More

    ಸ್ವಚ್ಛ, ಸುಂದರ ರಾಣೆಬೆನ್ನೂರ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಇಲ್ಲಿಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜರು ‘ಸ್ವಚ್ಛ ಸುಂದರ ರಾಣೆಬೆನ್ನೂರ’ ಎಂಬ ವಿನೂತನ ಸ್ವಚ್ಛತಾ ಅಭಿಯಾನ ಆರಂಭಿಸಿದ್ದಾರೆ. ನಗರದೆಲ್ಲೆಡೆ ಸ್ವಚ್ಛತಾ ಕಾರ್ಯ ನಡೆದಿದೆ.

    ಕಳೆದ ಜ. 12ರಂದು ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಅಭಿಯಾನ ಆರಂಭಿಸಿದ್ದು, ಪ್ರತಿ ಭಾನುವಾರ ನಗರದ ಒಂದು ಬಡಾವಣೆ ಆಯ್ಕೆ ಮಾಡಿಕೊಂಡು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಸಂಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುತ್ತಿದೆ.

    ಇದಕ್ಕಾಗಿ ಸ್ವಚ್ಛ ಸುಂದರ ರಾಣೆಬೆನ್ನೂರ ಎಂಬ ಅಭಿಯಾನಕ್ಕೆ ತಂಡ ರಚಿಸಲಾಗಿದೆ. ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಡಾ. ಪ್ರವೀಣ ಖನ್ನೂರ, ಡಾ. ಗಿರೀಶ ಕೆಂಚಪ್ಪನವರ ಸೇರಿ 20ಕ್ಕೂ ಅಧಿಕ ಜನರು ತಂಡದ ಸದಸ್ಯರಾಗಿದ್ದಾರೆ.

    ಪ್ರಕಾಶಾನಂದಜಿ ಮಹಾರಾಜರ ನೇತೃತ್ವದಲ್ಲಿ ಈಗಾಗಲೇ ನಗರದ ಸಂಗಮ್ ವೃತ್ತ, ದೊಡ್ಡಪೇಟೆ, ಚೌಡೇಶ್ವರ ದೇವಸ್ಥಾನದ ಆವರಣ, ಗುತ್ತಲ ರಸ್ತೆ, ಎಂ.ಜಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಇವರ ಪ್ರಯತ್ನದಿಂದಾಗಿ ಬೀದಿಗಳು ಇದೀಗ ಸ್ವಚ್ಛ ಸುಂದರ ತಾಣಗಳಾಗಿವೆ.

    ಸ್ವಚ್ಛ ಸುಂದರ ರಾಣೆಬೆನ್ನೂರ ತಂಡದಿಂದ ಕೇವಲ ಕಸ ಗುಡಿಸುವ ಕಾರ್ಯ ಮಾತ್ರವಲ್ಲದೆ, ಜನರಿಗೆ ಹಸಿ ಕಸವನ್ನು ನಗರಸಭೆ ವಾಹನಕ್ಕೆ ಹಾಕದೆ ಮನೆಯಲ್ಲಿಯೇ ಕಾಂಪೋಸ್ಟ್ ಮಾಡಿ ಗೊಬ್ಬರ ಮಾಡುವ ಕುರಿತು ತಿಳಿಹೇಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಗೋಡೆಗಳ ಮೇಲೆ ಕಲಾವಿದರ ನೆರವಿನಿಂದ ವರ್ಣಮಯ ಚಿತ್ತಾರ ಬಿಡಿಸುವ ಮೂಲಕ ನಗರದ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

    ನಗರಸಭೆಗೆ ಸಹಾಯ ಮಾಡಲು ಹಸಿಕಸ ಸಂಸ್ಕರಣಾ ಘಟಕ ಹಾಗೂ ಒಣ ಕಸ ವಿಂಗಡಿಸಿ ಮರು ಸಂಸ್ಕರಣೆ ಮಾಡುವ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಸ್ವಚ್ಛ ಸುಂದರ ರಾಣೆಬೆನ್ನೂರ ಅಭಿಯಾನ ವಿಸ್ತರಿಸುವ ಚಿಂತನೆ ನಡೆಸಿದ್ದಾರೆ.

    ಮಂಗಳೂರಿನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅಲ್ಲಿಯ ಕಾರ್ಯದಿಂದ ಪ್ರೇರಿತವಾಗಿ, ಸ್ವಚ್ಛ ಸುಂದರ ರಾಣೆಬೆನ್ನೂರ ಅಭಿಯಾನ ಆರಂಭಿಸಿದ್ದೇವೆ. ಅದು ಯಶಸ್ಸಿನತ್ತ ಸಾಗುತ್ತಿದೆ.

    | ಪ್ರಕಾಶಾನಂದಜಿ ಮಹಾರಾಜ್, ರಾಮಕೃಷ್ಣ ವಿವೇಕಾನಂದ ಆಶ್ರಮ

    ನಗರವನ್ನು ಸಂಪೂರ್ಣ ಸ್ವಚ್ಛ ಹಾಗೂ ಸುಂದರ ಮಾಡಬೇಕು ಎಂಬ ಉದ್ದೇಶದಿಂದ ಪ್ರಕಾಶಾನಂದಜಿ ಮಹಾರಾಜ್​ರ ಮಾರ್ಗದರ್ಶನದಲ್ಲಿ ಪ್ರತಿ ಭಾನುವಾರ ಶ್ರಮದಾನ ಮಾಡುತ್ತಿದ್ದೇವೆ. ಇದಕ್ಕೆ ಇನ್ನೂ ಹೆಚ್ಚಿನ ಜನತೆ ಕೈ ಜೋಡಿಸಿದರೆ, ನಾವು ಅಂದುಕೊಂಡ ಕಾರ್ಯ ಶೀಘ್ರದಲ್ಲಿ ನೆರವೇರಲಿದೆ.

    | ಮಲ್ಲಣ್ಣ ಅಂಗಡಿ, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts