More

    ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ

    ಹುಣಸೂರು: ಜಮೀನು ಖಾತೆಗಾಗಿ ನಾಲ್ಕು ವರ್ಷದಿಂದ ಅಲೆಯುತ್ತಿದ್ದರೂ ಆಗಿಲ್ಲ.. ಸಾಗುವಳಿ ಪತ್ರ ಕೊಡಿಸಿ ಸ್ವಾಮಿ.. ಜಮೀನಿಗೆ ರಸ್ತೆ ಬಿಡಿಸಿಕೊಡಿ..ಮಳೆಹಾನಿ ಪರಿಹಾರ ಸಿಕ್ಕಿಲ್ಲ.. ಅಧಿಕಾರಿಗಳು ಅಲೆಸುತ್ತಿದ್ದಾರಲ್ಲ ಸರೀನಾ ಸಾರ್?..

    ತಾಲೂಕು ಆಡಳಿತ ವತಿಯಿಂದ ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ರತ್ನಪುರಿ ಗ್ರಾಮದ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಧರ್ಮಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಗ್ರಾಮೀಣರಿಂದ ಬೇಡಿಕೆಗಳ ಸುರಿಮಳೆಯೊಂದಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದಾಗಿತ್ತು.

    ಜಿ.ಪಂ. ವ್ಯಾಪ್ತಿಯ ಆಸ್ಪತ್ರೆ, ಕಾವಲ್ ಸೊಸೈಟಿ ಜಮೀನಿಗೆ ಖಾತೆ ನೀಡುವ, ಆರ್‌ಟಿಸಿ ಗೊಂದಲ, ಖಾತೆಯ ಸಂಖ್ಯೆಯಲ್ಲಿನ ಗೊಂದಲ ಸೇರಿದಂತೆ ಬಹುತೇಕ ರೈತರು ಜಮೀನಿನ ಖಾತೆ ಮಾಡಲು ಅಧಿಕಾರಿಗಳು 4-5 ವರ್ಷದಿಂದ ಸತಾಯಿಸುತ್ತಿದ್ದಾರೆಂದು ದೂರಿದರು. ಸಾಗುವಳಿ ಪತ್ರಕ್ಕಾಗಿ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಗೃಹಲಕ್ಷ್ಮಿ ಯೋಜನೆಯ ನೋಂದಣಿಯೂ ಆಗುತ್ತಿಲ್ಲ. ನೋಂದಣಿಯಾದವರಿಗೆ ಹಣವೂ ಬರುತ್ತಿಲ್ಲವೆಂದು ಹಲವು ಮಹಿಳೆಯರು ಆಕ್ಷೇಪವೆತ್ತಿ ದೂರು ಸಲ್ಲಿಸಿದರು.

    ಮನೆ ನೆಲಸಮ, ಪರಹಾರ ಇಲ್ಲ: ಬಿಳಿಕೆರೆ ಮತ್ತು ಹೊನ್ನಿಕುಪ್ಪೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಅತಿವೃಷ್ಟಿಗೆ ಎರಡು ವರ್ಷಗಳ ಹಿಂದೆ ಮನೆ ನೆಲಸಮವಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಈವರೆಗೂ ಪರಿಹಾರ ಸಿಕ್ಕಿಲ್ಲವೆಂದು ಅವಲತ್ತುಕೊಂಡರು. ಉದ್ದೂರು ಕಾವಲ್, ಉಯಿಗೊಂಡನಹಳ್ಳಿ ಗ್ರಾಮದ ಕೆಲ ರೈತರು ತಮ್ಮ ಜಮೀನಿಗೆ ರಸ್ತೆ ಬಿಡಿಸಿಕೊಡಿರೆಂದು ಅರ್ಜಿ ಸಲ್ಲಿಸಿದರೆ, ಕೆಲವರು ಒತ್ತುವರಿಯಾಗಿರುವ ರಸ್ತೆ ತೆರವುಗೊಳಿಸಲು ಕೋರಿದರು.

    ರತ್ನಪುರಿಗೆ ಶೌಚಗೃಹ: ಗ್ರಾಮಕ್ಕೆ ಸಾರ್ವಜನಿಕ ಶೌಚಗೃಹ ಅವಶ್ಯಕತೆಯಿದ್ದು, ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಆಗಿಲ್ಲವೆಂದು ರತ್ನಪುರಿಯ ಕೆಲ ಯುವಕರು ದೂರಿದಾಗ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನದ ಕೊರತೆಯಿದೆ ಎಂದು ಪಿಡಿಒ ತಿಳಿಸಿದರು. ಏಪ್ರಿಲ್ ನಂತರ ನಿರ್ಮಿಸಿಕೊಡುವುದಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು. ಗ್ರಾಮಸ್ಥ ಅಪ್ಪಣ್ಣ ಎಂಬುವರು ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿಕೊಡಲು ಕೋರಿದರು. ಧರ್ಮಾಪುರ ಗ್ರಾ.ಪಂ.ವ್ಯಾಪ್ತಿಯ ಶಿವಾಜಿನಗರದ ನಿವಾಸಿಗಳು ಸ್ಮಶಾನಕ್ಕಾಗಿ ಬೇಡಿಕೆಯಿಟ್ಟರು.

    ಮನೆ ಬಾಗಿಲಿಗೆ ಆಡಳಿತ: ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಸಾಗುವಳಿ ಪತ್ರ ನೀಡಲು ಅಕ್ರಮ-ಸಕ್ರಮ ಸಮಿತಿ ಅಗತ್ಯವಿದ್ದು, 3-4 ತಿಂಗಳ ನಂತರ ಸಮಿತಿ ರಚನೆಯಾಗಲಿದೆ. ಸಾಗುವಳಿ ಪತ್ರಕ್ಕಾಗಿ ಫಾರಂ.ನಂ.53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವವರ ಕುರಿತು ಸಮಿತಿ ನಿರ್ಧರಿಸಲಿದೆ. ಕಂದಾಯ ಇಲಾಖೆಗೆ ಸಂಬಂದಿಸಿದ ದೂರುಗಳೇ ಹೆಚ್ಚಾಗಿರುವುದು ಸಹಜ. ಸಮಸ್ಯೆಗಳನ್ನು ಅರಿತು ಶೀಘ್ರ ವಿಲೇವಾರಿಗ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಥಳೀಯ ಸಮಸ್ಯೆಗಳನ್ನು ಅರಿಯಲು ಇಂತಹ ಜನಸಂಪರ್ಕ ಸಭೆ ಸಹಕಾರಿಯಾಗಿದೆ. ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆತಂದಿದ್ದೇನೆ. ಅಧಿಕಾರಿಗಳು ಜನರನ್ನು ಅಲೆದಾಡಿಸದೆ ತಮ್ಮ ಕರ್ತವ್ಯಪರತೆಯನ್ನು ಮೆರೆಯಬೇಕು. ಆಸ್ಪತ್ರೆಕಾವಲ್ ಸೊಸೈಟಿ ಭೂಮಿ ಗೊಂದಲದ ಕುರಿತು ಸಮಗ್ರವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

    ವಿಎ ಸೆಸ್ಪೆಂಡ್ ಮಾಡಿ: ಉಯಿಗೊಂಡನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಗ್ರಾಮಸ್ಥರಿಂದ ಜಮೀನು ಖಾತೆ, ಪೌತಿಖಾತೆ ಮುಂತಾದ ಸೇವೆಗಳಿಗೆ ಲಂಚ ಪಡೆದು ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದಾರೆಂದು ಲಕ್ಕೇಗೌಡ ಸೇರಿದಂತೆ ಹಲವರು ದೂರು ನೀಡಿ ಶಾಸಕರಿಗೆ ದಾಖಲೆ ಸಲ್ಲಿಸಿದರು.

    ಇದರಿಂದ ಕೋಪಗೊಂಡ ಶಾಸಕ ಹರೀಶ್‌ಗೌಡ ಸ್ಥಳದಲ್ಲಿದ್ದ ವಿಎ ಶಿವಕುಮಾರ್‌ಗೆ ನಿಮಗೆ ಕೆಲಸ ಮಾಡಲು ಏನು ರೋಗ? ರೈತರಿಂದ ಹಣ ಪಡೆದರೆ ಒಳ್ಳೆಯದಾಗುತ್ತಾ ನಿಮಗೆ? ನಿಮ್ಮ ಸಮಸ್ಯೆಯಾದರೂ ಏನು? ಎಂದು ಏರುದನಿಯಲ್ಲಿ ಪ್ರಶ್ನಿಸಿ, ಎಲ್ಲ ಕಡೆಯೂ ನಿಮ್ಮ ಬಗ್ಗೆ ದೂರುಗಳು ಇವೆಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇವರನ್ನು ವರ್ಗಾವಣೆ ಮಾಡಬೇಡಿ, ಅಮಾನತ್ತಿನಲ್ಲಿಡಲು ಹಿರಿಯ ಅಧಿಕಾರಿಗೆ ಪತ್ರ ಬರೆಯಿರಿ. ನಾನು ಮಾತನಾಡುತ್ತೇನೆಂದು ಎಂದು ತಹಸೀಲ್ದಾರ್‌ಗೆ ತಿಳಿಸಿದರು.

    ಸಭೆಯಲ್ಲಿ ಆಸ್ಪತ್ರೆ ಕಾವಲ್ ಗ್ರಾ.ಪಂ. ಅಧ್ಯಕ್ಷ ರಮೇಶ್, ಸಿಂಗರಮಾರನಹಳ್ಳಿ ಗ್ರಾ.ಪಂ. ಅಧ್ಯಕ್ಷ ದೇವರಾಜ್, ಉದ್ದೂರು ಕಾವಲ್ ಗ್ರಾ.ಪಂ. ಅಧ್ಯಕ್ಷೆ ಮುಬಾರಕ್ ಬಾನು, ಧರ್ಮಾಪುರ ಗ್ರಾ.ಪಂ. ಅಧ್ಯಕ್ಷ ಮಲ್ಲೇಶ್, ಜಿ.ಪಂ. ಮಾಜಿ ಸದಸ್ಯ ಸುರೇಂದ್ರ, ಮುಖಂಡರಾದ ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಬಸವಲಿಂಗಯ್ಯ, ಶಿವಗಾಮಿ, ರತ್ನಪುರಿ ಪ್ರಭಾಕರ್, ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ.ಮನು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts