More

    ವಿದ್ಯುತ್ ತಂತಿ ತುಂಡಾಗಿ 3 ಎಕರೆ ಕಾಫಿ ತೋಟ ಭಸ್ಮ

    ಆಲ್ದೂರು: ಹಾಂದಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮೂರು ಎಕರೆ ಕಾಫಿ ತೋಟ ಸುಟ್ಟುಹೋಗಿದೆ. ಹಾಂದಿ ಗ್ರಾಮದಲ್ಲಿ ತುಂಗಮ್ಮ ಅವರ ಎರಡು ಎಕರೆ ಅರೇಬಿಕಾ ಕಾಫಿ ತೋಟ ಹಾಗೂ ವಿಶ್ವ ಎಂಬುವರ ಒಂದು ಎಕರೆ ಕಾಫಿ ತೋಟ ಸುಟ್ಟು ಹೋಗಿದೆ. ತುಂಗಮ್ಮ ಅವರ ಕಾಫಿ ತೋಟದ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು ಸೋಮವಾರ ಸಂಜೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ತೋಟಕ್ಕೆ ಬೆಂಕಿ ಹೊತ್ತಿಕೊಂಡಿತು. ಜತೆಗೆ ಪಕ್ಕದ ವಿಶ್ವ ಅವರ ಕಾಫಿ ತೋಟಕ್ಕೂ ಬೆಂಕಿ ಆವರಿಸಿ ಸುಟ್ಟುಹೋಯಿತು. ಸೋಮವಾರ ಸಂಜೆ ಹಾಂದಿ ಗ್ರಾಮದಲ್ಲಿ ಸಂಪೂರ್ಣ ವಿದ್ಯುತ್ ನಿಲುಗಡೆಯಾಗಿತ್ತು. ಆದರೆ ಕಾಫಿ ತೋಟಕ್ಕೆ ಬೆಂಕಿ ಬಿದ್ದಿರುವ ಮಾಹಿತಿ ದೊರೆತಿಲ್ಲ. ತುಂಗಮ್ಮ ಮೇಗಳ ಹಾಂದಿ ಗ್ರಾಮದಲ್ಲಿದ್ದು ತೋಟಕ್ಕೂ ಮನೆಗೂ ಒಂದೂ ಕಿಮೀಗೂ ಹೆಚ್ಚು ದೂರವಿದೆ. ಮಂಗಳವಾರ ವಿಶ್ವ ಅವರು ಕಾಫಿ ತೋಟಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

    ಮೂರು ತಿಂಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕರೆಂಟ್ ಶಾಕ್ ಹೊಡೆದಿತ್ತು. ಈ ಕುರಿತು ಮೆಸ್ಕಾಂಗೆ ಮಾಹಿತಿ ನೀಡಿದರೂ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿಲ್ಲ. ಸ್ಥಳ ಪರಿಶೀಲಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜೀವನಕ್ಕೆ ಆಧಾರವಾದ ಕಾಫಿ ತೋಟ ಸುಟ್ಟುಹೋಗಿದೆ ಎಂದು ತೋಟದ ಮಾಲೀಕರಾದ ತುಂಗಮ್ಮ ಅಳಲು ತೋಡಿಕೊಂಡರು. ಬುಧವಾರ ಆಲ್ದೂರು ಕಂದಾಯ ಅಧಿಕಾರಿ ವೆಂಕಟೇಶ್ ಹಾಗೂ ಗ್ರಾಮ ಆಡಳಿತಾಧಿಕಾರಿ ಸಾರಿಕಾ ಸ್ಥಳ ಪರಿಶೀಲನೆ ನಡೆಸಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟುಹೋದ ಅರೇಬಿಕಾ ಕಾಫಿ ತೋಟವನ್ನು ಪರಿಶೀಲನೆ ನಡೆಸಿದ್ದೇವೆ. ವರದಿಯನ್ನು ಚಿಕ್ಕಮಗಳೂರು ತಾಲೂಕು ಕಚೇರಿಗೆ ಕಳುಹಿಸಲಾಗುವುದು ಎಂದು ವೆಂಕಟೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts