More

    ಮುದ್ದೇಬಿಹಾಳದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ತೆರವು

    ಮುದ್ದೇಬಿಹಾಳ: ಪಟ್ಟಣದ ತಹಸೀಲ್ದಾರ್ ಕಚೇರಿ ವ್ಯಾಪ್ತಿಯ ಸರ್ಕಾರಿ ಜಾಗ ಅತಿಕ್ರಮಿಸಿ ಇಟ್ಟುಕೊಂಡಿದ್ದ ಡಬ್ಬಾ ಅಂಗಡಿಗಳನ್ನು ತಾಲೂಕಾಡಳಿತ ಹಾಗೂ ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ಪೊಲೀಸರ ಬಂದೋಬಸ್ತ್‌ನಲ್ಲಿ ಗುರುವಾರ ಬೆಳಗ್ಗೆ ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.

    ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆಯ ಬಲಭಾಗದ ಪ್ರವಾಸಿ ಮಂದಿರ ಕಾಂಪೌಂಡ್‌ಗೆ ಹೊಂದಿಕೊಂಡು ಇರುವ ಪುರಸಭೆ ವ್ಯಾಪ್ತಿಯ ಖುಲ್ಲಾ ಜಾಗದಲ್ಲಿ ಇಟ್ಟಿದ್ದ ಅಂಗಡಿಗಳನ್ನೂ ತೆರವುಗೊಳಿಸಲಾಯಿತು.

    ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಮುಖ್ಯ ರಸ್ತೆಯ ಎರಡೂ ಬದಿ ರಸ್ತೆ ಅತಿಕ್ರಮಿಸಿ ಇಟ್ಟುಕೊಂಡಿರುವ ಡಬ್ಬಾ ಅಂಗಡಿಕಾರರಿಗೆ ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಲು ಸೂಚಿಸಿದ್ದು ಶನಿವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಲಾಗಿದೆ.

    ಡಬ್ಬಾ ಅಂಗಡಿಗಳಿಂದ ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ಹಾಗೂ ಪಕ್ಕದಲ್ಲೇ ಇರುವ ಕೋರ್ಟ್‌ನ ನಿತ್ಯದ ಚಟುವಟಿಕೆಗೆ ತೊಂದರೆ ಆಗುತ್ತಿದೆ ಎನ್ನುವ ವ್ಯಾಪಕ ದೂರುಗಳು ತಾಲೂಕಾಡಳಿತ, ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರು ತೆರವಿಗೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

    ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಲು ಜ.24ರ ಸಂಜೆಯವರೆಗೂ ಕಾಲಾವಕಾಶ ನೀಡಲಾಗಿತ್ತು. ಇದರ ಭಾಗವಾಗಿ ಬುಧವಾರ ಅಂಗಡಿಗಳಿಗೆ ಕೊಟ್ಟಿದ್ದ ವಿದ್ಯುತ್ ಸಂಪರ್ಕಗಳನ್ನು ಹೆಸ್ಕಾಂನವರು ತೆಗೆದು ಹಾಕಿದ್ದರು. ಆದರೂ ತೆರವಿಗೆ ಮುಂದಾಗದ ಕಾರಣ ಗುರುವಾರ ಬೆಳ್ಳಂಬೆಳಗ್ಗೆ ಛಳಿಗಾಳಿಯ ನಡುವೆಯೂ ಜೆಸಿಬಿಗಳು ಘರ್ಜಿಸುವ ಮೂಲಕ ಅಂಗಡಿಗಳನ್ನು ಕೆಡವಿ ಹಾಕಿದರು.

    ಮುದ್ದೇಬಿಹಾಳ, ತಾಳಿಕೋಟೆ ಪೊಲೀಸ್ ಠಾಣೆಗಳ ಸಿಬ್ಬಂದಿ ಮಾತ್ರವಲ್ಲದೆ ವಿಜಯಪುರದಿಂದ ಕರೆಸಲಾಗಿದ್ದ 2 ಮೀಸಲು ತುಕಡಿಗಳ ಅಂದಾಜು 50ಕ್ಕೂ ಹೆಚ್ಚು ಪೊಲೀಸರು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರಡ್ಡಿ ನೇತೃತ್ವದಲ್ಲಿ ಭದ್ರತೆ ಒದಗಿಸಿದ್ದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಸ್ವತಃ ಕಾರ್ಯಾಚರಣೆಯ ಸ್ಥಳದಲ್ಲಿದ್ದು ಉಸ್ತುವಾರಿ ನೋಡಿಕೊಂಡರು. ಪುರಸಭೆಯ ಎಲ್ಲ ಪೌರಕಾರ್ಮಿಕರು ತೆರವುಗೊಳಿಸಿದ ಅವಶೇಷಗಳನ್ನು ಬೇರೆಡೆ ಸಾಗಿಸುವಲ್ಲಿ ನೆರವಾದರು.

    ಅಂಗಡಿಕಾರರು ಕೋರ್ಟ್ ಮೊರೆ ಹೋಗಿ ತೆರವಿಗೆ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿದ್ದರು. ಬುಧವಾರವೇ ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಮ್ಮುಖ ವಾದ, ಪ್ರತಿವಾದ ನಡೆದಿದ್ದವು. ಗುರುವಾರ ಬೆಳಗ್ಗೆ ಕೋರ್ಟ್ ಪ್ರಾರಂಭಗೊಂಡ ಕೂಡಲೇ ನ್ಯಾಯಾಧೀಶರು ಈ ಕುರಿತ ಆದೇಶ ಹೊರಡಿಸುವ ಸೂಚನೆ ಕಂಡುಬಂದಿತ್ತು. ಇದನ್ನು ಮೊದಲೇ ಅರಿತಿದ್ದ ತಾಲೂಕಾಡಳಿತ ನಸುಕಿನ 6 ಗಂಟೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿ 10 ಗಂಟೆಯೊಳಗೆ ಎಲ್ಲವನ್ನೂ ನೆಲಸಮ ಮಾಡಿ ಮುಗಿಸಿತ್ತು. ತಡೆಯಾಜ್ಞೆ ಸಿಗುತ್ತದೆ ಎನ್ನುವ ಖುಷಿಯಲ್ಲಿದ್ದ ಅಂಗಡಿಕಾರರಿಗೆ ತಾಲೂಕಾಡಳಿತದ ನಡೆ ದಿಗ್ಭ್ರಮೆ ಮೂಡಿಸಿದೆ.

    ಶಾಸಕರ ಸ್ಪಷ್ಟನೆ: ಅತಿಕ್ರಮಣ ತೆರವು ಕಾರ್ಯಾಚರಣೆ ಬಗ್ಗೆ ಶಾಸಕ ಸಿ.ಎಸ್.ನಾಡಗೌಡರು ಸಾಕಷ್ಟು ಅಂತರ ಕಾಯ್ದುಕೊಂಡರು. ಈಚೆಗೆ ಪುರಸಭೆಯಲ್ಲಿ ನಡೆದಿದ್ದ ತುರ್ತು ಸಭೆಯಲ್ಲಿ ಪಟ್ಟಣದ ಎಲ್ಲೆಡೆ ಇರುವ ಅತಿಕ್ರಮಣ ತೆರವಿಗೆ ಸೂಚಿಸಿದ್ದರು. ಗುರುವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಮ್ಮ ಕಾರಿಗೆ ಅಡ್ಡಹಾಕಿ ನ್ಯಾಯ ಕೇಳಿದ ಅಂಗಡಿಕಾರರಿಗೆ ಇದು ನನಗೆ ಸಂಬಂಧಿಸಿದ್ದಲ್ಲ. ಕಂದಾಯ ಇಲಾಖೆ, ಪುರಸಭೆಗೆ ಸೇರಿದ ವಿಷಯವಾಗಿದೆ. ಆ ಇಲಾಖೆಗಳ ಅಧಿಕಾರಿಗಳು ತಮ್ಮ ಆಸ್ತಿ ಕಾಪಾಡಿಕೊಳ್ಳಲು ಇದರಲ್ಲಿ ಹಸ್ತಕ್ಷೇಪ ನಡೆಸದಂತೆ ನನಗೆ ಮನವಿ ಮಾಡಿದ್ದರಿಂದ ಈ ವಿಷಯದಲ್ಲಿ ನಾನು ಮಧ್ಯಪ್ರವೇಶಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಉಪವಿಭಾಗಾಧಿಕಾರಿ, ತಹಸೀಲ್ದಾರ್ ಅವರ ಕಾರುಗಳನ್ನೂ ಅಂಗಡಿಕಾರರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts