತಾನೆ.’ ಈ ಸತ್ಯವನ್ನು ನಾವು ರತ್ನಾಕರನ ನಿದರ್ಶನದಲ್ಲಿ ಕಾಣಬಹುದು.

    ಜೀವನ ಒಂದು ಪಯಣವಿದ್ದಂತೆ. ಗಮ್ಯ ಮುಟ್ಟುವ ಮೊದಲು ಮಧ್ಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ದಾಟುವ ರೀತಿಯಲ್ಲಿಯೇ, ಪರಮೋದ್ದೇಶವಾದ ಮೋಕ್ಷವನ್ನು ತಲುಪಲು ಹಲವು ಮಧ್ಯಂತರ ಉದ್ದೇಶಗಳು ಸಾಧಕನಿಗೆ ಸಹಾಯ ಮಾಡುತ್ತವೆ. ಪ್ರಾರಂಭದಿಂದ ಗಮ್ಯದವರೆಗೆ ಯಾವ ರಸ್ತೆಯೂ ಸಂಪೂರ್ಣ ನೇರವಾಗಿರುವುದಿಲ್ಲವಷ್ಟೆ. ಪಯಣಿಗನು ಗಮ್ಯಸ್ಥಾನಕ್ಕೆ ರಸ್ತೆಯಲ್ಲಿ ಸುತ್ತಿ ಬಳಸಿ ಹೋಗುವ ರೀತಿಯಲ್ಲಿಯೇ, ಜೀವನದ ಪಯಣವೂ ಸುತ್ತಿ ಬಳಸಿ ಕೊನೆಸಾಗಿ ಮೋಕ್ಷದ ಗಮ್ಯ ತಲುಪುತ್ತದೆ. ಕೆಲವೊಮ್ಮೆ ವ್ಯಕ್ತಿಯ ಜೀವನದ ಮಧ್ಯಂತರ ಉದ್ದೇಶಗಳು ಅಂತಿಮ ಉದ್ದೇಶವಾದ ಮೋಕ್ಷಸಾಧನೆಗಿಂತ ಭಿನ್ನವಾಗಿ ತೋರಬಹುದು. ಆದರೆ, ಮುಂದೆ ಸಾಗಿದಂತೆ ಇಂತಹ ಮಧ್ಯಂತರ ಉದ್ದೇಶಗಳು ಅಂತಿಮವಾಗಿ ಜೀವನದ ಪರಮೋದ್ದೇಶದೆಡೆಗೆ ಕೊಂಡೊಯ್ಯುತ್ತವೆ. ಒಟ್ಟಿನಲ್ಲಿ, ವ್ಯಕ್ತಿಯು ಜೀವನೋದ್ದೇಶದ ಸಾಧನೆಯ ಸರಿಯಾದ ಪಥದಲ್ಲಿದ್ದಾನೆಂಬುದನ್ನು ತಿಳಿಯಲು ಇರುವ ಸುಲಭ ವಿಧಾನವೆಂದರೆ, ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು/ಕಾರ್ಯಗಳನ್ನು ತುಂಬು ಉತ್ಸಾಹ-ಸಂತೋಷಗಳಿಂದ ಯಾವುದೇ ಬೇಸರ-ಆಯಾಸಗಳಿಲ್ಲದೆ ಮಾಡುತ್ತಿರುವುದೇ ಆಗಿದೆ!

    ಅಂತಿಮವಾಗಿ ಪ್ರತಿ ಜೀವಿಯೂ ಜೀವನದ ಪರಮಗಮ್ಯವಾದ ಮೋಕ್ಷವನ್ನು ತಲುಪುವುದಂತೂ ಖಂಡಿತ. ಇದನ್ನೇ ಭಗವಾನ್ ಶ್ರೀಕೃಷ್ಣನು, ‘ಕಾಲೇನಾತ್ಮನಿ ವಿಂದತಿ’- ‘ಕಾಲಕ್ರಮೇಣ ವ್ಯಕ್ತಿಯು ಗಮ್ಯವನ್ನು ತಲುಪುತ್ತಾನೆ’ ಎಂದು ಘೊಷಿಸಿದ್ದಾನೆ. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ತನ್ನ ಹೃದಯದ ಪ್ರೇರೇಪಣೆಗನುಸಾರವಾಗಿ ಕಾರ್ಯವೆಸಗುತ್ತಾ ಉತ್ಸಾಹ-ಸಂತೋಷಗಳೊಂದಿಗೆ ಮುಂದೆ ಸಾಗಬೇಕಾದುದು ಮುಖ್ಯ. ಸಂಗೀತಗಾರ, ಇಂಜಿನಿಯರ್, ವಿಜ್ಞಾನಿ, ಅಧ್ಯಾತ್ಮ ಬೋಧಕ ಹೀಗೆ ಯಾರೇ ಆದರೂ ಅವರವರ ಕರ್ತವ್ಯಗಳನ್ನು ಸಂತೋಷದಿಂದ ಮಾಡುತ್ತಿದ್ದರೆ ಸಾಕು, ಒಂದಲ್ಲ ಒಂದು ದಿನ ಎಲ್ಲರೂ ಪರಮಗಮ್ಯವನ್ನು ತಲುಪಲೇಬೇಕಷ್ಟೆ!

    ಭಗವದ್ಗೀತೆಯಲ್ಲಿ ಜಗದ್ಗುರು ಕೃಷ್ಣನು ಸಾರಿರುವಂತೆ:

    ಶ್ರೇಯಾನ್ ಸ್ವಧಮೋ ವಿಗುಣಃ ಪರಧರ್ವತ್ ಸ್ವನುಷ್ಠಿತಾತ್ !

    ಸ್ವಧಮೇ ನಿಧನಂ ಶ್ರೇಯಃ ಪರಧಮೋ ಭಯಾವಹಃ !!

    ‘ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಸ್ವಭಾವಜನ್ಯ ಕರ್ತವ್ಯವನ್ನು), ಅದು ದೋಷಪೂರ್ಣವೆಂದು ಕಂಡುಬಂದರೂ, ಬಿಡದೆ ನಿರ್ವಹಿಸುವುದರಲ್ಲಿಯೇ ಅವನ ಶ್ರೇಯಸ್ಸಿದೆ. ಇನ್ನೊಬ್ಬನ ಧರ್ಮವು ತನ್ನದಕ್ಕಿಂತ ಉತ್ತಮವೆಂದು ಕಂಡರೂ ಸ್ವಧರ್ಮದಿಂದ ವಿಚಲಿತನಾಗಬಾರದು. ಸ್ವಧರ್ಮದಲ್ಲಿ ಮರಣ ಲೇಸು. ಪರಧರ್ಮವು ಭಯದಿಂದ ಕೂಡಿದೆ.’

    ಹೀಗೆ, ಪ್ರತಿಯೊಬ್ಬರೂ ತಂತಮ್ಮ ಸ್ವಭಾವಕ್ಕನುಗುಣವಾಗಿ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಖಂಡಿತವಾಗಿ ಜೀವನದ ಪರಮಗಮ್ಯ ತಲುಪುವುದು ಮಾತ್ರವಲ್ಲದೆ, ಸುನಾಯಾಸವಾಗಿ ಆನಂದಮಯ ಜೀವನ ನಡೆಸಬಹುದು. ಅಲ್ಲದೆ, ಅಂತಹ ಆನಂದದಿಂದಾಗಿ ಅವರು ಕರ್ತವ್ಯನಿರ್ವಹಣೆಯಲ್ಲಿ ಸಾಧಾರಣತೆ (mediocrity) ಯನ್ನು ಮೀರಿ, ಶ್ರೇಷ್ಠತೆ (excellence) ಪಡೆಯುತ್ತಾರೆ. ಅವರ ಶ್ರೇಷ್ಠಮಟ್ಟದ ಸೇವೆಯಿಂದ ಸಮಾಜಕ್ಕೂ ಲಾಭವಾಗುತ್ತದೆ. ಇದನ್ನೇ ಗೀತಾಚಾರ್ಯನು, ‘ಯೋಗಃ ಕರ್ಮಸು ಕೌಶಲಮ್-‘ಕರ್ಮಕುಶಲತೆಯೇ ಯೋಗ ’ಎಂದು ಹೇಳಿದ್ದಾನೆ. ಆದ್ದರಿಂದ ನಮ್ಮ ಕಾರ್ಯಗಳನ್ನು ಸಂತೋಷವಾಗಿ, ಶ್ರೇಷ್ಠ ರೀತಿಯಲ್ಲಿ ಮಾಡುವುದೇ ಪರಮಗಮ್ಯದೆಡೆಗೆ ನಮ್ಮ ಮೊದಲ ಹೆಜ್ಜೆ!

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts