More

    ಸೌಲಭ್ಯವಂಚಿತ ಕಾಲನಿ: ಸಂಪರ್ಕ ರಸ್ತೆ ಅಭಿವೃದ್ಧಿ ಮರೀಚಿಕೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಬೈಂದೂರು ವಿಧಾನಸಭಾ ಕ್ಷೇತ್ರ ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳಮಕ್ಕಿ ಎಸ್‌ಸಿ ಎಸ್‌ಟಿ ಕಾಲನಿಗೆ ಮೂಲಸೌಲಭ್ಯ, ಸಂಪರ್ಕ ರಸ್ತೆ ಇಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆ.

    ಕಟ್ಟಿನಮಕ್ಕಿ ರೈಲ್ವೆ ಸೇತುವೆಯಿಂದ ಹೆಗ್ಗಳಮಕ್ಕಿ ಕಾಲನಿಗೆ ಸಂಪರ್ಕ ಕಲ್ಪಿಸಲು ಮಣ್ಣಿನ ರಸ್ತೆ ಇದೆ. ಇದು ಮಳೆಗಾಲದಲ್ಲಿ ಕೆಸರು ಮಡ್ಡಿಯಿಂದ ತುಂಬಿ ಸಂಚಾರ ಬಂದ್ ಆಗಿ, ಆಚಾರಮಕ್ಕಿ ಮದಗದ ದಂಡೆಯಂತೂ ಕಂಬಳಗದ್ದೆಯಂತಾಗುತ್ತದೆ. ಕಾಲನಿ ನಿವಾಸಿಗಳು ಪ್ರತಿದಿನ ಐದಾರು ಕಿ.ಮೀ. ಸುತ್ತಿ ಬಳಸಿ ನಿತ್ಯದ ಕೂಲಿ ಕೆಲಸಕ್ಕೆ ಹೋಗಬೇಕು. ಕಟ್ಟಿನಮಕ್ಕಿ ರೈಲ್ವೆ ಸೇತುವೆಯಿಂದ ಈಗಿರುವ ರಸ್ತೆ ಅಭಿವೃದ್ಧಿ ಮಾಡಿದರೆ ಕಾಲನಿಗೆ ಸಂಪರ್ಕ ಸುಲಭವಾಗುತ್ತದೆ. ಕಾಲನಿಯಲ್ಲಿ 5 ಎಸ್‌ಸಿ ಹಾಗೂ 4 ಎಸ್‌ಟಿ ಮನೆಗಳಿದ್ದು, ಎಲ್ಲರೂ ಕೂಲಿ ಕಾರ್ಮಿಕರು. ಇವರು ರಸ್ತೆ ಸಮಸ್ಯೆಯಿಂದ ಸಂಚಾರಕ್ಕಾಗಿಯೇ ಹೆಚ್ಚಿನ ಸಮಯ ವ್ಯರ್ಥ ಮಾಡುವಂತಾಗಿದೆ.\

    ಸಮಾಜ ಕಲ್ಯಾಣ ಇಲಾಖೆ ಸ್ಪಂದನೆ: ಕಾಲನಿಯಲ್ಲಿ ಸಂಪರ್ಕ ವ್ಯವಸ್ಥೆಯೇ ಪ್ರಮುಖ ಸಮಸ್ಯೆ. ಕಟ್ಟಿನಮಕ್ಕಿ ಹೆಗ್ಗಳಮಕ್ಕಿ ಮೂಲಕ ಕಾಲನಿಗೆ ಸಂಪರ್ಕ ಕಲ್ಪಿಸಿದರೆ ಸುತ್ತು ಬಳಸಿ ಸಂಚಾರ ತಪ್ಪುತ್ತದೆ. ಕಾಲನಿಯ ಸಮಸ್ಯೆ ಕುರಿತು ವಿಜಯವಾಣಿ ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಗಮನಕ್ಕೆ ತಂದಿತ್ತು. ಸ್ಪಂದಿಸಿದ ಅವರು, ಕಾಲನಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಕಾಲನಿ ಕುರಿತು ವರದಿ ಸಲ್ಲಿಸುವಂತೆ ಹಕ್ಲಾಡಿ ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು. ಕುಡಿಯುವ ನೀರು, ಶಿಥಿಲ ಮನೆಗಳ ಬಗ್ಗೆಯೂ ಜನ ಗಮನ ಸೆಳೆದರು. ಹಕ್ಲಾಡಿ ಗ್ರಾಪಂ ಮಾಜಿ ಸದಸ್ಯ ವಾಸುದೇವ ಪುರಾಣಿಕ್, ಸುಭಾಷ್ ಭಂಡಾರಿ, ಹಕ್ಲಾಡಿ ಗ್ರಾಪಂ ಶೇಖರ ಬೆಳೆಗಾರ, ರತ್ನಾಕರ, ಗುತ್ತಿಗೆದಾರ ಗಾಣದಹಕ್ಲು ಉದಯ ಕುಮಾರ್ ಶೆಟ್ಟಿ ಮುಂತಾದವರು ಈ ಸಮದರ್ಭ ಹಾಜರಿದ್ದರು.

    ಕೂಲಿ ಕೆಲಸಕ್ಕೆ ಹೋಗಬೇಕಾದ ನಾವು ಸಂಪರ್ಕ ರಸ್ತೆಯಿಲ್ಲದೆ ಸುತ್ತಿ ಬಳಸಿ ಹೋಗಬೇಕು. ಮಾಣಿಕೊಳಲು ಮೂಲಕ ಹೋಗಬಹುದಾದರೂ ವಾಹನ ವ್ಯವಸ್ಥೆ ಸರಿಯಾಗಿಲ್ಲದೆ ಕಟ್ಟಿನಮಕ್ಕಿ ರೈಲ್ವೆ ಸೇತುವೆ ಸೇರಿ ಅಲ್ಲಿಂದ ಕೆಲಸಕ್ಕೆ ಹೋಗಬೇಕಾದ ಸ್ಥಳ ಸೇರಬೇಕು. ಕಾಲನಿಗೆ ಕಟ್ಟಿನಮಕ್ಕಿ ರೈಲ್ವೆ ಸೇತುವೆಯಿಂದ ಸರ್ವಋತು ರಸ್ತೆ ಮಾಡಿದರೆ ಸಂಚಾರ ಸಲೀಸಾಗಲಿದೆ.
    ಪೂರ್ಣಿಮಾ
    ಹೆಗ್ಗಳಮಕ್ಕಿ ಎಸ್‌ಸಿ ಎಸ್‌ಟಿ ಕಾಲನಿ ನಿವಾಸಿ

    ಕಾಲನಿಯಲ್ಲಿ ಬಾವಿಯಿದ್ದರೂ ನೀರಿರುವುದಿಲ್ಲ. ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಬೇಕು. ಮನೆ ಶಿಥಿವಾಗಿದ್ದು ಐಟಿಡಿಪಿ ಮೂಲಕ ಹೊಸ ಮನೆ ಮಂಜೂರು ಮಾಡಿಕೊಡಬೇಕು. ಜಾಗವಿದ್ದರೂ ನೀರಿಲ್ಲದೆ ಕೃಷಿ ಮಾಡಲಾಗುತ್ತಿಲ್ಲ. ನೀರಿನ ವ್ಯವಸ್ಥೆಯಾದರೆ ಇರುವ ಜಾಗದಲ್ಲಿ ತರಕಾರಿ ಬೆಳೆದು ಸಣ್ಣಪುಟ್ಟ ಖರ್ಚು ನಿಭಾಯಿಸಬಹುದು. ಶಿಥಿಲಾವಸ್ಥೆಯಲ್ಲಿರುವ ಮನೆಗಳ ದುರಸ್ತಿ ಹಾಗೂ ಸಂಪರ್ಕ ವ್ಯವಸ್ಥೆ ಮಾಡಿಕೊಟ್ಟರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ.
    ಬುಡ್ಡು
    ಕಾಲನಿಯ ಹಿರಿಯ ಮಹಿಳೆ

    ಕಾಲನಿ ನಿವಾಸಿಗಳು ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡಿದ್ದು, ಸಮಸ್ಯೆ ಪರಿಹಾರಕ್ಕೆ ಇಲಾಖೆ ಮೂಲಕ ಪ್ರಯತ್ನ ಮಾಡಲಾಗುತ್ತದೆ. ಮನೆ ಬಗ್ಗೆ ಹಕ್ಲಾಡಿ ಗ್ರಾಪಂ ಮೂಲಕ ಮನೆ ನೀಡುವ ಬಗ್ಗೆ ಸೂಚಿಸಲಾಗುತ್ತದೆ. ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಸೂಚಿಸಲಾಗಿದೆ. ಸಂಪರ್ಕ ರಸ್ತೆ ಪ್ರಮುಖ ಸಮಸ್ಯೆಯಾಗಿದ್ದು, ಈ ಬಗ್ಗೆ ಇಲಾಖೆಗೆ ವರದಿ ನೀಡುವ ಜತೆ ಅಧಿಕಾರಿಗಳ ಗಮನಕ್ಕೂ ತರಲಾಗುತ್ತದೆ.
    ರಾಘವೇಂದ್ರ ವರ್ಣೇಕರ್
    ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts