More

    ಚಿನ್ನದ ನಾಡಲ್ಲಿ ಸ್ಥಳೀಯ, ಹೊರಗಿನವರ ಹಣಾಹಣಿ

    | ಕಿರುವಾರ ಎಸ್.ಸುದರ್ಶನ್ ಕೋಲಾರ
    ಚಿನ್ನದ ನಾಡು, ಬಯಲುಸೀಮೆ ಎಂದು ಕರೆಯಲ್ಪಡುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯು ಈ ಬಾರಿ ಸ್ಥಳೀಯ ಹಾಗೂ ಹೊರಗಿನವರ ನಡುವೆ ಸ್ಪರ್ಧೆ ಎಂದೇ ಗುರುತಿಸಿಕೊಳ್ಳುತ್ತಿದೆ. ಹಲವು ರಾಜಕೀಯ ತಿರುವುಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬು ಅಖಾಡದಲ್ಲಿದ್ದಾರೆ. ಅಳಿಯ ಚಿಕ್ಕಪೆದ್ದನ್ನ ಅವರಿಗೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮುಂದಾಗಿದ್ದರು. ಮತ್ತೊಂದು ಕಡೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಮತ್ತು ತಂಡದವರು ಬಲಗೈ ಸಮುದಾಯಕ್ಕೆ ಟಿಕೆಟ್​ಗಾಗಿ ಒತ್ತಾಯ ಮಾಡಿ, ಕೆ.ಎಚ್.ಮುನಿಯಪ್ಪ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದರು. ಎರಡೂ ಗುಂಪುಗಳ ತೀವ್ರ ತಿಕ್ಕಾಟದಿಂದ ತಪ್ಪಿಸಿಕೊಳ್ಳಲು ಇಬ್ಬರನ್ನೂ ಬಿಟ್ಟು ಬೆಂಗಳೂರಿನ ನಿವಾಸಿ ಕೆ.ವಿ. ಗೌತಮ್ ಅವರನ್ನು ಹೈಕಮಾಂಡ್ ಕಣಕ್ಕೆ ಇಳಿಸಿದೆ.

    ಮರಳಿ ಅಧಿಕಾರ ಪಡೆಯುವ ತವಕ: ಕ್ಷೇತ್ರದಲ್ಲಿ ಇದುವರೆಗೂ 17 ಲೋಕಸಭೆ ಚುನಾವಣೆಗಳು ನಡೆದಿದ್ದು, 15 ಬಾರಿ ಕಾಂಗ್ರೆಸ್ ಗೆದ್ದಿದೆ. 1952, 1957, 1962ರಲ್ಲಿ ದೊಡ್ಡತಿಮ್ಮಯ್ಯ ಕಾಂಗ್ರೆಸ್​ನಿಂದ ಗೆದ್ದಿದ್ದರು. ಆನಂತರ 1967, 1971, 1977, 1980ರಲ್ಲಿ ಜಿ.ವೈ.ಕೃಷ್ಣನ್ ಪ್ರತಿನಿಧಿಸಿದ್ದರು. 1984ರಲ್ಲಿ ಜನತಾ ಪಕ್ಷದಿಂದ ಬೆಂಗಳೂರಿನ ಡಾ.ವಿ.ವೆಂಕಟೇಶ್ ಗೆದ್ದಿದ್ದರು. 1989ರಲ್ಲಿ ಕಾಂಗ್ರೆಸ್​ನ ವೈ. ರಾಮಕೃಷ್ಣ ಗೆಲುವು ಸಾಧಿಸಿದ್ದರು. ಅನಂತರ 1991, 1996, 1998,1999, 2004, 2009, 2014ರಲ್ಲಿ ಕಾಂಗ್ರೆಸ್​ನಿಂದ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಕೆ.ಎಚ್. ಮುನಿಯಪ್ಪ ಸತತವಾಗಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2019ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ನೀಡಿದ ಪ್ರಬಲ ಪೈಪೋಟಿಯಿಂದ ಕೆ.ಎಚ್.ಮುನಿಯಪ್ಪ ಪರಾಭವಗೊಂಡರು. ಆ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದರು. ಇದೀಗ 18ನೇ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುವ ತವಕದಲ್ಲಿದೆ.

    5 ಕಾಂಗ್ರೆಸ್, 3 ಜೆಡಿಎಸ್ ಶಾಸಕರು: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೂವರು ಜೆಡಿಎಸ್, ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಪರಾಭವಗೊಂಡಿರುವ ಜೆಡಿಎಸ್ ಅಭ್ಯರ್ಥಿಗಳು ಶೇಕಡವಾರು ಮತ ಪಡೆದುಕೊಂಡಿದ್ದಾರೆ. ಗೆಲುವು ಸುಗಮವಾಗಬಹುದೆಂಬ ನಿರೀಕ್ಷೆಯಲ್ಲಿ ಮೈತ್ರಿ ಅಭ್ಯರ್ಥಿ ಇದ್ದಾರೆ.

    ಎಡಗೈ-ಬಲಗೈ ಗೊಂದಲ ಸೃಷ್ಟಿ: ಎಂ. ಮಲ್ಲೇಶ್ ಬಾಬು 2018 ಹಾಗೂ 2023ರಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ಸಿಂಪತಿ ಮತಗಳು ಹೆಚ್ಚು ಲಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದ ಉಭಯ ಪಕ್ಷಗಳ ಸಮನ್ವಯ ಸಮಿತಿ ಸಭೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸಭೆಗಳಿಗೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ಅಂತಿಮಗೊಳ್ಳುವ ಮೊದಲು ಎಡಗೈ-ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಎರಡು ಬಣಗಳ ನಡುವೆ ಪೈಪೋಟಿ ನಡೆದಿತ್ತು. ಇದು ದಲಿತ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸಿದೆ. ಈ ಸಮುದಾಯಗಳ ಮತದಾರರು ಯಾರಿಗೆ ಒಲವು ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಎಂ.ಮಲ್ಲೇಶ್ ಬಾಬು ಪ್ಲಸ್-ಮೈನಸ್

    1.  ಬಂಗಾರಪೇಟೆ ಕ್ಷೇತ್ರದಿಂದ 2 ಬಾರಿ ಸೋತಿರುವ ಅನುಕಂಪ
    2. ಬಿಜೆಪಿಯೊಂದಿಗೆ ಮೈತ್ರಿ
    3. ಸ್ಥಳೀಯ. ಸಜ್ಜನ ವ್ಯಕ್ತಿ
    4. ಜನರೊಂದಿಗೆ ಬೆರೆಯು ವುದಿಲ್ಲ ಎಂಬ ಅಪವಾದ
    5. ವಿಧಾನಸಭೆ ಚುನಾವಣೆ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ

    ಕೆ.ವಿ.ಗೌತಮ್ ಪ್ಲಸ್-ಮೈನಸ್

    1. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು
    2. ಪಕ್ಷದ ಮುಖಂಡರ ಬೆಂಬಲ ವಿಶ್ವಾಸ
    3. ಸಮುದಾಯದ ಬೆಂಬಲ
    4. ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ
    5. ಕ್ಷೇತ್ರದ ಪರಿಚಯವಿಲ್ಲದೆ ಇರುವುದು

    ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ದ್ದೇನೆ. ಹೈಕಮಾಂಡ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಜಿಲ್ಲೆಯ ಮುಖಂಡರಿಗೂ ಸಮಾಧಾನ ತಂದಿದೆ. ಗೆಲುವಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳೂ ಗೆಲುವಿಗೆ ಶ್ರೀರಕ್ಷೆ ಆಗಲಿವೆ.

    | ಕೆ.ವಿ.ಗೌತಮ್ ಕಾಂಗ್ರೆಸ್ ಅಭ್ಯರ್ಥಿ

    ಬಂಗಾರಪೇಟೆ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ 2 ಸಾವಿರ ಮತಗಳಿಂದ ಪರಾಭವಗೊಂಡಿರುವ ನೋವು ಜನತೆಗೂ ಗೊತ್ತಿದೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಒತ್ತಾಸೆ ಜನರಲ್ಲಿದೆ. ಇದರಿಂದಾಗಿ ಮತದಾರರು ಆಶೀರ್ವಾದ ಮಾಡಲಿದ್ದಾರೆ.

    | ಎಂ.ಮಲ್ಲೇಶ್ ಬಾಬು ಜೆಡಿಎಸ್ ಅಭ್ಯರ್ಥಿ

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts