More

    ದೋಚಿದ ಹಣ ಜಪ್ತಿ ಪೊಲೀಸರಿಗೆ ಸವಾಲು!; ಸೈಬರ್​ ಕ್ರೈಂ ಕೇಸ್​ಗಳಲ್ಲೂ ಹಣ ಹಿಂತೆಗೆತ

    ಕೀರ್ತಿನಾರಾಯಣ ಸಿ. ಬೆಂಗಳೂರು
    ಸೈಬರ್ ಕ್ರೖೆಂ ಪ್ರಕರಣಗಳಲ್ಲಿ ಖದೀಮರು ದೋಚುವ ಹಣ ‘ಜಪ್ತಿ’ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬ್ಯಾಂಕ್ ಖಾತೆಗೆ ಕನ್ನ ಹಾಕಿ ಎಗರಿಸುವ ಮೊತ್ತವನ್ನು ತಕ್ಷಣ ಎಟಿಎಂಗಳಲ್ಲಿ ಡ್ರಾ ಮಾಡುತ್ತಿರುವುದರಿಂದ ಫ್ರೀಜ್ ಮಾಡಿ ಜನರಿಗೆ ವಾಪಸ್ ಕೊಡಿಸಲು ಕಷ್ಟವಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಕರ್ನಾಟಕದ ಬಿಟ್ ಕಾಯಿನ್ ಹಗರಣದಲ್ಲೂ ಕದ್ದ ಬಿಟ್ ಕಾಯಿನ್​ಗಳನ್ನು ಪರಿವರ್ತನೆ ಮಾಡಿಕೊಂಡು ಬ್ಯಾಂಕ್​ನಲ್ಲಿ ನಗದು ಡ್ರಾ ಮಾಡಿಕೊಂಡಿರುವ ಬಗ್ಗೆ ಎಸ್​ಐಟಿಗೆ ಅನುಮಾನ ವ್ಯಕ್ತವಾಗಿದೆ.

    ದೇಶದಲ್ಲಿ ಸೈಬರ್ ಅಪರಾಧಗಳು ಶೇ.24 ಹೆಚ್ಚಾಗಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದ ಕುಖ್ಯಾತಿಗೆ ಒಳಗಾಗಿದೆ ಎನ್ನುವ ವಿಚಾರ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್​ಸಿಆರ್​ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್ ದಾಖಲಾಗಿವೆ. ಈವರೆಗೆ ಸೈಬರ್ ಕ್ರೖೆಂಗೆ ತುತ್ತಾದ ಕೂಡಲೇ ದೂರು ಕೊಟ್ಟರೆ ಸೈಬರ್ ಪೊಲೀಸರು ತಕ್ಷಣವೇ ವರ್ಗಾವಣೆಯಾಗಿರುವ ಬ್ಯಾಂಕ್​ನ ಸಂರ್ಪಸಿ ಖಾತೆ ಫ್ರೀಜ್ ಮಾಡುತ್ತಿದ್ದರು. ನಂತರ ಕೋರ್ಟ್ ಮೂಲಕ ಹಣವನ್ನು ದೂರುದಾರರಿಗೆ ತಲುಪಿಸುತ್ತಿದ್ದರು. ಆದರೀಗ ಪೊಲೀಸರ ತಂತ್ರಕ್ಕೆ ಪ್ರತಿತಂತ್ರ ಹೂಡಿರುವ ಸೈಬರ್ ಖದೀಮರು, ಹಣ ಲಪಟಾಯಿಸಿದ ಕೂಡಲೇ ಎಟಿಎಂಗಳಲ್ಲಿ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಇಲ್ಲವಾದಲ್ಲಿ ಆನ್​ಲೈನ್ ಪ್ಲಾಟ್​ಫಾಮ್ರ್ ಮೂಲಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಎಗರಿಸಿದ ಹಣವನ್ನು ಫ್ರೀಜ್ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಶೇ.25 ಪ್ರಕರಣಗಳಲ್ಲಿ ಮಾತ್ರವೇ ಹಣ ಉಳಿಸಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವ್ಯಾವ ವೆಬ್​ಸೈಟ್ ಹಾಕ್ ಮಾಡಲಾಗಿದೆ, ಯಾವೆಲ್ಲ ವ್ಯಾಲೆಟ್​ಗಳಿಗೆ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂಬುದರ ಹಾದಿಯನ್ನು ಎಸ್​ಐಟಿ ತಂಡ ಪತ್ತೆಹಚ್ಚುತ್ತಿದೆ. ಈವರೆಗಿನ ತನಿಖೆಯಲ್ಲಿ ಸಾಕಷ್ಟು ಮಾಹಿತಿಯನ್ನು ಕಲೆಹಾಕಿರುವ ಎಸ್​ಐಟಿ ತಂಡ, ಶೀಘ್ರದಲ್ಲೇ ಹಣದ ಮೂಲ ಪತ್ತೆ ಮಾಡುವ ವಿಶ್ವಾಸದಲ್ಲಿದೆ.

    ಸ್ಕ್ಯಾಮ್​ನಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ, ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಗೂ ವಿದೇಶಿ ಹ್ಯಾಕರ್​ಗಳು ಕೂಡ ಭಾಗಿಯಾಗಿದ್ದು, ಈಗಾಗಲೇ ಹಲವು ಆರೋಪಿಗಳನ್ನು ಎಸ್​ಐಟಿ ಬಂಧಿಸಿದೆ.

    ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ, ನಂತರ ತನಿಖೆ ಮುಂದುವರಿಸಿದ್ದ ಸಿಐಡಿ ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಹಾಗೂ ಹ್ಯಾಕರ್ ಶ್ರೀಕೃಷ್ಣ ಮತ್ತು ಆತನ ಸ್ನೇಹಿತರ ವಿಚಾರಣೆಯಿಂದ ಸಾಕಷ್ಟು ಮಾಹಿತಿ ಎಸ್​ಐಟಿಗೆ ಸಿಕ್ಕಿದೆ. ಇದರ ಆಧಾರದಲ್ಲಿ ಕದ್ದ ಬಿಟ್ ಕಾಯಿನ್​ಗಳನ್ನು ವೆಬ್​ಪೋರ್ಟಲ್​ಗಳ ಮುಖಾಂತರ ನಗದು ರೂಪದಲ್ಲಿ ಪರಿವರ್ತನೆ ಮಾಡಿಕೊಂಡು ಭಾರತದ ಬ್ಯಾಂಕ್​ಗಳಲ್ಲೇ ಡ್ರಾ ಮಾಡಿಕೊಂಡಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

    ಬಿಟ್ ಕಾಯಿನ್​ಗಳನ್ನು ಬೇರೆಬೇರೆ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಕೊಂಡು ವಿದೇಶಗಳಲ್ಲಿ ನಗದು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಿತ್ತು. ಒಂದು ವೇಳೆ ವಿದೇಶದಲ್ಲಿ ಡ್ರಾ ಆಗಿದ್ದಿದ್ದರೆ ಪತ್ತೆಹಚ್ಚುವುದು ಕಷ್ಟ. ಆದರೆ, ಭಾರತೀಯ ಬ್ಯಾಂಕ್​ಗಳಲ್ಲಿ ಹಣ ಡ್ರಾ ಆಗಿದ್ದರೆ ಪತ್ತೆಕಾರ್ಯ ಎಸ್​ಐಟಿಗೆ ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವುದಕ್ಕೆ ಈಗಾಗಲೇ ಕೆಲವೊಂದು ಸಾಕ್ಷ್ಯಾಧಾರ ಸಿಕ್ಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಬ್ಯಾಂಕ್​ಗಳ ವಿವರ ಸಂಗ್ರಹ: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿಯನ್ನು ಸಿಸಿಬಿ ಪೊಲೀಸರು 2020 ನ.18ರಂದು ಬಂಧಿಸಿದ್ದರು. ಬಿಟ್ ಕಾಯಿನ್​ಗಳನ್ನು ಬಳಸುವ ಮೂಲಕ ಶ್ರೀಕಿ ಡಾರ್ಕ್ ವೆಬ್​ಸೈಟ್​ನಲ್ಲಿ ಅಂತಾರಾಷ್ಟ್ರೀಯ ಡೀಲರ್​ಗಳ ಮುಖೇನ ಡ್ರಗ್ಸ್ ಖರೀದಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಹಲವು ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿರುವ ವಿಚಾರವನ್ನು ಶ್ರೀಕಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಶ್ರೀಕಿ ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳನ್ನು ಬಲವಂತವಾಗಿ ಬೇರೆಬೇರೆ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಸಿ, ನಂತರ ಅಲ್ಲಿಂದ ಬಿಟ್ ಕಾಯಿನ್ ಟ್ರೇಡಿಂಗ್ ಎಕ್ಸ್​ಚೇಂಜ್​ಗೆ ಟ್ರಾನ್ಸ್​ಫರ್ ಮಾಡಲಾಗಿದೆ. ಅಲ್ಲಿಂದ ಬ್ಯಾಂಕ್​ಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಣ ಡ್ರಾ ಆಗಿರುವ ಬ್ಯಾಂಕ್​ಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವಿವರ ಸಿದೆಕ್ಕರೆ ಬ್ಯಾಂಕ್​ಗೆ ಎಲ್ಲಿಂದ ಹಣ ಬಂದಿದೆ ಎಂಬುದರ ಕುರಿತು ಹಿಮ್ಮುಖವಾಗಿ ತನಿಖೆ ಆರಂಭವಾಗುತ್ತದೆ ಎಂದು ತಿಳಿದುಬಂದಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts