More

    ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ

    ಮುದ್ದೇಬಿಹಾಳ: ತಾಲೂಕಿನ ಅಡವಿ ಹುಲಗಬಾಳದಿಂದ ಅಡವಿ ಹುಲಗಬಾಳ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ತಾಂಡಾದ ಜನ ಅಡವಿಹುಲಗಬಾಳ ಗ್ರಾಮಕ್ಕೆ ಬರುವುದು ಅಸಾಧ್ಯವಾಗಿದೆ. ಕಳೆದ ವರ್ಷ ಲಕ್ಷಾಂತರ ರೂ.ವೆಚ್ಚದಲ್ಲಿ ಈ ಸೇತುವೆ ದುರಸ್ತಿ ಕೈಗೊಳ್ಳಲಾಗಿತ್ತು. ದೊಡ್ಡ ಪೈಪ್‌ಗಳನ್ನು ಅಳವಡಿಸಿ ಜನರ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ಸೇತುವೆ ನೀರಲ್ಲಿ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ತಾಲೂಕಿನ ಯರಝರಿ ಗ್ರಾಮದಲ್ಲಿ ಹಳ್ಳ ಉಕ್ಕಿ ಹರಿದು ಗ್ರಾಮದೊಳಗೆ ನೀರು ನುಗ್ಗಿದೆ. ಹಲವು ಮನೆಗಳ ಜನತೆ ನೀರು ಹೊರ ಹಾಕಲು ಹರಸಾಹಸಪಟ್ಟರು. ಯರಝರಿ ಗ್ರಾಮದ ಹುಲ್ಲಣ್ಣ ಮ್ಯಾಗೇರಿ, ಯಮನಪ್ಪ ಕೋಳೂರ, ಎಂ.ಡಿ.ಚಪ್ಪರಬಂದ ಮಾತನಾಡಿ, ಗ್ರಾಮದ ಸಮೀಪದ ಹಳ್ಳದ ನೀರು 15ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ದಿನವಿಡಿ ಮಕ್ಕಳು, ಮಹಿಳೆಯರು, ವೃದ್ಧರು ನೀರು ಹೊರ ಹಾಕುವುದರಲ್ಲೇ ನಿರತವಾಗಿದ್ದಾರೆ. ಮಾದಿನಾಳ ಕ್ರಾಸ್‌ಗೆ ತೆರಳುವ ಊರಿನ ಸೇತುವೆ ಎತ್ತರಿಸಿ ಸ್ಮಶಾನದ ಸುತ್ತಮುತ್ತ ಹಳ್ಳದ ಅಕ್ಕಪಕ್ಕದಲ್ಲಿ ಬೆಳೆದ ಕಂಟಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

    ತಾಲೂಕಿನ ಬಸರಕೋಡ ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳ ತುಂಬಿ ಹರಿದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಇಂಗಳಗೇರಿ-ಗುಡ್ನಾಳ ಗ್ರಾಮದ ನಡುವಿನ ಸೇತುವೆ ಮೇಲೆ ನೀರು ಬಂದಿದ್ದರಿಂದ ರೈತರು ಅಳವಡಿಸಿದ್ದ ಹಳ್ಳದ ಬದಿಯಲ್ಲಿನ ಮೋಟರ್ ಪಂಪ್‌ಸೆಟ್‌ಗಳು ಹರಿದು ಹೋಗಿವೆ. ಮುದ್ದೇಬಿಹಾಳ ಪಟ್ಟಣದ ತಗ್ಗು ಪ್ರದೇಶದಲ್ಲಿದ್ದ ಕೆಲವು ಮನೆಗಳಿಗೆ ನೀರು ನುಗ್ಗಿದೆ.

    ಯರಝರಿ ಪಿಡಿಒ ವಿಜಯಾ ಮುದಗಲ್ ಮಾತನಾಡಿ, ಗ್ರಾಮಲೆಕ್ಕಾಧಿಕಾರಿಯೊಂದಿಗೆ ಸರ್ವೆ ಮಾಡಲಾಗಿದ್ದು, 10 ಮನೆಗಳಿಗೆ ನೀರು ನುಗ್ಗಿದೆ. ಬಿದರಕುಂದಿ ಹಳ್ಳ ತುಂಬಿ ಹರಿದಿದ್ದರಿಂದ ನೀರು ಊರೊಳಗೆ ಬಂದಿದೆ. ಸೇತುವೆ ಕೆಲ ಭಾಗ ಕುಸಿದಿದ್ದು, ಪಿಆರ್‌ಇಡಿ ಎಇಇ ಅವರಿಗೆ ಪತ್ರ ಬರೆದು ದುರಸ್ತಿಗೊಳಿಸುವಂತೆ ತಿಳಿಸಿದ್ದೇವೆ ಎಂದರು.

    ಮುದ್ದೇಬಿಹಾಳ ತಾಪಂ ಯೋಜನಾ ನಿರ್ದೇಶಕರ ಕಚೇರಿಗೂ ನೀರು ನುಗ್ಗಿ ಸೇವೆಗೆ ಅಡಚಣೆ ಉಂಟಾಗಿದೆ. ಕಟ್ಟಡ ಶಿಥಿಲಗೊಂಡಿದ್ದು ಅಲ್ಲಲ್ಲಿ ಸೋರುತ್ತಿದೆ. ತಾಪಂ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಕಚೇರಿಯೊಳಕ್ಕೆ ನುಗ್ಗುವಂತಾಗಿದೆ.

    ಮಳೆಯಿಂದಾಗಿ ತಾಲೂಕಿನಲ್ಲಿ ಕೆಲವು ಮನೆಗಳು ಬಿದ್ದಿವೆ. ಅಡವಿಹುಲಗಬಾಳ ಸೇತುವೆ ಕುಸಿದಿದೆ. ಯರಝರಿ ಗ್ರಾಮದಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಸೂಕ್ತ ಕ್ರಮ ಕೈಗೊಂಡು ಜನರ ಸಮಸ್ಯೆಗೆ ಸ್ಪಂದಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ.

    ಬಿ.ಎಸ್.ಕಡಕಭಾವಿ ತಹಸೀಲ್ದಾರ್, ಮುದ್ದೇಬಿಹಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts