More

    ವೆಚ್ಚಕ್ಕೆ ಎಚ್ಚರಿಕೆಯ ಹೆಜ್ಜೆ; ಆಡಳಿತ ಇಲಾಖೆಗಳಿಗೆ ಹಣಕಾಸು ಇಲಾಖೆ ಸೂಚನೆ

    ಬೆಂಗಳೂರು: ಆರ್ಥಿಕ ವರ್ಷದ ಕೊನೆಯ ತಿಂಗಳು ಸಮೀಪಿಸುತ್ತಿದ್ದು, ಮುಂದಿನ ಸಾಲಿನ ಆಯವ್ಯಯ ತಯಾರಿಕೆಯೂ ಅಂತಿಮ ಹಂತ ತಲುಪಿದೆ. ಈ ನಡುವೆ ಆರ್ಥಿಕ ವರ್ಷದ ಕೊನೆಯಲ್ಲಿ ಮೈಚಳಿ ಬಿಟ್ಟು ವೆಚ್ಚ ಮಾಡುವ ಅಧಿಕಾರಿಗಳ ಆಲೋಚನಾ ಕ್ರಮಕ್ಕೆ ಹಣಕಾಸು ಇಲಾಖೆ ಬ್ರೇಕ್ ಹಾಕಿದೆ.

    ಆರ್ಥಿಕ ವರ್ಷದಲ್ಲಿ ಮುಂದುವರಿದ ಅಥವಾ ಹೊಸ ಯೋಜನೆಗಳೆಂದು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

    ಸಾಮಾನ್ಯವಾಗಿ ಪ್ರತಿ ಆರ್ಥಿಕ ಸಾಲಿನ ಕೊನೆಯ ಎರಡು ತಿಂಗಳಲ್ಲಿ ಸರ್ಕಾರ ತನ್ನ ಆರ್ಥಿಕ ಗುರಿ ಮುಟ್ಟಲು ಹರಸಾಹಸ ಮಾಡುವ ಸಂಪ್ರದಾಯ ಮುಂಚೆಯಿಂದಲೂ ಇದೆ. ಆದರೆ, ಈ ಬಾರಿ ಗ್ಯಾರಂಟಿ ಅನುಷ್ಠಾನಕ್ಕೆ ಆದ್ಯತೆ ಇರುವುದರಿಂದ ಉಳಿದ ಕಾರ್ಯಕ್ಕೆ ವೆಚ್ಚ ಮಾಡುವಾಗ ಅಳೆದು ತೂಗಿ ನಿರ್ಧರಿಸಲಾಗುತ್ತಿದೆ.

    ಇದೀಗ 2023-24ನೇ ಸಾಲಿನ ಫೆಬ್ರವರಿ, ಮಾರ್ಚ್​ನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಸಂಬಂಧ ಇಲಾಖೆ ನಡಾವಳಿ ಪ್ರಕಟಿಸಿದ್ದು, ರಾಜಸ್ವ ಮತ್ತು ಬಂಡವಾಳ ವೆಚ್ಚಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಲಾಗಿದೆ. ಹಲವು ಸಂದರ್ಭದಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ಹಣ ಬಿಡುಗಡೆ ಆದೇಶವೆಂದು ಪರಿಭಾವಿಸಲಾಗುತ್ತದೆ. ಇದನ್ನು ಗಮನಿಸುವಂತೆ ತಿಳಿಸಲಾಗಿದ್ದು, ಅನುಮೋದನೆಯಾಗಿರುವ ವಿವಿಧ ಯೋಜನೆಗಳಿಗೆ ಅಧಿಕಾರ ಪ್ರತ್ಯಾಯೋಜನೆ ಅನ್ವಯ ಹಣ ಬಿಡುಗಡೆ ಮಾಡುವ ಪ್ರತ್ಯೇಕ ಆದೇಶ ಹೊರಡಿಸಬೇಕಾಗುತ್ತದೆ. ಹಣ ಬಿಡುಗಡೆಗೂ ಮೊದಲು ಯೋಜನೆ ಮಾರ್ಗಸೂಚಿ, ಆಡಳಿತಾತ್ಮಕ ಅನುಮೋದನೆ, ಕ್ರಿಯಾಯೋಜನೆ ಪ್ರಕ್ರಿಯೆ ಮುಂತಾದ ಆಡಳಿತಾ ತ್ಮಕ ಪರಿಶೀಲನೆಗಳನ್ನು ಆಡಳಿತ ಇಲಾಖೆ ಪರಿಶೀಲಿಸಬೇಕೆಂದು ಸ್ಪಷ್ಟಪಡಿಸಲಾಗಿದೆ.

    ಬಹಳಷ್ಟು ಆಡಳಿತ ಇಲಾಖೆಗಳು ಹಿಂದಿನ ಮೂರು ಕಂತುಗಳಲ್ಲಿ ಬಿಡುಗಡೆ ಮಾಡದ ಹಣದಲ್ಲಿ ಶೇ.75 ವೆಚ್ಚ ಮಾಡದಿದ್ದರೂ ಹಣ ಬಿಡುಗಡೆ ಮಾಡುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಆಡಳಿತ ಇಲಾಖೆಗಳು ಹಣ ಬಿಡುಗಡೆ ಮಾಡುವಾಗ ಅನುಷ್ಠಾನಗೊಳಿಸುವ ಏಜೆನ್ಸಿಗಳ (ನಿಗಮ, ಮಂಡಳಿ, ಮತ್ತಿತರ ಸಂಸ್ಥೆ, ಇಲಾಖಾಧಿಕಾರಿ) ಹೆಸರಿನ ಖಾತೆಗಳಲ್ಲಿರುವ ಮೊತ್ತ ಪರಿಶೀಲಿಸಿ ಬಿಡುಗಡೆಗೊಳಿಸುವಂತೆ ತಿಳಿಸಲಾಗಿದೆ.

    ಕೆಲ ಇಲಾಖೆಗಳು ಕೇಂದ್ರ ಸರ್ಕಾರದ ಪಾಲು ನಿರೀಕ್ಷಿಸಿ ಹಣ ಬಿಡುಗಡೆ ಮಾಡುತ್ತಿರುವುದು ಆರ್ಥಿಕ ಇಲಾಖೆ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಲ್ಲಿ ಈ ಯೋಜನೆಯಡಿ ಮುಂದಿನ ಬಿಡುಗಡೆ ನಿಲ್ಲಿಸಲಾಗುವುದು ಮತ್ತು ಈ ಸಂಬಂಧ ನೀಡಿರುವ ಆರ್ಥಿಕ ಅಧಿಕಾರ ಹಿಂಪಡೆಯಲಾಗುವುದು ಎಂದು ಎಚ್ಚರಿಸಲಾಗಿದೆ.

    ಬಜೆಟ್ ತಯಾರಿ ಕೊನೇ ಹಂತಕ್ಕೆ: 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ನೇರಾನೇರ ಟೀಕೆಯನ್ನೊಳಗೊಂಡ ಬಜೆಟ್ ಮಂಡಿಸಿ ಹೊಸ ಸಂಪ್ರದಾಯ ಆರಂಭಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಮ್ಮೆ ಬಜೆಟ್ ತಯಾರಿಯಲ್ಲಿದ್ದಾರೆ. ಇಲಾಖೆಗಳೊಂದಿಗೆ ಎರಡು ಸುತ್ತಿನ ಸಭೆ ಪೂರ್ಣಗೊಳಿಸಿ, ಬಜೆಟ್​ನಲ್ಲಿ ಯಾವೆಲ್ಲ ಅಂಶ ಇರಬೇಕೆಂದು ಖಚಿತಪಡಿಸಿಕೊಂಡಿದ್ದಾರೆ. ಕೇಂದ್ರದಿಂದ ತೆರಿಗೆ ಪಾಲು ಕಡಿತವಾಗಿರುವ ಅಂಶವನ್ನು ಮುಂಬರುವ ಆಯವ್ಯಯದಲ್ಲಿ ಕಾಣಿಸುವ ಮೂಲಕ ಸರ್ಕಾರದ ದಾಖಲೆಯಲ್ಲಿ ಶಾಶ್ವತವಾಗಿ ಉಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಗ್ಯಾರಂಟಿ ಪರಿಣಾಮವನ್ನು ಪ್ರಸ್ತಾಪಿಸುವುದು ಮತ್ತು ಗ್ಯಾರಂಟಿಯಿಂದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲಿದೆ ಎಂಬ ಪ್ರಧಾನಿಯವರ ಟೀಕೆಗೂ ಉತ್ತರ ನೀಡುವ ಸಾಧ್ಯತೆ ಹೆಚ್ಚಿದ್ದು, ಫೆ.16ರಂದು ಬಜೆಟ್ ಮಂಡನೆಯಾಗಲಿದೆ.

    ಅಧಿಕಾರಿಗಳ ಅತ್ಯಾಸಕ್ತಿ!

    • ಕೇಂದ್ರದ ಪಾಲು ಬರುವ ಮುನ್ನವೇ ಯೋಜನೆಗಳಿಗೆ ಹಣ ಬಿಡುಗಡೆ
    • ಈ ಹಿಂದೆ ಬಿಡುಗಡೆ ಮಾಡಿದ ಹಣ ಖರ್ಚಾಗದಿದ್ದರೂ ಮತ್ತೆ ವೆಚ್ಚಕ್ಕೆ ತಯಾರಿ
    • ಆಡಳಿತಾತ್ಮಕ ಅನುಮೋದನೆ ಯನ್ನೇ ನೆಪವಾಗಿಟ್ಟು ಹಣ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts