More

    ವಿಜಯವಾಣಿ ದಶಕದ ಯಶೋಗಾಥೆಗೆ ಶ್ಲಾಘನೆ ಅಭಿನಂದನೆ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ರಾಜ್ಯದ ಜನಪ್ರಿಯ ಪತ್ರಿಕೆ ವಿಜಯವಾಣಿ ದಶಮಾನೋತ್ಸವದ ಹೊಸ್ತಿಲಲ್ಲಿದೆ. 2012ರ ಏಪ್ರಿಲ್ 1ರಂದು ಪ್ರಾರಂಭವಾದ ಪತ್ರಿಕೆ, ಅತಿ ಕಡಿಮೆ ಅವಧಿಯಲ್ಲಿ ರಾಜ್ಯದ ನಂ.1 ದಿನಪತ್ರಿಕೆಯಾಗಿ ರೂಪುಗೊಂಡ ಯಶೋಗಾಥೆ ಸ್ಪೂರ್ತಿದಾಯಕ.

    ಸಾರಿಗೆ ಉದ್ಯಮದಲ್ಲಿ ಮನೆಮಾತಾಗಿರುವ ವಿಜಯ ಸಂಕೇಶ್ವರ ಅವರು ಪತ್ರಿಕೋದ್ಯಮದಲ್ಲಿಯೂ ಹೊಸ ಕ್ರಾಂತಿಯನ್ನೇ ಮಾಡಿದವರು. ಹೊಸ ಓದುಗರನ್ನು ಸೃಷ್ಟಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಇವರು ಪ್ರಾರಂಭಿಸಿದ ವಿಜಯವಾಣಿ ದಿನಪತ್ರಿಕೆಯು ಹತ್ತು ಆವೃತ್ತಿಗಳೊಂದಿಗೆ ಕರ್ನಾಟಕದಾದಂತ್ಯ ಓದುಗರನ್ನು ಹೊಂದಿದೆ. ಪತ್ರಿಕೆಯು ಸಕಾರಾತ್ಮಕ ಹಾಗೂ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತೆಯೇ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಗಳು, ಜನರು ಪತ್ರಿಕೆಯೊಂದಿಗೆ ಗುರುತಿಸಿಕೊಳ್ಳಲು ಪೂರಕವಾಗಿವೆ.

    ಪತ್ರಿಕೆಗಳು ಇಂದು ಉದ್ಯಮವಾಗಿ ಬೆಳೆದಿದ್ದರೂ, ಜನಸೇವೆಯಲ್ಲಿ, ಸಮಾಜದ ಉನ್ನತಿಯಲ್ಲಿ ವಹಿಸುವ ಪಾತ್ರ ಅನನ್ಯವಾದುದು. ವಿಜಯವಾಣಿ ಪತ್ರಿಕೆಯು ಮೆರೆಯುತ್ತಿರುವ ಸಾಮಾಜಿಕ ಕಳಕಳಿ ಇದಕ್ಕೆ ಉತ್ತಮ ನಿದರ್ಶನ. ಪತ್ರಿಕೆಯವರು ಹಮ್ಮಿಕೊಳ್ಳುವ ಫೋನ್-ಇನ್ ಕಾರ್ಯಕ್ರಮ, ಜನತಾ ದರ್ಶನ ಮೊದಲಾದ ಕಾರ್ಯಕ್ರಮಗಳು, ಪ್ರಕಟವಾಗುವ ಸಾಮಾಜಿಕ ಕಳಕಳಿಯ ವರದಿಗಳು, ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಿವೆ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಈ ಆಶಯ ಅಭಿನಂದನೀಯ. ವಿಜಯವಾಣಿಯಲ್ಲಿ ಪ್ರಕಟವಾಗುವ ಜಗತ್ತಿನ ಆಗುಹೋಗುಗಳ ಕುರಿತ ಸಮಚಿತ್ತದ ವಿಶ್ಲೇಷಣೆಗಳು, ರೋಚಕತೆಯಿಂದಲೇ ಓದುಗರನ್ನು ಹಾಗೂ ಪ್ರೇಕ್ಷಕರನ್ನು ಪಡೆಯಲು ಸಾಧ್ಯ ಎಂಬ ಭ್ರಮೆಯನ್ನು ಸುಳ್ಳು ಮಾಡುವಂತಿದೆ.

    ಮನರಂಜನೆ, ಮಾಹಿತಿಗಳ ಆಗರವಾಗಿರುವ ಲೇಖನಗಳು, ದೈನಂದಿನ ಚಟುವಟಿಕೆ, ಆರೋಗ್ಯ, ಹವ್ಯಾಸ ಮೊದಲಾದವುಗಳ ಕುರಿತ ಉಪಯುಕ್ತ ಮಾಹಿತಿಗಳ ಮೂಲಕ ಪತ್ರಿಕೆಯು ಓದುಗರೊಂದಿಗೆ ಆಪ್ತ ಬಾಂಧವ್ಯವನ್ನು ಬೆಳೆಸಿಕೊಂಡಿದೆ. ನಮ್ಮ ಸಂಸ್ಕೃತಿ, ಪರಂಪರೆಗಳ ಹಿರಿಮೆಯನ್ನು ಯುವಜನರಿಗೆ ತಿಳಿಸುವುದು, ಧಾರ್ವಿುಕ, ಆಧ್ಯಾತ್ಮಿಕ ವಿಷಯಗಳ ಕುರಿತು ಓದುಗರ ಅರಿವಿನ ವಿಸ್ತಾರವನ್ನು ಹೆಚ್ಚಿಸುವ ಪ್ರಬುದ್ಧ ಲೇಖನಗಳು, ಮಹಿಳೆಯರು, ಮಕ್ಕಳ ಅಭಿರುಚಿಗೆ ತಕ್ಕ ವಿಷಯಗಳ ಹೂರಣದೊಂದಿಗೆ ವಿಜಯವಾಣಿಯು ಸಂಗ್ರಹ ಯೋಗ್ಯ ಪತ್ರಿಕೆಯಾಗಿ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಅತಿ ಎಚ್ಚರಿಕೆಯಿಂದ ವಿಷಯಗಳನ್ನು ಆಯ್ದು, ಸುಂದರ ವಿನ್ಯಾಸದಲ್ಲಿ ಆಕರ್ಷಕವಾಗಿ ಪತ್ರಿಕೆಯನ್ನು ಕಟ್ಟಿಕೊಡಲು ವಹಿಸುವ ವಿಜಯವಾಣಿ ಪರಿವಾರದ ಪ್ರತಿ ಸದಸ್ಯನ ಪ್ರಯತ್ನವೂ ಶ್ಲಾಘನೀಯ.

    ಸಕಾರಾತ್ಮಕ ಸುದ್ದಿ ಹಾಗೂ ವಸ್ತುನಿಷ್ಠ ವರದಿಗಳಿಂದಾಗಿ ನನಗೂ ವಿಜಯವಾಣಿ ದಿನಪತ್ರಿಕೆ ಓದಲು ಇಷ್ಟವೆನಿಸುತ್ತದೆ. ರೋಚಕತೆಗೆ ಮಹತ್ವ ನೀಡದೆ, ನಿಷ್ಪಕ್ಷಪಾತ ಲೇಖನಗಳಿಂದ ಪತ್ರಿಕೆ ತನ್ನದೇ ಛಾಪು ಮೂಡಿಸಿದೆ. ’ದಿನಪತ್ರಿಕೆಗಳ ಏಕೈಕ ಗುರಿ ಜನ ಸೇವೆ’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಅದರಂತೆ ಸಮಷ್ಟಿಯ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಿಕೆ ಕಾರ್ಯೂೕನ್ಮುಖವಾಗಿದೆ. ಎಲ್ಲ ವಯೋಮಾನದವರ ಆಸಕ್ತಿ, ಬುದ್ಧಿ-ಭಾವಗಳಿಗೆ ಕಸುವು ತುಂಬುವ ಕಾಯಕವನ್ನು ವಿಜಯವಾಣಿ ಪತ್ರಿಕೆಯು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.

    ಅಸ್ತಿತ್ವಕ್ಕೆ ಬಂದ 27 ತಿಂಗಳಲ್ಲೇ ನಂ.1 ಸ್ಥಾನಕ್ಕೇರಿದ ಪತ್ರಿಕೆಯು ಇಂದಿಗೂ ತನ್ನ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದೆ. ಇದರಲ್ಲಿ ಗೆಳೆಯ ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರರ ದೂರದೃಷ್ಟಿ, ಚಾಣಾಕ್ಷತೆ ಹಾಗೂ ವೃತ್ತಿಪರತೆ ಎದ್ದು ಕಾಣುತ್ತದೆ. ಡಿಜಿಟಲ್ ಮಾಧ್ಯಮಗಳು ಮುದ್ರಣ ಮಾಧ್ಯಮಗಳ ಅಸ್ತಿತ್ವಕ್ಕೆ ಅಪಾಯವೊಡ್ಡುತ್ತಿವೆ ಎಂಬ ಹುಯಿಲೆದ್ದಿರುವ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮವನ್ನೂ ಬಳಕೆ ಮಾಡಿಕೊಂಡು ಜನರಿಗೆ ಇನ್ನಷ್ಟು ಹತ್ತಿರವಾಗುವಲ್ಲಿ ವಿಜಯವಾಣಿ ಯಶಸ್ವಿಯಾಗಿದೆ.

    ಪತ್ರಿಕೆಯ ಯಶಸ್ಸಿನ ಪಯಣ ಬಹುಕಾಲ, ಬಹುದೂರ ಸಾಗಲಿ. ತನ್ನ ಮೌಲಿಕ ಪ್ರಕಟಣೆಗಳ ಮೂಲಕ ಚಿಂತನೆಯನ್ನು ಇನ್ನಷ್ಟು ಪ್ರಚೋದಿಸುವ ಪತ್ರಿಕೆಯು ಜನರಿಗೆ ಇನ್ನಷ್ಟು ಹತ್ತಿರವಾಗಲಿ ಎಂದು ಹಾರೈಸುತ್ತೇನೆ.

    ಮೊದಲ ಹೆಜ್ಜೆ

    ವಿಜಯವಾಣಿ ದಶಕದ ಯಶೋಗಾಥೆಗೆ ಶ್ಲಾಘನೆ ಅಭಿನಂದನೆ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
    2012ರ ಏಪ್ರಿಲ್ 1, ಶ್ರೀ ರಾಮನವಮಿಯ ಶುಭದಿನದಂದು ಬೆಂಗಳೂರಿನಲ್ಲಿ ‘ವಿಜಯವಾಣಿ’ ದಿನಪತ್ರಿಕೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ವಿಆರ್​ಎಲ್ ಮೀಡಿಯಾ ಲಿಮಿಟೆಡ್​ನ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಲಲಿತಾ ಸಂಕೇಶ್ವರ, ವಾಣಿ ಸಂಕೇಶ್ವರ, ಪತ್ರಕರ್ತ ರವಿ ಬೆಳಗೆರೆ, ‘ವಿಜಯವಾಣಿ’ ಮೊದಲ ಸಂಪಾದಕ ತಿಮ್ಮಪ್ಪ ಭಟ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts